ಚೆಸ್ ಲೋಕದಲ್ಲಿ ಹೊಸ ಧ್ರುವತಾರೆಯ ಉದಯ: ದಿಗ್ಗಜರನ್ನೇ ಹಿಮ್ಮೆಟ್ಟಿಸಿದ ಪೋರ!: ಯಾರು ಈ ಪ್ರಜ್ಞಾನಂದ?
ಹೌದು.. ಚೆಸ್ ಲೋಕದಲ್ಲಿ ಹೊಸ ಧ್ರುವತಾರೆಯೊಂದರ ಉದಯವಾಗಿದೆ. ಜಾಗತಿಕ ಮಟ್ಟದಲ್ಲಿ ಚೆಸ್‌ನಲ್ಲಿ ಭಾರತದ ಹೊಸ ಶಕೆ ಆರಂಭವಾಗಿದೆ. ಭಾರತ ಮಾತ್ರವಲ್ಲ, ಜಗತ್ತಿನ ಕೋಟ್ಯಂತರ ಜನರು 18ರ ಹರೆಯದ ಹುಡುಗನೊಬ್ಬ ಚೆಸ್ ಲೋಕದ ದಿಗ್ಗಜರನ್ನು ಹಿಮ್ಮೆಟ್ಟಿಸುತ್ತಿರುವುದನ್ನು ನೋಡಿ ಅಚ್ಚರಿಪಡುವಂತಾಗಿದೆ. ಇದೆಲ್ಲದಕ್ಕೂ ಕಾರಣ ಪ್ರಜ್ಞಾನಂದ..
ಕ್ರೀಡಾಭಿಮಾನಿಗಳು ಈ ಹೆಸರನ್ನು ಕಳೆದ ಕೆಲ ವರ್ಷಗಳಿಂದ ಆಗಾಗ ಕೇಳುತ್ತಿದ್ದಾರೆ. ಹದಿಹರೆಯದಲ್ಲಿಯೇ ಚೆಸ್ ಲೋಕದಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಾ ಕ್ರೀಡಾಸಕ್ತರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಈ ಪ್ರಜ್ಞಾನಂದ. ಆದರೆ ಈ ಬಾರಿಯ ಚೆಸ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿ ದಿಗ್ಗಜ ಚೆಸ್ ಪಟು ವಿಶ್ವದ ನಂಬರ್ ೧ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ನೇರಾನೇರ ಪೈಪೊಟಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದ ಎರಡನೇ ಚೆಸ್ ಪಟು ಎನಿಸಿಕೊಂಡಿದ್ದಾರೆ ಪ್ರಜ್ಞಾನಂದ. ಫೈನಲ್‌ನಲ್ಲಿ ಭಾರೀ ಪೈಪೊಟಿ ನೀಡಿದ್ದ ಪ್ರಜ್ಞಾನಂದ ಟೈಬ್ರೇಕರ್‌ನಲ್ಲಿ ಕಾರ್ಲ್ಸನ್ ವಿರುದ್ಧ ಸೋಲು ಕಂಡಿದ್ದಾರೆ.

ಪ್ರಜ್ಞಾನಂದ ಮತ್ತು ಅವರ ಕುಟುಂಬದ ಮಾಹಿತಿ
ಪ್ರಜ್ಞಾನಂದ ಚೆನ್ನೈನಲ್ಲಿ 2005 ಆಗಸ್ಟ್ 10ರಂದು ಜನಿಸಿದರು. ತಂದೆ ರಮೇಶ್ ಬಾಬ ಮತ್ತು ತಾಯಿ ನಾಗಲಕ್ಷ್ಮೀ. ಪ್ರಜ್ಞಾನಂದ ಅವರ ಹಿರಿಯ ಸೋದರಿ ವೈಶಾಲಿ ಕೂಡ ಚೆಸ್ ಆಟಗಾರ್ತಿಯಾಗಿದ್ದು ಎರಡು ಬಾರಿ ಯೂತ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಅಕ್ಕನಿಂದ ಬಂದಿತ್ತು ಚೆಸ್ ಆಟದ ಮೇಲೆ ಮೋಹ
ಸೋದರಿ ವೈಶಾಲಿ ಚೆಸ್ ಆಡುವುದನ್ನು ನೀಡುತ್ತಿದ್ದ ಪ್ರಜ್ಞಾನಂದ ಕೂಡ ಬಾಲ್ಯದಲ್ಲಿಯೇ ಅದರ ಮೇಲೆ ಮೋಹ ಬೆಳೆಸಿಕೊಂಡಿದ್ದರು. ಹೀಗಾಗಿ ಸಣ್ಣ ವಯಸ್ಸಿನಲ್ಲಿಯೇ ಚೆಸ್‌ನ ಪಟ್ಟುಗಳನ್ನು ಕರಗತ ಮಾಡಿಕೊಂಡ ಪ್ರಜ್ಞಾನಂದ 2013ರಲ್ಲಿ ಮೊದಲ ಯಶಸ್ಸು ಸಾಧಿಸಿದರು. ತಮ್ಮ 7ನೇ ವಯಸ್ಸಿನಲ್ಲಿ ಪ್ರಜ್ಞಾನಂದ ಅಂಡರ್-8 ವರ್ಲ್ಡ್ ಯೂತ್ ಚೆಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡರು. ಈ ಗೆಲುವಿನೊಂದಿಗೆ FIDE ಮಾಸ್ಟರ್ ಪಟ್ಟವನ್ನು ತನ್ನದಾಗಿಸಿಕೊಂಡರು. ಅದಾದ ಬಳಿಕ 2015ರಲ್ಲಿ ಅಂಡರ್ 10 ವಿಭಾಗದಲ್ಲಿ ಮತ್ತೊಂದು ವಿಶ್ವ ಚಾಂಪಿಯನ್‌ಶಿಪ್ ಗೆದ್ದುಕೊಂಡರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ
ಪ್ರಜ್ಞಾನಂದ 2016ರಲ್ಲಿ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಮಾಸ್ಟರ್ ಎನಿಸಿಕೊಂಡರು. ಆಗ ಅವರಿಗೆ 10 ವರ್ಷ 10 ತಿಂಗಳು ಮತ್ತು 19 ದಿನಗಳು ಮಾತ್ರ. 2017ರಲ್ಲಿ ಅವರು ವಿಶ್ವ ಜೂನಿಯರ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಮೊದಲ ಗ್ರ್ಯಾಂಡ್‌ಮಾಸ್ಟರ್ ನಾರ್ಮ್ ಅನ್ನು ಗೆದ್ದರು.
2ನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್
2018ರಲ್ಲಿ ಪ್ರಜ್ಞಾನಂದ 2ನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಎನಿಸಿಕೊಂಡರು. ಆಗ ಅವರ ವಯಸ್ಸು 12 ವರ್ಷ 10 ತಿಂಗಳು 13 ದಿನಗಳು. ಇಟೆಲಿಯಲ್ಲಿ ನಡೆದ ಗ್ರೆಡೈನ್ ಓಪನ್‌ನಲ್ಲಿ ಲುಕೋ ಮೊರೊನಿ ಅವರನ್ನು ಸೋಲಿಸಿ ಈ ಸಾಧನೆ ಮಾಡಿದ್ದರು ಪ್ರಜ್ಞಾನಂದ.
ಮ್ಯಾಗ್ಸನ್ ಕಾರ್ಲ್ಸನ್‌ಗೆ ಸೋಲಿನ ರುಚಿ ತೋರಿಸಿದ್ದ ಪ್ರಜ್ಞಾನಂದ
ಅಂದಹಾಗೆ ಕಳೆದ ವರ್ಷ ಪ್ರಜ್ಞಾನಂದ ವಿಶ್ವದ ನಂಬರ್ ೧ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿದ್ದರು. ಆನ್‌ಲೈನ್ ಏರ್‌ತಿಂಗ್ಸ್ ಮಾಸ್ಟರ್ಸ್‌ನಲ್ಲಿ ಕಾರ್ಲ್ಸನ್ ವಿರುದ್ಧ ಗೆದ್ದು ವಿಶ್ವನಾಥನ್ ಆನಂದ್ ಹಾಗೂ ಪೆಂತಲ ಹರಿಕೃಷ್ಣ ಬಳಿಕ ಮ್ಯಾಗ್ನಸ್ ವಿರುದ್ಧ ಗೆಲುವು ಸಾಧಿಸಿದ ಕೇವಲ ಮೂರಬೇ ಆಟಗಾರ ಎನಿಸಿಕೊಂಡಿದ್ದರು.
ಫೈನಲ್‌ಗೆ ಪ್ರವೇಶಿದ 2ನೇ ಭಾರತೀಯ
18ರ ಹರೆಯದ ಆರ್ ಪ್ರಜ್ಞಾನಂದ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳಲು ಸಾಧ್ಯವಾಗದಿದ್ದರೂ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಕೂಡ ಶ್ರೇಷ್ಠ ಸಾಧನೆ ಎನಿಸಿಕೊಂಡಿದೆ. ಈ ಸಾಧನೆ ಮಾಡಿದ ಕೇವಲ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ ಪ್ರಜ್ಞಾನಂದ. ಇದಕ್ಕೂ ಮುನ್ನ ವಿಶ್ವನಾಥನ್ ಆನಂದ್ ಮಾತ್ರವೇ ಈ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications