ಇದೇ ಜನವರಿ 22ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ರಾಮ ಮಂದಿರ ಉದ್ಘಾಟನೆ ನೆರವೇರಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಪ್ರಾಣ ಪ್ರತಿಷ್ಠಾಪನೆ ಕಾರ್ಯದ ನೇತೃತ್ವ ವಹಿಸಲಿದ್ದಾರೆ. ಈ ಧಾರ್ಮಿಕ್ ಸಮಾರಂಭಕ್ಕೆ ಹಲವು ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ ಮಾಂತ್ರಿಕ ದಾನಿಶ್ ಕನೇರಿಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ತಮ್ಮ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ, ದಾನಿಶ್ ಕನೇರಿಯಾ ಅವರು ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯವಾದ ದೇವಾಲಯದ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡರು, ಭವ್ಯವಾದ ಮಂದಿರವು ಸಿದ್ಧವಾಗಿದೆ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕೇವಲ ಎಂಟು ದಿನಗಳು ಮಾತ್ರ ಇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಹೆಮ್ಮೆಯಿಂದ 'ಜಯ-ಜಯ ಶ್ರೀರಾಮ್' ಎಂದು ಉದ್ಗರಿಸಿದ್ದಾರೆ ಮತ್ತು ಭಗವಾನ್ ಶ್ರೀರಾಮನ ಚಿತ್ರ ಮತ್ತು ದೇವಸ್ಥಾನ ಹಿನ್ನೆಲೆಯಲ್ಲಿ ಅಲಂಕರಿಸಿದ ಧ್ವಜವನ್ನು ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ, ದಾನಿಶ್ ಕನೇರಿಯಾ ಅವರು ಕೇಸರಿ ಧ್ವಜದೊಂದಿಗೆ ಎತ್ತರವಾಗಿ ನಿಂತಿರುವಂತೆ ಕಂಡುಬರುತ್ತದೆ ಹಾಗೂ ಅದರಲ್ಲಿ ಭಗವಾನ್ ರಾಮ ಮತ್ತು ದೇವಾಲಯವನ್ನು ಕಾಣಬಹುದಾಗಿದೆ. ಪಾಕಿಸ್ತಾನದಂತಹ ದೇಶದಲ್ಲಿ ಹಿಂದೂ ಧರ್ಮ ಹಾಗೂ ದೇವರ ಬಗೆಗಿನ ಒಲವು ವ್ಯಕ್ತಪಡಿಸುವ ಅವ ಧೈರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಎಕ್ಸ್ (ಟ್ವಿಟ್ಟರ್) ಬಳಕೆದಾರರು ಉತ್ಸಾಹದಿಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಧರ್ಮದ ಅಭಿವ್ಯಕ್ತಿ ಹಂಚಿಕೊಳ್ಳುವುದನ್ನು ಶ್ಲಾಘಿಸಿದ್ದಾರೆ.
ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ದಾನಿಶ್ ಕನೇರಿಯಾ, ಪಾಕಿಸ್ತಾನಿ ಹಿಂದೂ. 2000ರಿಂದ 2010ರವರೆಗೆ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಅವರು, ಪ್ರಮುಖ ಸ್ಪಿನ್ ಬೌಲರ್ ಆಗಿ ಗುರುತಿಸಿಕೊಂಡಿದ್ದರು.
ಕೆಲವು ಸಹ ಆಟಗಾರರಿಂದ ಧಾರ್ಮಿಕ ತಾರತಮ್ಯ ಮತ್ತು ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಡವನ್ನು ಎದುರಿಸುತ್ತಿದ್ದರೂ, ದಾನಿಶ್ ಕನೇರಿಯಾ ಅದನ್ನು ಎದುರಿಸಿ ನಿಂತರು. ಪಾಕಿಸ್ತಾನ ಕ್ರಿಕೆಟ್ ತಂಡಕ್ಕಾಗಿ ಆಡಿದ ಎರಡನೇ ಹಿಂದೂ ಎನಿಸಿಕೊಂಡರು. ಅವರ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ 250ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಪಾಕಿಸ್ತಾನ ಕ್ರಿಕೆಟ್ ಸಮುದಾಯದೊಳಗಿನ ತಾರತಮ್ಯದ ಬಗ್ಗೆ ಧ್ವನಿಯೆತ್ತಿದರು. ಅವರು ಧರ್ಮದ ಕಾರಣದಿಂದಾಗಿ ತಮ್ಮ ತಂಡದಲ್ಲಿ ಎದುರಿಸಿದ ಸವಾಲುಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಮಾಜಿ ಸಹ ಆಟಗಾರ ಶೋಯೆಬ್ ಅಖ್ತರ್ ಕೂಡ ದಾನಿಶ್ ಕನೇರಿಯಾ ಅನುಭವಿಸಿದ ದಬ್ಬಾಳಿಕೆಯನ್ನು ಒಪ್ಪಿಕೊಂಡಿದ್ದಾರೆ. ತನ್ನ ಹಿಂದೂ ಧರ್ಮದ ನಂಬಿಕೆಗೆ ಕ್ರಿಕೆಟಿಗನ ಅಚಲವಾದ ಬದ್ಧತೆ ಮತ್ತು ರಾಮ ಮಂದಿರ ಉದ್ಘಾಟನೆಗೆ ಅವರು ವ್ಯಕ್ತಪಡಿಸುವ ಸಂತೋಷವು ದೃಢತೆಯ ಗೆಲುವನ್ನು ಸಂಕೇತಿಸುತ್ತದೆ.
ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರ ಸಮರ್ಥನೆಯು ಕ್ರಿಕೆಟ್‌ನ ಆಚೆಗೂ ವಿಸ್ತರಿಸುತ್ತದೆ. ಏಕೆಂದರೆ ತಾರತಮ್ಯದ ವಿರುದ್ಧ ನಿರಂತರವಾಗಿ ಮಾತನಾಡುತ್ತಾರೆ. ಇತ್ತೀಚೆಗೆ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ, ಅವರು ಲಕ್ಷದ್ವೀಪಗಳನ್ನು ಬೆಂಬಲಿಸುವ ಮೂಲಕ ಭಾರತದೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು.
ಟ್ವೀಟ್‌ನಲ್ಲಿ, ಅವರು ಬೆಂಕಿಯ ಎಮೋಜಿಯೊಂದಿಗೆ 'ಲಕ್ಷದ್ವೀಪ್' ಎಂದು ಬರೆದುಕೊಂಡರು ಮತ್ತು ಅಶಾಂತಿಯ ಸಮಯದಲ್ಲಿ ಭಾರತ ದೇಶಕ್ಕೆ ತಮ್ಮ ಬೆಂಬಲ ಪ್ರದರ್ಶಿಸಿದರು.