ಪಾಕಿಸ್ತಾನದ ಸ್ಟಾರ್ ಸ್ನೂಕರ್ ಆಟಗಾರ ಹಾಗೂ ಮಾಜಿ ಏಷ್ಯನ್ ಅಂಡರ್-21 ಬೆಳ್ಳಿ ಪದಕ ವಿಜೇತ ಮಜೀದ್ ಅಲಿ ಅವರು ಗುರುವಾರ, ಜೂನ್ 29ರಂದು ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಬಳಿಯ ತನ್ನ ತವರೂರಾದ ಸಾಮುಂದ್ರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
28 ವರ್ಷದ ಮಜೀದ್ ಅಲಿ ಆಟದ ದಿನಗಳಿಂದಲೂ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಮರ ಕಡಿಯುವ ಯಂತ್ರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಜೀದ್ ಅಲಿ ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನ ದೇಶವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರನಾಗಿದ್ದರು. ಅಂತಾರಾಷ್ಟ್ರೀಯ ಸ್ನೂಕರ್ ಆಟಗಾರ ಮುಹಮ್ಮದ್ ಬಿಲಾಲ್ ಅವರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ ನಂತರ, ಒಂದು ತಿಂಗಳ ಅಂತರದಲ್ಲಿ ಸಾವನ್ನಪ್ಪಿದ ಎರಡನೇ ಸ್ನೂಕರ್ ಆಟಗಾರರಾಗಿದ್ದಾರೆ.
ಹದಿಹರೆಯದ ವಯಸ್ಸಿನಿಂದಲೂ ಮಜೀದ್ ಅಲಿ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಮತ್ತೊಮ್ಮೆ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಸಹೋದರ ಉಮರ್ ಹೇಳಿದರು.
"ಇದು ನಮಗೆ ಭಯಾನಕ ಸಂಗತಿಯಾಗಿದೆ, ಅವನು ತನ್ನ ಪ್ರಾಣವನ್ನು ತೆಗೆದುಕೊಳ್ಳುತ್ತಾನೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ," ಎಂದು ಮಜೀದ್ ಅಲಿ ಅವರ ಸಹೋದರ ಉಮರ್ ಅಲಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪಾಕಿಸ್ತಾನ್ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಅಧ್ಯಕ್ಷ ಅಲಂಗೀರ್ ಶೇಖ್ ಅವರು ಮಜೀದ್ ಅಲಿ ಸಾವಿನಿಂದ ಇಡೀ ಸ್ನೂಕರ್ ಸಮುದಾಯ ದುಃಖಿತವಾಗಿದೆ ಮತ್ತು ಮಜೀದ್‌ಗೆ ಯಾವುದೇ ಹಣಕಾಸಿನ ಸಮಸ್ಯೆಗಳು ಇರಲಿಲ್ಲ ಎಂದು ಹೇಳಿದರು.
"ಮಜೀದ್ ಅಲಿ ತುಂಬಾ ಪ್ರತಿಭಾವಂತ ಆಟಗಾರನಾಗಿದ್ದರು ಮತ್ತು ಇನ್ನೂ ಚಿಕ್ಕವರಾಗಿದ್ದರು. ಪಾಕಿಸ್ತಾನಕ್ಕೆ ಪ್ರಶಸ್ತಿಗಳನ್ನು ತರಲು ನಾವು ಅವರಿಂದ ತುಂಬಾ ನಿರೀಕ್ಷೆ ಮಾಡಿದ್ದೆವು," ಎಂದು ಇತರ ಆಟಗಾರರು ಮತ್ತು ಅವರ ಸಹ ಆಟಗಾರರಿಗೆ ಅಲಂಗೀರ್ ಶೇಖ್ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ.
ಮೊಹಮ್ಮದ್ ಯೂಸುಫ್ ಮತ್ತು ಮೊಹಮ್ಮದ್ ಆಸಿಫ್ ಅವರಂತಹ ಸ್ಟಾರ್‌ಗಳು ವಿಶ್ವ ಮತ್ತು ಏಷ್ಯನ್ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದ ಬಳಿಕ, ಕೆಲವು ಆಟಗಾರರು ವೃತ್ತಿಪರ ಸ್ನೂಕರ್ ಸರ್ಕ್ಯೂಟ್‌ಗೆ ಪ್ರವೇಶಿಸಿದ್ದರು.