ವಿಭಿನ್ನ ವೇಷದಲ್ಲಿ ಮ್ಯಾರಥಾನ್ ಓಡೋ ರಕ್ಷಿತ್‌ಗೆ 18ನೇ ಗಿನ್ನಿಸ್ ದಾಖಲೆಯ ಗರಿ

ಬೆಂಗಳೂರು, ಡಿಸೆಂಬರ್ 4: ಅದು ಹಾಫ್ ಮ್ಯಾರಥಾನ್ ಆಗಲಿ ಫುಲ್ ಮ್ಯಾರಥಾನ್ ಆಗಲಿ; ಆ ಸುದೀರ್ಘ ಓಟ ಮುಗಿಸಲು ಗಟ್ಟಿ ಗುಂಡಿಗೆ ಬೇಕು. ದೈಹಿಕ ಕ್ಷಮತೆ, ಸಹಿಷ್ಣುತೆ(ಎಂಡುರ್ಯಾನ್ಸ್)ಯಿದ್ದರಷ್ಟೇ ಈ ಲಾಂಗ್ ಡಿಸ್ಟ್ಯಾನ್ಸ್ ರೇಸ್ ಓಡಿ ಮುಗಿಸಿಬಹುದು. ಆದರೆ ಇಲ್ಲೊಬ್ಬ ವಿಭಿನ್ನ ವೇಷಗಳೊಂದಿಗೆ ಮ್ಯಾರಥಾನ್ ಓಡಿ ಗಮನ ಸೆಳೆದಿದ್ದಾರೆ. ಹೀಗೆ ಓಡಿದ್ದಕ್ಕಾಗಿ ಬರೋಬ್ಬರಿ 18 ಗಿನ್ನಿಸ್ ವಿಶ್ವ ದಾಖಲೆಗಳನ್ನೂ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ಹೆಸರು ರಕ್ಷಿತ್ ಶೆಟ್ಟಿ. ಮಂಗಳೂರಿನ ಗುರುಪುರದವರು. ಜಯರಾಮ್ ಶೆಟ್ಟಿ ಮತ್ತು ಇಂದಿರಾ ಶೆಟ್ಟಿ ದಂಪತಿ ಪುತ್ರರಾಗಿರುವ ರಕ್ಷಿತ್, ವಿಶೇಷ ವೇಷಗಳೊಂದಿಗೆ ಮ್ಯಾರಥಾನ್ ಓಡಿ ಗುರುತಿಸಿಕೊಂಡಿದ್ದಾರೆ. ಓಟಕ್ಕೆ ತಕ್ಕಂತ ಡ್ರೆಸ್‌ನಲ್ಲೇ ಮ್ಯಾರಥಾನ್ ಓಡೋದು ಸುಲಭವಲ್ಲ. ಅಂತದ್ದರಲ್ಲಿ ರಕ್ಷಿತ್ ಈ ವಿಶೇಷ ಪ್ರಯತ್ನದ ಮೂಲಕ ಗಮನ ಸೆಳೆಯುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲ್ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿರುವ ರಕ್ಷಿತ್‌ಗೆ ಒಂದೊಮ್ಮೆ ತಾನು ಕ್ರೀಡಾರಂಗದಲ್ಲಿ ಗುರುತಿಸಿಕೊಳ್ಳಬೇಕು ಅನ್ನಿಸಿತು. ಅಂದಿನಿಂದಲೇ ವಿಚಿತ್ರ ದಿರಿಸಿನೊಂದಿಗೆ ಮ್ಯಾರಥಾನ್ ಓಡುವ ದಾರಿ ತುಳಿದರು.

