ನಮ್ಮೂರ ಪ್ರತಿಭೆ: ಹಲವು ಕ್ರೀಡೆಗಳಲ್ಲಿ ಹತ್ತಾರು ಪದಕ ಗೆದ್ದ ಹೊನ್ನಾವರದ ಪ್ರತಿಭೆ ಸಾಂಡ್ರಾ ಪಿಂಟೊ

ಬದಲಾಗುತ್ತಿರುವ ಕಾಲದಲ್ಲಿ ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಬರೀ ಪುರುಷರಿಗೆ ಮಾತ್ರವೆನಿಸಿದ್ದ ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದಾರೆ.
ಶಿಕ್ಷಣ ಮತ್ತು ಆಧುನಿಕತೆ ಬೆಳೆದಂತೆ ಮಹಿಳೆಯರು ಚಿಕ್ಕ ವಯಸ್ಸಿನಲ್ಲಿರುವಾಗಲೇ ಕ್ರೀಡಾ ಕ್ಷೇತ್ರಕ್ಕೆ ಸೇರಿಕೊಳ್ಳುತ್ತಿದ್ದಾರೆ. ಇದರಿಂದ ಇಂದು ಕಾಮನ್‌ವೆಲ್ತ್, ಒಲಿಂಪಿಕ್, ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮಹಿಳಾ ಕ್ರೀಡಾಪಟುಗಳನ್ನು ನೋಡಬಹುದು. ಕ್ರೀಡಾ ಕ್ಷೇತ್ರದ ಎಲ್ಲ ಆಟಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ದೈಹಿಕ ಕ್ಷಮತೆ ಹೊಂದಿರುವ ಹಲವು ಕ್ರೀಡೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಈ ಯುವತಿ ಭಾಗವಹಿಸಿದ್ದಾಳೆ.
ಈ ಯುವತಿ ಎಲ್ಲ ಕ್ರೀಡೆಗಳಲ್ಲೂ ಭಾಗವಹಿಸಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ. ಪ್ರತಿಯೊಂದರಲ್ಲೂ ಭಾಗವಹಿಸಿ ಹತ್ತಾರು ಪದಕಗಳನ್ನು ಗೆದ್ದಿರುವ ಈಕೆಯ ಹೆಸರು ಸಾಂಡ್ರಾ ಪಿಂಟೊ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಮಾವಿನಕುರ್ವಾ ಗ್ರಾಮದವರು.
ಇನ್ನು ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಎಂ.ಕಾಂ ವ್ಯಾಸಂಗ ಮಾಡಿರುವ ಸಾಂಡ್ರಾ ಪಿಂಟೊ, ಶೈಕ್ಷಣಿಕವಾಗಿಯೂ ಪ್ರತಿಭಾವಂತರಾಗಿದ್ದರು. ಐದನೇ ತರಗತಿಯಿಂದ ಆರಂಭವಾದ ಸಾಂಡ್ರಾ ಕ್ರೀಡಾ ಜೀವನಕ್ಕೆ ತರಬೇತುದಾರರಾಗಿ ಬೆಂಬಲ ನೀಡಿದ್ದು, ಹೊನ್ನಾವರ ಎಸ್‌ಡಿಎಂ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಆರ್.ಕೆ.ಮೇಸ್ತಾ.

ಗ್ರಾಮೀಣ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ
"ಗ್ರಾಮೀಣ ಪ್ರದೇಶದವಳಾದ ನನಗೆ, ಚಿಕ್ಕಂದಿನಿಂದಲೂ ಗ್ರಾಮೀಣ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿಯಿತ್ತು. ನನ್ನ ಕ್ರೀಡಾ ಜೀವನ, ಐದನೇ ತರಗತಿಯಲ್ಲಿ ಶಾಲಾಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಆರಂಭವಾಯಿತು. ಅಲ್ಲಿಂದ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳ ಹಾದಿ ಹಿಡಿದಿದ್ದು ಪಿಯುಸಿಯಲ್ಲಿ,'' ಎಂದು ಸಾಂಡ್ರಾ ಪಿಂಟೊ ಹೇಳಿದ್ದಾರೆ.
"ಹೈಜಂಪ್, ಲಾಂಗ್ ಜಂಪ್, ಟ್ರಿಪಲ್ ಜಂಪ್, ಪೋಲ್ ವಾಲ್ಟ್, ಬ್ಯಾಡ್ಮಿಂಟನ್, ಕಬಡ್ಡಿ, ವಾಲಿಬಾಲ್ ಹೀಗೆ ಹಲವು ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದೇನೆ. ಮನೆಯವರಿಂದಲೂ ಸಿಕ್ಕ ಪ್ರೋತ್ಸಾಹದಿಂದ ಇಲ್ಲಿಯವರೆಗೆ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ತೋರಲು ಸಾಧ್ಯವಾಯಿತು. ಆದರೆ, ಇದೀಗ ಎಂ.ಕಾಂ ಪೂರ್ಣಗೊಂಡು ಉದ್ಯೋಗ ಹುಡುಕುವ ಹೊಸ್ತಿಲಲ್ಲಿ ಇದ್ದೇನೆ. ಹೀಗಾಗಿ, ಈ ವರ್ಷ ಕ್ರೀಡೆಗೆ ವಿದಾಯ ಹೇಳುತ್ತೇನೆ,'' ಎಂದು ನಗುತ್ತಲೇ ಹೇಳಿದರು.

ಯೂನಿವರ್ಸಿಟಿ ಬ್ಲೂ ಆಗಿ ಮಿಂಚಿದ ಸಾಂಡ್ರಾ
ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಏಳು ಚಿನ್ನ, ಏಳು ಬೆಳ್ಳಿ, ಎರಡು ಕಂಚಿನ ಪದಕಗಳನ್ನು ಜಯಿಸಿರುವ ಸಾಂಡ್ರಾ ಪಿಂಟೊ, ಎರಡು ಬಾರಿ 'ಯೂನಿವರ್ಸಿಟಿ ಬ್ಲೂ' ಆಗಿ ಮಿಂಚಿದ್ದಾರೆ.
ಪಿಯುಸಿಯಲ್ಲಿದ್ದಾಗ ಡಿಸ್ಕಸ್ ಥ್ರೋನಲ್ಲಿ ರಾಜ್ಯ ಮಟ್ಟದಲ್ಲಿ ಟಾಪ್ 8ರಲ್ಲಿ ಸ್ಥಾನ ಗಳಿಸಿದ್ದರು. ಅದೇ ವರ್ಷ ಪೋಲ್ ವಾಲ್ಟ್, ಜಿಲ್ಲಾ ಮಟ್ಟದ ಜಾವೆಲಿನ್ ಥ್ರೋನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡು ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಬಿ.ಕಾಂ ಪ್ರಥಮ ವರ್ಷದಲ್ಲಿ ಹೈಜಂಪ್, ಜಾವೆಲಿನ್ ಥ್ರೋ ಹಾಗೂ 400 ಮೀಟರ್ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ವರ್ಷದಲ್ಲಿ 400 ಮೀಟರ್ ಹರ್ಡಲ್ಸ್, ಹೈಜಂಪ್‌ನಲ್ಲಿ ಚಿನ್ನ, ರಿಲೇಯಲ್ಲಿ ಬೆಳ್ಳಿ, ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದು ತಾವು ಬಹುಮುಖ ಪ್ರತಿಭೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

‘ಸೋಷಿಯಲ್ ಮೀಡಿಯಾದಿಂದ ದೂರ’
ಬಿ.ಕಾಂ ಅಂತಿಮ ವರ್ಷದಲ್ಲಿದ್ದಾಗ ಟ್ರಿಪಲ್ ಜಂಪ್, ಹೈಜಂಪ್‌ನಲ್ಲಿ ಚಿನ್ನ, ರಿಲೇ, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ, ಎಂ.ಕಾಂನ ಪ್ರಥಮ ವರ್ಷದಲ್ಲಿದ್ದಾಗ ಟ್ರಿಪಲ್ ಜಂಪ್, ಹೈಜಂಪ್‌ನಲ್ಲಿ ಚಿನ್ನ, ವಾಲಿಬಾಲ್, ಕಬಡ್ಡಿಯಲ್ಲಿ ಕರ್ನಾಟಕ 'ಯೂನಿವರ್ಸಿಟಿ ಬ್ಲೂ',
2019ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಕಂಚು, ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಈ ಕಾಲದ ಯುವಕ- ಯುವತಿಯರು ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲೇ ಕಾಲ ಹರಣ ಮಾಡುತ್ತಾರೆ. ಆದರೆ, ಸಾಂಡ್ರಾ ಪಿಂಟೊ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದಾರೆ. ಇಮೇಲ್‌ವೊಂದನ್ನು ಬಿಟ್ಟರೆ ಬೇರಾವ ಸಾಮಾಜಿಕ ಜಾಲತಾಣಗಳ ಖಾತೆಯನ್ನೂ ಅವರು ಹೊಂದಿಲ್ಲ. 'ಉದ್ಯೋಗ ಸಿಗುವವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಇರಲು ಬಯಸುವುದಿಲ್ಲ' ಎನ್ನುತ್ತಾರೆ ಸಾಂಡ್ರಾ ಪಿಂಟೊ ಅಂದೇ ನಿರ್ಧಾರ ಕೈಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications