* ಇತ್ತೀಚೆಗಷ್ಟೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದ ನೀರಜ್ ಚೋಪ್ರ ಮತ್ತೊಂದು ಸಾಧನೆಯ ಸನಿಹದಲ್ಲಿದ್ದಾರೆ. ಅಮೆರಿಕಾದ ಯೂಜಿನ್ ನಗರದಲ್ಲಿ ನಡೆಯುತ್ತಿರುವ ಜೂರಿಕ್ ಡೈಮಂಡ್ ಲೀಗ್ ಕ್ರೀಡಾಕೂಟದ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನದೊಂದಿಗೆ ನೀರಜ್ ಚೋಪ್ರ ಫೈನಲ್‌ಗೆ ಪ್ರವೇಶ ಅರ್ಹತೆ ಪಡೆದುಕೊಂಡಿದ್ದಾರೆ.
* ಮೂರು ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ಚಾಂಪಿಯನ್ ಆಂಡಿ ಮರ್ರೆ ಯುಎಸ್ ಓಪನ್ 2023ರ ಆವೃತ್ತಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶ ಪಡೆಯಲು ವಿಫಲವಾಗಿದ್ದಾರೆ. ಗ್ರಿಗರ್ ಡಿಮಿಟ್ರೋವ್ ವಿರುದ್ಧ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅನುಭವಿ ಆಟಗಾರ 3-6, 4-6, 1-6 ನೇರ ಸೆಟ್‌ಗಳ ಅಂತರದಿಂದ ಸೋಲು ಕಂಡಿದ್ದಾರೆ. ಎರಡು ಗಂಟೆ 46 ನಿಮಿಷಗಳ ಕಾಲ ನಡೆದ ಈ ಸೆಣೆಸಾಟದಲ್ಲಿ ಬಲ್ಗೇರಿಯನ್ ಆಟಗಾರ ಗೆಲುವಿನ ನಗೆ ಬೀರಿದ್ದಾರೆ.

*ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿ ಈ ಬಾರಿ ತನ್ನ ಚೊಚ್ಚಲ ಆವೃತ್ತಿಯ ಯುಪಿ ಟಿ20 ಲೀಗ್ ಆರಂಭಿಸಿದೆ. ಈ ಲೀಗ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ರಿಂಕು ಸಿಂಗ್ ಮೀರತ್ ಮಾರ್ವಿಕ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಪಂದ್ಯದಲ್ಲಿ ಫಲಿತಾಂಶ ಟೈ ಆದ ಬಳಿಕ ಸೂಪರ್ ಓವರ್‌ನಲ್ಲಿ ಪಂದ್ಯದ ಫಲಿತಾಂಶ ನಿರ್ಧಾರವಾಗಬೇಕಿತ್ತು. ಈ ಸೂಪರ್ ಓವರ್‌ನಲ್ಲಿ ರಿಂಕು ಸಿಂಗ್ ಆಡುತ್ತಿರುವ ಮೀರತ್ ಮಾರ್ವಿಕ್ಸ್ ತಂಡ ಗೆಲ್ಲಬೇಕಿದ್ದರೆ ಸೂಪರ್ ಓವರ್‌ನಲ್ಲಿ 17 ರನ್‌ಗಳನ್ನು ಗಳಿಸಬೇಕಾಗಿತ್ತು. ಈ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ರಿಂಕು ಸಿಂಗ್ ಭರ್ಜರಿಯಾಗಿ ಸತತ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಈ ಮೂಲಕ ಪಂದ್ಯದಲ್ಲಿ ತಮ್ಮ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಒತ್ತಡದ ಸಂದರ್ಭದಲ್ಲಿ ತನ್ನ ಅದ್ಭುತ ಬ್ಯಾಟಿಂಗ್ ಕೌಶಲ್ಯವನ್ನು ರಿಂಕು ಮತ್ತೊಂದು ಬಾರಿ ಪ್ರದರ್ಶಿಸಿ ಗಮನಸೆಳೆದಿದ್ದಾರೆ.