ಓಟ ಶುರುವಾಗಿದ್ದು..
ಆರಂಭದಲ್ಲಿ ರಕ್ಷಿತ್ ಸಾಮಾನ್ಯ ಸ್ಪರ್ಧಿಗಳಂತೆ 10 ಕಿ.ಮೀ., 21.5 ಕಿ.ಮೀ. (ಹಾಫ್ ಮ್ಯಾರಥಾನ್) ಓಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಫುಲ್ ಮ್ಯಾರಥಾನ್ (42 ಕಿ.ಮೀ) ಕೂಡ ಓಡಿದ್ದಾರೆ. ಆದರೆ 2014ರಲ್ಲಿ ರಕ್ಷಿತ್ ಮೊದಲ ಬಾರಿಗೆ ಭಿನ್ನ ದಿರಿಸಿನೊಂದಿಗೆ ಮ್ಯಾರಥಾನ್ ಓಡುವ ನಿರ್ಧಾರ ತಾಳಿದರು. ಓಟ ಆರಂಭಿಸಿಯೂ ಬಿಟ್ಟರು. ಈಗ ರಾಜ್ಯದಲ್ಲಿ ಎಲ್ಲಿ ಮ್ಯಾರಥಾನ್ ನಡೆದರೂ ರಕ್ಷಿತ್ ಅಲ್ಲಿ ಹೊಸ ವೇಷದೊಂದಿಗೆ ಹಾಜರಾಗುತ್ತಾರೆ. ರಾಜ್ಯದಲ್ಲಲ್ಲದೆ ಮುಂಬೈ, ದೆಹಲಿಯಂತ ಸ್ಥಳಗಳಲ್ಲೂ ಮ್ಯಾರಥಾನ್‌ಗಳಲ್ಲಿ ಪಾಲ್ಗೊಂಡು ದಾಖಲೆ ಬರೆಸಿಕೊಂಡಿದ್ದಾರೆ.

ಸ್ಪೋರ್ಟ್ಸ್ ಮೀಟ್ ಸ್ಥಳದಲ್ಲಿ ಆಕರ್ಷಣೆ
ಮುಖ-ಮೈಗೆ ವಿಚಿತ್ರ ಬಣ್ಣ ಬಳಿದು, ಸಾಂತಾಕ್ಲಾತ್ ನಂತೆ, ಬಾಕ್ಸಿಂಗ್ ಗ್ಲೌಸ್‌ನೊಂದಿಗೆ, ಹುಲಿವೇಷಧಾರಿಯಾಗಿ, ಶೂವಿನ ರೂಪದಲ್ಲಿ, ಮೊಬೈಲ್ ಫೋನ್‌ಗೆ ರೂಪಾಂತರಗೊಂಡು, ಸ್ಕೌಟ್ಸ್ಗೈಡ್ಸ್ ಯೂನಿಫಾರ್ಮ್ ನಲ್ಲಿ ಹೀಗೆ ಚಿತ್ರ ವಿಚಿತ್ರ ವೇಷ ಧರಿಸಿ ರೇಸಿಗೆ ನಿಂತಿರುವ ರಕ್ಷಿತನನ್ನು ಸ್ಪರ್ಧಾಳುಗಳು ಮತ್ತು ಕ್ರೀಡಾಭಿಮಾನಿಗಳು ಅಚ್ಚರಿಗಣ್ಣುಗಳಿಂದ ದಿಟ್ಟಿಸೋದಿದೆ. ಕ್ರೀಡಾಕೂಟದ ಆಯೋಜಕರೂ ರಕ್ಷಿತ್‌ನನ್ನು ಗಮನಿಸಿ ದಾಖಲೆಗಾಗಿ ಓಟದ ಕಾಲಾವಧಿ ಸೆರೆಹಿಡಿಯಲು ನೆರವಾಗುತ್ತಾರೆ.

