ಕರ್ನಾಟಕದಲ್ಲಿ 900 ಕೋಟಿ ರೂ. ಹೂಡಿಕೆ ಮಾಡಿದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್; 200 ಜನರಿಗೆ ಉದ್ಯೋಗ
ಶ್ರೀಲಂಕಾದ ಲೆಜೆಂಡ್ ಸ್ಪಿನ್ನರ್ ಹಾಗೂ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ತಮ್ಮ ಕ್ರಿಕೆಟ್ ನಿವೃತ್ತಿ ಬಳಿಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಈ ಮೂಲಕ ನಿರುದ್ಯೋಗಗಳಿಗೆ ಉದ್ಯೋಗ ನೀಡಲು ಮುಂದಾಗಿದ್ದಾರೆ.
ತಮ್ಮ ಉದ್ಯಮಕ್ಕೆ ಉತ್ತರ ಕರ್ನಾಟಕ ಭಾಗವನ್ನು ಆಯ್ಕೆ ಮಾಡಿಕೊಂಡಿದ್ದು, ನಿರುದ್ಯೋಗ ಸಮಸ್ಯೆ ಬಹಳ ಇದ್ದು, ಸ್ವಲ್ಪ ಮಟ್ಟಿಗೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಉದ್ಯಮ ಸ್ಥಾಪನೆಗೆ ಮುತ್ತಯ್ಯ ಮುರಳೀಧರನ್ ಅವರು ಧಾರವಾಡ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ತವರು ರಾಷ್ಟ್ರ ಶ್ರೀಲಂಕಾದಲ್ಲಿ ಈಗಾಗಲೇ ತಂಪು ಪಾನೀಯ ಉತ್ಪಾದನಾ ಘಟಕವನ್ನು ಹೊಂದಿರುವ ಮುತ್ತಯ್ಯ ಮುರಳೀಧರನ್ ಅವರು, ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲೂ ಉತ್ಪಾದನೆ ವಿಸ್ತರಿಸಲು ಯೋಜನೆ ರೂಪಿಸಿದ್ದಾರೆ.

ಮುತ್ತಯ್ಯ ಮುರಳೀಧರನ್ ಅವರ ಉದ್ಯಮಕ್ಕೆ ಕರ್ನಾಟಕ ಸರಕಾರ ಅನುಮೋದನೆ ನೀಡಿದ್ದು, ಉದ್ಯಮ ಸ್ಥಾಪನೆಗೆ ಬೇಕಾಗುವ ಜಮೀನು ಪರಿಶೀಲಿಸಲು ಮುಮ್ಮಿಗಟ್ಟಿಗೆ ಇತ್ತೀಚಿಗೆ ಮುರಳೀಧರನ್ ಭೇಟಿ ನೀಡಿದ್ದರು. ಈ ಹಿಂದೆ ಜಮೀನು ವೀಕ್ಷಣೆಗೆ ಎರಡು ಬಾರಿ ಅವರು ಭೇಟಿ ನೀಡಿದ್ದಾರೆ. ಇತ್ತೀಚಿನ ಭೇಟಿ ಸಂದರ್ಭದಲ್ಲಿ ಜಮೀನನ್ನು ಬಹುತೇಕ ಅಂತಿಮಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ (ಎಫ್‌ಎಂಸಿಜಿ) ಕ್ಲಸ್ಟರ್ ಅಡಿಯಲ್ಲಿ ಸುಮಾರು 900 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಲು ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ನಿರ್ಧರಿಸಿದ್ದಾರೆ.
"ಮೊದಲ ಹಂತದಲ್ಲಿ 256.30 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಈ ಮೂಲಕ ಸ್ಥಳೀಯ 200 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ," ಎಂದು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ ತಿಳಿಸಿದ್ದಾರೆ.