* ಪಾಕಿಸ್ತಾನದ ವಿರುದ್ಧದ ಏಷ್ಯಾಕಪ್ ಲೀಗ್ ಹಂತದ ಕದನದಲ್ಲಿ ಭಾರತದ ಅಗ್ರ ಕ್ರಮಾಂಕದ ಬಗ್ಗೆ ಸಾಕಷ್ಟು ಕುತೂಹಲಗಳು ಇದ್ದವು. ಇದೀಗ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದರೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿಯೇ ಮುಂದುವರಿಯಲಿದ್ದಾರೆ ಎನ್ನುವುದು ಖಚಿತವಾಗಿದೆ. ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡಲಿ, ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿ ಎನ್ನುವಂತಾ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಅಗ್ರ ಕ್ರಮಾಂಕದಲ್ಲಿ ಭಾರತ ಯಾವುದೇ ಬದಲಾವನೆ ಮಾಡಿಕೊಳ್ಳದಿರಲು ನಿರ್ಧರಿಸಿದೆ.
* ಅಕ್ಯುವೆದರ್ ನೀಡುತ್ತಿರುವ ಮಾಹಿತಿಯ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದಂತೆ ಕ್ಯಾಂಟಿಯಲ್ಲಿ ನಡೆಯಲಿರುವ ಹೆಚ್ಚಿನ ಪ್ರಮುಖ ಪಂದ್ಯಗಳಿಗೆ ಮಳೆ ಅಡ್ಡಿಯುಂಟು ಮಾಡುವ ಆತಂಕವಿದೆ. ಭಾರತ ಹಾಗೂ ಪಾಕ್ ಪಂದ್ಯ ನಡೆಯಲಿರುವ ಸಪ್ಟೆಂಬರ್ 2ರಂದು ಹಗಲಿನ ಸಮಯದಲ್ಲಿ 94ರಷ್ಟು ಭಾಗದಲ್ಲಿ ಮಳೆಯಾಗುವ ಮುನ್ಸೂಚನೆಯಿದ್ದರೆ ರಾತ್ರಿ ಸಂದರ್ಭದಲ್ಲಿ 87% ಭಾಗದಲ್ಲಿ ಮಳೆಯಾಗುವ ಮುನ್ಸೂಚನೆಯಿದೆ.
* ಭಾರತ ಹಾಗೂ ಪಾಕಿಸ್ತಾನದ ನಡುವಿನ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಮಳೆಯಿಂದಾಗಿ ಪಂದ್ಯಕ್ಕೆ ಅವಕಾಶ ದೊರೆಯದೆ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಈ ಪಂದ್ಯದಲ್ಲಿ ಪಡೆಯುವ ಅಂಕಗಳನ್ನು ಎರಡು ತಂಡಗಳು ಕೂಡ ಹಂಚಿಕೊಳ್ಳಲಿದೆ.
* ಕ್ರಿಕೆಟ್‌ನ ಯಾವುದೇ ಫಾರ್ಮೆಟ್ ಇದ್ದರೂ ವಿರಾಟ್ ರನ್ ಮಶೀನ್ ಎಂಬುದರಲ್ಲಿ ಎರಡು ಮಾತಿಲ್ಲ. ಆಕರ್ಷಕವಾಗಿ ಬ್ಯಾಟ್ ಮಾಡಿ ಎದುರಾಳಿಗಳಿಗೆ ಕಾಡುವ ವಿರಾಟ್, ಪಾಕ್ ಬೌಲರ್ ಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೆ ಎಂಸಿಜೆ ಅಂಗಳದಲ್ಲಿನ ಫಾರ್ಮ್ ಅನ್ನು ಶ್ರೀಲಂಕಾದಲ್ಲೂ ಮುಂದುವರೆಸುವುದಾಗಿ ಸೂಚನೆ ನೀಡಿದ್ದಾರೆ.
* ಬಹುನಿರೀಕ್ಷಿತ ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯದ ಆರಂಭಕ್ಕೆ ಮುನ್ನಾದಿನವೇ ಪಾಕಿಸ್ತಾನ ತಂಡ ತನ್ನ ಆಡುವ ಬಳಗವನ್ನು ಘೋಷಿಸಿದೆ. ಈ ಮೂಲಕ ಭಾರತದ ವಿರುದ್ಧದ ಮೆಗಾ ಸೆಣೆಸಾಟಕ್ಕೆ ತಾನು ಸರ್ವರೀತಿಯಲ್ಲಿಯೂ ಸಿದ್ದ ಎನ್ನುವ ಸಂದೇಶವನ್ನು ರವಾನಿಸಿದೆ ಪಾಕಿಸ್ತಾನ