ಗಿನ್ನಿಸ್ ದಾಖಲೆ ಯಾಕೆ?
ದೂರದ ಓಟಕ್ಕೆ ಒಪ್ಪುವ ಸ್ಯಾಂಡೋಸ್, ಶಾರ್ಟ್ಸ್ (ಓಟದ ಸ್ಪರ್ಧಿಗಳು ಧರಿಸುವ ಚಡ್ಡಿ, ಬನಿಯಾನ್) ಧರಿಸಿ ಓಡೋದೇ ಪ್ರಾಯಾಸವೆನಿಸುತ್ತೆ. ಅದರಲ್ಲೂ ವಿಭಿನ್ನ ಡ್ರೆಸ್‌ನಲ್ಲಿ ಓಡುವಾಗಿ ಕ್ಲಿಷ್ಟಕರ ಓಟ ಇನ್ನಷ್ಟು ಸವಾಲು ಎನಿಸುತ್ತೆ. ಆದರೆ ಹೀಗೆ ವಿಚಿತ್ರ ವೇಷ ಧರಿಸಿಯೂ ಹಾಫ್ ಮ್ಯಾರಥಾನ್‌ಅನ್ನು ಉತ್ತಮ ಕಾಲಾವಧಿಯಲ್ಲಿ ಮ್ಯಾರಥಾನ್ ಓಟ ಮುಗಿಸುತ್ತಾರಲ್ಲ? ಅಂಥ ಅಪರೂಪದ ಮಂದಿ ಗಿನ್ನಿಸ್ ದಾಖಲೆಗೆ ಪರಿಗಣಿಸಲ್ಪಡುತ್ತಾರೆ. ಚಿತ್ರ ವೇಷ ಧರಿಸಿಯೂ ರಕ್ಷಿತ್ ಹಾಫ್ ಮ್ಯಾರಥಾನ್ ಓಟವನ್ನು 1 ಗಂಟೆ 30 ನಿಮಿಷಗಳೊಳಗೆ ಪೂರ್ಣಗೊಳಿಸಬಲ್ಲರು. ಈತ ದಾಖಲೆ ಸೃಷ್ಟಿಸಿದ್ದು ಹೀಗೆಯೆ. (ಚಿತ್ರ ಕೃಪೆ: ಟೈಮ್ಸ್ ನ್ಯೂಸ್ ನೆಟ್ವರ್ಕ್)

ಸರ್ಕಾರಿ ನೌಕರಿಗಾಗಿ ಪರದಾಟ
2014ರಲ್ಲಿ ಹೀಗೆ ಭಿನ್ನವಾಗಿ ಓಟ ಆರಂಭಿಸಿದ ರಕ್ಷಿತ್ 2018ನೇ ಸೆಪ್ಟೆಂಬರ್ ನಲ್ಲಿ ಮೈಸೂರಿನಲ್ಲಿ ನಡೆದ ಹಾಫ್ ಮ್ಯಾರಥಾನ್‌ನಲ್ಲಿ 18ನೇ ಬಾರಿಗೆ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಆರ್ಥಿಕವಾಗಿ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲದ ರಕ್ಷಿತ್‌ಗೆ ಸರ್ಕಾರಿ ನೌಕರಿ ಹಿಡಿಯುವ ಹಂಬಲವಿದ್ದರೂ ಸುಲಭದಲ್ಲಿ ನೌಕರಿ ಸಿಗಲೊಲ್ಲದು. ಸರ್ಕಾರಿ ನೌಕರಿಗಾಗಿ ಅಲೆದಾಡಿ ಸೋತಿರುವ ರಕ್ಷಿತ್ ಈಗ ಬದುಕಿನ ಬಂಡಿಗಾಗಿ ಬೆಂಗಳೂರಿನಲ್ಲಿ ಖಾಸಗಿ ಫಿಟ್ನೆಸ್ ತರಬೇತುದಾರರಾಗಿ ಚೂರುಪಾರು ಗಳಿಸುತ್ತಿದ್ದಾರೆ. ಈ ಅಪರೂಪದ ಕ್ರೀಡಾಸಾಧಕ ಈಗಲೂ ಸರ್ಕಾರದ ನೆರವಿಗಾಗಿ ಮುಂದೆ ನೋಡುತ್ತಿದ್ದಾರೆ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications