2024ರ ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಎರಡನೇ ದಿನವಾದ ಇಂದು (ಆಗಸ್ಟ್ 30) ಪದಕಗಳ ಬೇಟೆಗೆ ತಯಾರಾಗಿದ್ದು, ಏಳು ಪದಕ ವಿಭಾಗಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಪ್ಯಾರಾಲಿಂಪಿಕ್ಸ್‌ನ ಅಂಧರ ಟಿ 11 ವಿಭಾಗದ 1500 ಮೀ. ಓಟದಲ್ಲಿ ಸ್ಪರ್ಧಿಸಲು ಕನ್ನಡತಿ ಸಜ್ಜಾಗಿದ್ದಾರೆ. ಈ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಂಧತ್ವದಿಂದ ಬೆಳಕಿನ ನಡೆಗೆ ಓಡುತ್ತಿರುವ ಕನ್ನಡತಿ ಹಲವಾರು ಸವಾಲುಗಳನ್ನು ಜಯಿಸಿ ಸಾಧನೆ ಗೈದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುಡ್ನಳ್ಳಿ ಗ್ರಾಮದಲ್ಲಿ ಜನಿಸಿದ ರಕ್ಷಿತಾ ರಾಜು ಇಂದು
ಭಾರತದ ಅಗ್ರ ಪ್ಯಾರಾ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಾರೆ. ಹುಟ್ಟಿನಿಂದಲ್ಲೇ ಇವರಿಗೆ ಅಂಧತ್ವ ಕಾಡಿತು. ಇದರ ನಡುವೆ ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡರು.
ಅಜ್ಜಿಯ ಆಸರೆಯಲ್ಲಿ ಬೆಳದ ರಕ್ಷಿತಾ ಬಾಲ್ಯದಲ್ಲಿ ಪೋಷಕರನ್ನು ಕಳೆದುಕೊಂಡು ಧೈರ್ಯವಾಗಿ ಮುನ್ನುಗಿದ್ದರು. ಏನಾದರೂ ಸಾಧಿಸಬೇಕು ಎಂಬ ಹಸಿವಿನಲ್ಲಿದ ಅವರು ಇವತ್ತು ಪ್ಯಾರಿಸ್‌ನಲ್ಲಿ ನಡೆಯುತ್ತಿರುವುದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ತವಕದಲ್ಲಿದ್ದಾರೆ.
ಚಿಕ್ಕಮಗಳೂರಿನ ಆಶಾಕಿರಣ ಅಂಧರ ಶಾಲೆಯಲ್ಲಿ ರಕ್ಷಿತಾ ವಿದ್ಯಾಭ್ಯಾಸ ನಡೆಸಿದ್ದರು. ಅಲ್ಲಿ ಅವರ ಸೀನಿಯರ್ ಶವಾದ್ ಎಂಬುವರು ಅಂಧರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದರು. ಶವಾದ್ ಬಗ್ಗೆ ತಿಳಿದ ಅವರಿಗೂ ಓಡವ ಆಸೆ ಚಿಗುರಿತ್ತು.
ಶಾಲೆಯಲ್ಲಿ ಪಿಟಿ (ದೈಹಿಕ ಶಿಕ್ಷಣ) ಶಿಕ್ಷಕರಾದ ಗೋಪಾಲ್ ಮಾರ್ಗದರ್ಶನದಲ್ಲಿ ರಕ್ಷಿತಾ ಓಡಲು ಪ್ರಾರಂಭಿಸಿದರು. ಇದನ್ನು ಗುರುತಿಸಿದ ಪ್ರಸ್ತುತ ಕೋಚ್ ಮತ್ತು ಗೈಡ್ ರನ್ನರ್ ಅಗಿರುವ ರಾಹುಲ್ ಬಾಲಕೃಷ್ಣ ಅವರು ರಕ್ಷಿತಾ ಸಾಧನೆಗೆ ಅಡಿಗಲ್ಲು ಹಾಕಿದರು.
ರಕ್ಷಿತಾ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದಿದ್ದ ಪ್ಯಾರಾ ವಿಶ್ವ ಅಥ್ಲೀಟಿಕ್ಸ್‌ನಲ್ಲಿ ಅವರು ಐದನೇ ಸ್ಥಾನ ಪಡೆದಿದ್ದರು. 2019ರಲ್ಲಿ ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಅಥ್ಲೀಟಿಕ್ಸ್‌ನಲ್ಲಿ ಚಿನ್ನ ಗೆದ್ದರೆ, ಅದೇ ವರ್ಷ ಏಷ್ಯಾನ್ ಪ್ಯಾರಾ ಗೇಮ್ಸ್‌ನಲ್ಲಿಯೂ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದರು.
ಇದಾದ ನಂತರ 2021ರಲ್ಲಿ ದುಬೈ ಪ್ಯಾರಾ ಗ್ರಾನ್‌ಪ್ರೀ ಅಥ್ಲೀಟಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು. 2022ರ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು. 2023ರಲ್ಲಿ ಇಂಡಿಯನ್ ಓಪನ್ ಪ್ಯಾರಾ ಅಥ್ಲೀಟಿಕ್ಸ್‌ನಲ್ಲಿ ಬೆಳ್ಳಿ, ಅದೇ ವರ್ಷ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೀಟಿಕ್ಸ್‌ನಲ್ಲಿ 400 ಮೀ ಮತ್ತು 1500 ಮೀ ವಿಭಾಗಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದಲ್ಲದೆ, ಶಾರ್ಜಾ ಅಂತರಾಷ್ಟ್ರೀಯ ಓಪನ್ ಪ್ಯಾರಾ ಅಥ್ಲೀಟಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.