ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ತಮ್ಮ ಪತ್ನಿ ರಿತಿಕಾ ಸಜ್ದೇಹ್ ಜೊತೆಗೆ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಿಂದ ಇಳಿಯುತ್ತಿರುವುದು ಕಂಡುಬಂತು ಮತ್ತು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೋಹಿತ್ ಶರ್ಮಾಗೆ ಕಾರುಗಳೆಂದರೆ ಇಷ್ಟ, ಆದರೆ ಅದಕ್ಕೆ ಹೆಚ್ಚು ಹಣ ಖರ್ಚು ಮಾಡಲು ಮನಸ್ಸಿಲ್ಲ ಎಂದು ತಿಳಿದುಬಂದಿದೆ.
ಭಾರತ ತಂಡದ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಗೆ ಹೋಲಿಸಿದರೆ, ರೋಹಿತ್ ಶರ್ಮಾ ಅವರ ಗಳಿಕೆಯು ಸುಮಾರು ಐದು ಪಟ್ಟು ಕಡಿಮೆಯಾಗಿದೆ. ಆದರೆ ಭಾರತೀಯ ತಂಡದ ನಾಯಕ ದುಬಾರಿ ಆಸ್ತಿಯನ್ನು ಹೊಂದಿಲ್ಲ ಎಂದರ್ಥವಲ್ಲ.

ವ್ಯಾಪಾರ ಮತ್ತು ಹೂಡಿಕೆ ಕಂಪನಿ ಸ್ಟಾಕ್ ಗ್ರೋ ಇತ್ತೀಚೆಗೆ ಕ್ರಿಕೆಟಿಗ ರೋಹಿತ್ ಶರ್ಮಾ ಅವರ ನಿವ್ವಳ ಆಸ್ತಿ ಮೌಲ್ಯವನ್ನು ಹಂಚಿಕೊಂಡಿದೆ. ವರದಿಯ ಪ್ರಕಾರ, ರೋಹಿತ್ ಶರ್ಮಾ ಅವರ ಮೌಲ್ಯವು ಸುಮಾರು 214 ಕೋಟಿ ರೂ. ಇದೆ. ವೇಳೆ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರ ಆಸ್ತಿ ಮೌಲ್ಯವು ಸುಮಾರು 1,000 ಕೋಟಿ ರೂಪಾಯಿಗೂ ಅಧಿಕವಿದೆ.
ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಒಪ್ಪಂದಗಳು, ವಿಭಿನ್ನ ವ್ಯವಹಾರಗಳು ಮತ್ತು ಹೂಡಿಕೆಗಳು ಮತ್ತು ಬೃಹತ್ ಪ್ರಾಯೋಜಕತ್ವದ ಒಪ್ಪಂದಗಳ ಮೂಲಕ ದೊಡ್ಡ ಮೊತ್ತದ ಆದಾಯ ಗಳಿಸುತ್ತಾರೆ. ಹಾಲಿ ನಾಯಕ ರೋಹಿತ್ ಶರ್ಮಾ ಕೂಡ ಈ ಮಾರ್ಗಗಳ ಮೂಲಕವೇ ಹಣ ಗಳಿಸುತ್ತಾನೆ.

ರೋಹಿತ್ ಶರ್ಮಾ ಅವರು ಕ್ರಿಕೆಟ್ ಮೂಲಕ ಎಷ್ಟು ಆದಾಯ ಗಳಿಸುತ್ತಾರೆ, ಅವರು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ, ಆಸ್ತಿಗಳು ಮತ್ತು ಬ್ರ್ಯಾಂಡ್ ಮೌಲ್ಯಗಳನ್ನು ಈ ಕೆಳಗೆ ಪರಿಶೀಲಿಸಿ.
ಭಾರತ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡಗಳ ನಾಯಕರಾಗಿರುವ ರೋಹಿತ್ ಶರ್ಮಾ ಅವರು ಬಿಸಿಸಿಐನ ಎ+ ಕೆಟಗರಿಯ ಆಟಗಾರ. ಈ ಗ್ರೇಡ್‌ನಲ್ಲಿರುವ ಆಟಗಾರರು ವಾರ್ಷಿಕವಾಗಿ 7 ಕೋಟಿ ರೂ.ಗಳನ್ನು ಬಿಸಿಸಿಐಯಿಂದ ಪಡೆಯುತ್ತಾರೆ. ಇದು ಪಂದ್ಯದ ಶುಲ್ಕವಲ್ಲ ಎಂಬುದನ್ನು ಮರೆಯಬಾರದು. ಗುತ್ತಿಗೆ ಪಡೆದ ಆಟಗಾರರಿಗೆ ಬಿಸಿಸಿಐ ವಾರ್ಷಿಕವಾಗಿ ಹಣ ಪಾವತಿಸುತ್ತದೆ.
ಇನ್ನು ರೋಹಿತ್ ಶರ್ಮಾ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ, ಏಕದಿನ ಪಂದ್ಯಕ್ಕೆ 6 ಲಕ್ಷ ರೂಪಾಯಿ, ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಗಳಿಸುತ್ತಾರೆ. ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ ಮತ್ತು ಪ್ರತಿ ಆವೃತ್ತಿಗೆ 16 ಕೋಟಿ ರೂಪಾಯಿಗಳನ್ನು ಜೇಬಿಗಿಳಿಸುತ್ತಾರೆ. ಒಟ್ಟಾರೆಯಾಗಿ, ರೋಹಿತ್ ಶರ್ಮಾ ಕ್ರಿಕೆಟ್‌ನಿಂದ ವಾರ್ಷಿಕವಾಗಿ 30 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ 28 ಬ್ರಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅವುಗಳಲ್ಲಿ ಜಿಯೋ ಸಿನಿಮಾ, ಹ್ಯೂಬ್ಲಾಟ್, ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್, ಗೋಐಬಿಬೋ, ಸಿಯೆಟ್ ಟಯರ್ಸ್, ಯುಎಸ್‌ಎ, ಒಪ್ಪೋ, ಹೈಲ್ಯಾಂಡರ್ ಇತ್ಯಾದಿ ಸೇರಿವೆ.
ಕೆಲವು ವರದಿಯ ಪ್ರಕಾರ, ರೋಹಿತ್ ಶರ್ಮಾ ಎಲ್ಲಾ ಬ್ರ್ಯಾಂಡ್ ಕಂಪನಿಗಳಿಂದ ಸುಮಾರು 5 ಕೋಟಿ ರೂಪಾಯಿ ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ.
ರೋಹಿತ್ ಶರ್ಮಾ ಎರಡು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವುಗಳೆಂದರೆ ರಾಪಿಡೊಬೊಟಿಕ್ಸ್ (ರೊಬೊಟಿಕ್ ಆಟೊಮೇಷನ್ ಸೊಲ್ಯೂಷನ್ಸ್) ಮತ್ತು ವೆರೊಟ್ಸ್ ವೆಲ್ನೆಸ್ ಸೊಲ್ಯೂಷನ್ಸ್ ಇದು ಹೆಲ್ತ್‌ಕೇರ್ ಕಂಪನಿಯಾಗಿದೆ.
ಮುಂಬೈನ ವರ್ಲಿಯಲ್ಲಿರುವ 4 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ರೋಹಿತ್ ಶರ್ಮಾ ವಾಸಿಸುತ್ತಿದ್ದು, ಇದರ ಮೌಲ್ಯ 30 ಕೋಟಿ ರೂಪಾಯಿ ಆಗಿದೆ. ಇನ್ನು ಮುಂಬೈ ಸಮೀಪದ ಸಣ್ಣ ಗಿರಿಧಾಮ ಲೋನಾವಾಲಾದಲ್ಲಿ 5 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ.
ಐಷಾರಾಮಿ ಕಾರುಗಳನ್ನು ಹೊಂದಿರುವ ರೋಹಿತ್ ಶರ್ಮಾ
ಕ್ರಿಕೆಟಿಗ ರೋಹಿತ್ ಶರ್ಮಾ ಅವರು ಲ್ಯಾಂಬೋರ್ಗಿನಿ ಉರಸ್, ಮರ್ಸಿಡಿಸ್ ಬೆಂಜ್ GLS 350 d, A BMW X3 ಮತ್ತು ಟೊಯೋಟಾ ಮತ್ತು ಮಾರುತಿ ಸುಜುಕಿಯ ಎರಡು ಕಾರುಗಳ ಮಾಲೀಕರಾಗಿದ್ದಾರೆ. ಕಾರುಗಳ ಮೌಲ್ಯ ಒಟ್ಟು 7 ಕೋಟಿ ರೂಪಾಯಿ ಆಗಿದೆ.