2024ರ ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸದ್ಯ ವಿಶ್ರಾಂತಿ ಮೂಡ್‌ನಲ್ಲಿದ್ದಾರೆ. ಈಗಾಗಲೇ ಟಿ20 ಕ್ರಿಕೆಟ್‌ನಿಂದ ಘೋಷಿಸಿರುವ ಹಿಟ್‌ಮ್ಯಾನ್ ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಯಿಂದಲೂ ವಿರಾಮ ತೆಗೆದುಕೊಳ್ಳಲಿದ್ದಾರೆ.
2024ರ ಟಿ20 ವಿಶ್ವಕಪ್ ಅಭಿಯಾನದ ನಂತರ ಆರಂಭವಾಗಿರುವ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶುಭ್ಮನ್ ಗಿಲ್ ನಾಯಕತ್ವದ ಯುವ ಭಾರತ ತಂಡ ಆಡುತ್ತಿದೆ. ಇನ್ನು ರೋಹಿತ್ ಶರ್ಮಾ ಅವರು ಟೆನ್ನಿಸ್ ಟೂರ್ನಿ ವಿಂಬಲ್ಡನ್ ವೀಕ್ಷಿಸಲು ಲಂಡನ್‌ನಲ್ಲಿದ್ದಾರೆ.

ಸದ್ಯ ನಡೆಯುತ್ತಿರುವ ಋತುವಿನ ಸೆಮಿಫೈನಲ್ ಪಂದ್ಯಗಳಿಗಾಗಿ ವಿಂಬಲ್ಡನ್ ಸೆಂಟರ್ ಕೋರ್ಟ್ ಅಲಂಕರಿಸಿದ ಭಾರತೀಯ ಟಿ20 ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ ಅವರು ಕನಸಿನ ಟೆನ್ನಿಸ್‌ನಲ್ಲಿ ಡಬಲ್ಸ್ ಆಡಲು ಬಯಸುವ ಭಾರತೀಯ ತಂಡದ ಸಹ ಆಟಗಾರನನ್ನು ಆಯ್ಕೆ ಮಾಡಿಕೊಂಡರು.
ತಮ್ಮ ದೀರ್ಘ ಕಾಲದ ಸಹ ಆಟಗಾರ ಹಾಗೂ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡದೇ, ಭಾರತ ತಂಡದಿಂದ ಹೊರಗುಳಿದಿರುವ ಶ್ರೇಯಸ್ ಅಯ್ಯರ್ ಅವರ ಹೆಸರನ್ನು ಬಹಿರಂಗಪಡಿಸಿದರು.
ಶುಕ್ರವಾರ, ಜುಲೈ 12ರಂದು ರೋಹಿತ್ ಶರ್ಮಾ ವಿಂಬಲ್ಡನ್‌ನ ಪ್ರಸಿದ್ಧ ರಾಯಲ್ ಬಾಕ್ಸ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಕಾರ್ಲೋಸ್ ಅಲ್ಕರಾಝ್ ಮೊದಲ ಸೆಮಿಫೈನಲ್‌ನಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸಿದರೆ, ನಂತರ ನೊವಾಕ್ ಜೊಕೊವಿಕ್ ಅವರು ಲೊರೆಂಜೊ ಮುಸೆಟ್ಟಿ ಅವರನ್ನು ಎದುರಿಸಿದರು.

ವಿಂಬಲ್ಡನ್ ಮಾಧ್ಯಮದೊಂದಿಗೆ ಮಾತನಾಡಿದ ರೋಹಿತ್ ಶರ್ಮಾಗೆ ಯಾವ ಕ್ರಿಕೆಟಿಗರು ಅತ್ಯುತ್ತಮ ಡಬಲ್ಸ್ ಪಾಲುದಾರರಾಗುತ್ತಾರೆ ಎಂದು ಪ್ರಶ್ನಿಸಲಾಯಿತು. ಈ ವೇಳೆ ಭಾರತದ ಕ್ರಿಕೆಟಿಗರು ಟೆನ್ನಿಸ್‌ನಲ್ಲಿ ಯಾರೂ ಶ್ರೇಷ್ಠರಲ್ಲ ಮತ್ತು ಸಿಂಗಲ್ಸ್ ಆಡಲು ಆದ್ಯತೆ ನೀಡುವುದಾಗಿ ಎಂದು ಹೇಳಿದರು. ಆದರೆ ನಂತರ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿದರು.
"ನಾನು ಸಿಂಗಲ್ಸ್ ಆಡಲು ಬಯಸುತ್ತೇನೆ, ಏಕೆಂದರೆ ನಮ್ಮ ತಂಡದ ಆಟಗಾರರು ಯಾರೂ ಟೆನ್ನಿಸ್‌ನಲ್ಲಿ ಶ್ರೇಷ್ಠರಲ್ಲ. ಆದರೆ ನಾನು ಒಬ್ಬರನ್ನು ಆಯ್ಕೆ ಮಾಡಬೇಕಾದರೆ, ನಾನು ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡುತ್ತೇನೆ," ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಿಳಿಸಿದರು.
ವಿಂಬಲ್ಡನ್ ಪಂದ್ಯಾವಳಿಯ ಮೊದಲ ವಾರಾಂತ್ಯದಲ್ಲಿ ಭಾರತದ ಮಾಜಿ ಕ್ರಿಕೆಟ್ ತಾರೆಗಳಾದ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ ಹಾಗೂ ಇಂಗ್ಲೆಂಟ್‌ನ ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ಅವರಂತಹ ಇತರ ಕ್ರಿಕೆಟಿಗರು ವಿಂಬಲ್ಡನ್‌ನ ಪ್ರಸಿದ್ಧ ಸೆಂಟರ್ ಕೋರ್ಟ್‌ನಲ್ಲಿ ಹಿಂದಿನ ಸುತ್ತುಗಳಲ್ಲಿ ತಮ್ಮ ಉಪಸ್ಥಿತಿ ಹೊಂದಿದ್ದರು.