"ಸಿಲೋನ್ ಬೆವರೇಜಸ್ ಕ್ಯಾನ್ ಪ್ರೈ.ಲಿ. ಹೆಸರಿನಲ್ಲಿ ತಂಪು ಪಾನೀಯ ಉತ್ಪಾದನಾ ಘಟಕ ಆರಂಭಿಸಲಿದ್ದು, ಮೊದಲ ಹಂತದಲ್ಲಿ 15 ಎಕರೆ ಭೂಮಿ ಒದಗಿಸಲಾಗುತ್ತಿದೆ. ಒಟ್ಟು ಮೂರು ಹಂತಗಳಲ್ಲಿ ಉದ್ಯಮ ವಿಸ್ತರಿಸಲು ಈ ಕಂಪನಿ ಯೋಜಿಸಿದೆ. ಇದಕ್ಕಾಗಿ 32ರಿಂದ 36 ಎಕರೆ ಭೂಮಿಗೆ ಬೇಡಿಕೆ ಸಲ್ಲಿಸಿದ್ದಾರೆ. ಮುಮ್ಮಿಗಟ್ಟಿಯಲ್ಲಿ ಭೂಮಿ ಒದಗಿಸಲಾಗುತ್ತಿದೆ," ಎಂದು ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿ ಅಧಿಕಾರಿ ಬಿ.ಟಿ ಪಾಟೀಲ ಮಾಹಿತಿ ನೀಡಿದರು.
"ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಕಳೆದ ಶನಿವಾರ ಮುಮ್ಮಿಗಟ್ಟಿ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ, ಜಮೀನು ಪರಿಶೀಲಿಸಿದ್ದಾರೆ. ರಾಜ್ಯ ಸರ್ಕಾರದ ಹಂತದಲ್ಲಿ ಉದ್ಯಮ ಆರಂಭಕ್ಕೆ ಅನುಮೋದನೆ ದೊರೆತಿದ್ದು, ಮುಂಬರುವ ಎರಡು ಮೂರು ತಿಂಗಳಲ್ಲಿ ಪ್ರಾಥಮಿಕ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ," ಎಂದು ಬಿ.ಟಿ ಪಾಟೀಲ ಹೇಳಿದರು.
ರಿಟೇಲ್ ಉದ್ಯಮದಲ್ಲಿ ಹೆಸರು ಮಾಡಿರುವ ದೇಶದ ಅತಿ ದೊಡ್ಡ ಕಾರ್ಪೋರೇಟ್ ಕಂಪನಿಯ ಮಾರ್ಕೆಟಿಂಗ್ ಸಹಭಾಗಿತ್ವದಲ್ಲಿ ಮುತ್ತಯ್ಯ ಮುರಳೀಧರನ್ ಈ ಘಟಕ ಆರಂಭಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಲೋನ್ ಬೆವರೇಜಸ್ ಕಂಪನಿಗೆ ರಾಜ್ಯ ಸರಕಾರವು ಜನವರಿ 24, 2023ರಂದೇ ಅನುಮೋದನೆ ನೀಡಿದೆ.
ಮುಮ್ಮಿಗಟ್ಟಿ ಕೈಗಾರಿಕೆ ಪ್ರದೇಶದಲ್ಲಿ ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ತಂಪು ಪಾನೀಯ ಘಟಕ ಸ್ಥಾಪಿಸಲು ಉದ್ದೇಶಿಸಿದ್ದಾರೆ. ಅದಕ್ಕಾಗಿ ಜಮೀನು ಪರಿಶೀಲಿಸಲು ಆಗಮಿಸಿದ್ದರು. ಮೂರು ಹಂತದಲ್ಲಿ ಒಟ್ಟು 900 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡುವ ನಿರೀಕ್ಷೆ ಇದೆ. ಶೀಘ್ರ ಕೆಲಸ ಪ್ರಾರಂಭಿಸುವುದಾಗಿ ಮುರಳೀಧರನ್ ಅವರು ತಿಳಿಸಿದ್ದಾರೆ ಎಂದು ಕೆಐಎಡಿಬಿ ಧಾರವಾಡದ ಅಭಿವೃದ್ಧಿ ಅಧಿಕಾರಿ ಬಿ.ಟಿ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications