ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿದ್ದ ಭಾರತ ಸದ್ಯ ಎರಡನೇ ಸ್ಥಾನಕ್ಕೆ ಕುಸಿದಿದೆ.
ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನದ ವಿರುದ್ಧ 1 ವಿಕೆಟ್‌ನ ರೋಚಕ ಗೆಲುವು ಸಾಧಿಸಿತು. ಈ ಮೂಲಕ 1999ರ ನಂತರ ಐಸಿಸಿ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಪಾಕಿಸ್ತಾನವನ್ನು ಸೋಲಿಸುವ ಮೂಲಕ ದಾಖಲೆ ಬರೆಯಿತು.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 47.2 ಓವರ್ ಗಳಲ್ಲಿ 270 ರನ್ ಗಳಿಗೆ ಆಲೌಟ್ ಆಯಿತು. ಈ ಬಾರಿ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅವಕಾಶ ಪಡೆದ ಸ್ಪಿನ್ನರ್ ತಬ್ರೈಜ್ ಶಂಸಿ 4 ವಿಕೆಟ್ ಪಡೆದು ಮಿಂಚಿದರು, ಮಾರ್ಕೋ ಯಾನ್ಸನ್ 3 ವಿಕೆಟ್ ಪಡೆದರು, ಪಾಕಿಸ್ತಾನ ಪರ ನಾಯಕ ಬಾಬರ್ ಅಜಂ 50 ರನ್ ಗಳಿಸಿದರೆ, ಸೌದ್ ಶಕೀಲ್ 52, ಶದಾಬ್ ಖಾನ್ 42 ರನ್ ಗಳಿಸಿ ಸವಾಲಿನ ಮೊತ್ತ ಕಲೆ ಹಾಕಲು ಕಾರಣವಾದರು.
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು, ಐಡೆನ್ ಮಾರ್ಕ್ರಾಂ ಮತ್ತು ಮಾರ್ಕೊ ಯಾನ್ಸೆನ್ ಸುಲಭ ಗೆಲುವು ತಂದುಕೊಡುವ ಉತ್ಸಾಹದಲ್ಲಿದ್ದರು.
ಶಹೀನ್ ಅಫ್ರಿದಿ ಯಾನ್ಸೆನ್ ವಿಕೆಟ್ ಪಡೆದರೆ, ಉಸಾಮಾ ಮೀರ್ 91 ರನ್ ಗಳಿಸಿದ್ದ ಐಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ಪಾಕಿಸ್ತಾನದ ಕಡೆಗೆ ತಿರುಗಿಸಿದರು. 260 ರನ್‌ಗಳಾಗಿದ್ದಾಗ 9ನೇ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು, ಆದರೆ ಕೇಶವ್ ಮಹರಾಜ್ ಮತ್ತು ಶಂಸಿ ಎಚ್ಚರಿಕೆಯಿಂದ ಒಂದೊಂದೆ ರನ್ ಕಲೆ ಹಾಕುವ ಮೂಲಕ ದಕ್ಷಿಣ ಆಫ್ರಿಕಾಗೆ ರೋಚಕ ಗೆಲುವು ತಂದುಕೊಟ್ಟರು.
ವಿಶ್ವಕಪ್ ಅಂಕಪಟ್ಟಿ
ಈ ರೋಚಕ ಗೆಲುವಿನ ನಂತರ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಇದುವರೆಗೂ 6 ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾ 5 ಪಂದ್ಯಗಳಲ್ಲಿ ಗೆದ್ದ ಒಂದು ಪಂದ್ಯದಲ್ಲಿ ಸೋಲುವ ಮೂಲಕ 10 ಪಾಯಿಂಟ್ಸ್ ಹೊಂದಿದೆ.
ಉತ್ತಮ ರನ್ ರೇಟ್ ಹೊಂದಿದ್ದ ಕಾರಣ ಭಾರತ ತಂಡವನ್ನು ಮೀರಿ ಮೊದಲ ಸ್ಥಾನಕ್ಕೇರಿದೆ, ಇನ್ನು ಭಾರತ ಆಡಿರುವ 5 ಪಂದ್ಯಗಳನ್ನು ಗೆದ್ದು 10 ಅಂಕಗಳನ್ನು ಹೊಂದಿದ್ದು, ದಕ್ಷಿಣ ಆಫ್ರಿಕಾಗಿಂತ ರನ್ ರೇಟ್ ಕಡಿಮೆ ಇರುವ ಕಾರಣ ಎರಡನೇ ಸ್ಥಾನಕ್ಕೆ ಕುಸಿದಿದೆ.
ನ್ಯೂಜಿಲೆಂಡ್ ಆಡಿರುವ 5 ಪಂದ್ಯಗಳಲ್ಲಿ 4 ಗೆದ್ದು, 1 ಪಂದ್ಯ ಸೋತಿದ್ದು 8 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇನ್ನು ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳಲ್ಲಿ ಸೋತರೂ ನಂತರ ಸತತವಾಗಿ ಮೂರು ಪಂದ್ಯಗಳನ್ನು ಗೆದ್ದು ನಾಲ್ಕನೇ ಸ್ಥಾನದಲ್ಲಿದೆ.
ಇಂಗ್ಲೆಂಡ್ ತಂಡವನ್ನು ಸೋಲಿಸಿದ ಬಳಿಕ ಶ್ರೀಲಂಕಾ 5ನೇ ಸ್ಥಾನಕ್ಕೇರಿದೆ, ಈವರೆಗೂ ಆಡಿರುವ 5 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು 3 ಸೋಲು ಕಂಡಿದೆ. ಪಾಕಿಸ್ತಾನ 6 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, 4 ಪಂದ್ಯಗಳನ್ನು ಸೋಲುವ ಮೂಲಕ 4 ಪಾಯಿಂಟ್‌ಗಳೊಂದಿಗೆ 6ನೇ ಸ್ಥಾನದಲ್ಲಿದೆ.
ಅಫ್ಘಾನಿಸ್ತಾನ 7ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 8 ನೇ ಸ್ಥಾನದಲ್ಲಿದೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ 5 ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಮಾತ್ರ ಗೆದ್ದಿದ್ದು 2 ಅಂಕಗಳೊಂದಿಗೆ 9 ನೇ ಸ್ಥಾನಕ್ಕೆ ಕುಸಿದಿದ್ದು, ನೆದರ್ಲ್ಯಾಂಡ್ಸ್ ತಂಡ 10ನೇ ಸ್ಥಾನದಲ್ಲಿದೆ.