ಮೋದಿ, ಕ್ರಿಕೆಟಿಗರು ಸೇರಿ ಹಲವರಿಂದ ಹಾಕಿ ತಂಡಕ್ಕೆ ಶುಭಾಶಯಗಳ ಸುರಿಮಳೆ

ಟೋಕಿಯೋ: ಭಾರತೀಯ ಪುರುಷರ ಹಾಕಿ ತಂಡ ಅವಿಸ್ಮರಣೀಯ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಗುರುವಾರ (ಆಗಸ್ಟ್ 5) ಕಂಚಿನ ಪದಕಕ್ಕಾಗಿ ನಡೆದ ಟೋಕಿಯೋ ಒಲಿಂಪಿಕ್ಸ್ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡ ಜರ್ಮನಿಯನ್ನು 5-4ರಿಂದ ಸೋಲಿಸಿದೆ. ಹೀಗಾಗಿ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದ ದಾಖಲೆ ನಿರ್ಮಿಸಿದೆ. ಇದಕ್ಕೂ ಮುನ್ನ 1980ರ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದಿತ್ತು.
ಟೋಕಿಯೋ ಒಲಿಂಪಿಕ್ಸ್ ವಿಶೇಷ ಮುಖಪುಟ: ಪ್ರಮುಖ ಸುದ್ದಿಗಳು, ವೇಳಾಪಟ್ಟಿ, ಪದಕ ಪಟ್ಟಿ ಇಲ್ಲಿದೆ
ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಕಾಲ ಭಾರತ ಹಾಕಿ ತಂಡ ಅನುಭವಿಸಿದ್ದ ಪದಕದ ಬರಗಾಲ ಈ ವರ್ಷಕ್ಕೆ ಕೊನೆಯಾಗಿದೆ. ಅಷ್ಟೇ ಅಲ್ಲ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 5ನೇ ಪದಕ ದೊರೆತಿದೆ. ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯ್ ಚಾನು ಬೆಳ್ಳಿ, ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚು, ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಕಂಚು, ರಸ್ಲಿಂಗ್‌ನಲ್ಲಿ ರವಿಕುಮಾರ್ ದಾಹಿಯ ಬೆಳ್ಳಿ ಖಾತರಿ ಮತ್ತು ಪುರುಷರ ಹಾಕಿಯಲ್ಲಿ ಕಂಚಿನ ಪದಕ ಭಾರತಕ್ಕೆ ಲಭಿಸಿದೆ.
ಪ್ರಧಾನಿ ಮೋದಿ ಸ್ಫೂರ್ತಿಯ ಟ್ವೀಟ್
ಭಾರತಕ್ಕೆ ಐತಿಹಾಸಿಕ ಪದಕ ಗೆದ್ದಿರುವ ಭಾರತಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಲವಾರು ಗಣ್ಯರು, ಕ್ರೀಡಾತಾರೆಯರು, ಕ್ರೀಡಾ ಪ್ರೇಮಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 'ಐತಿಹಾಸಿಕ ದಿನ. ಈ ದಿನ ಪ್ರತೀ ಭಾರತೀಯನ ನೆನಪಲ್ಲೂ ಚಿರಕಾಲ ಉಳಿಯಲಿದೆ. ತವರಿಗೆ ಕಂಚಿನ ಪದಕ ತರುತ್ತಿರುವುದಕ್ಕಾಗಿ ಭಾರತದ ಹಾಕಿ ಪುರುಷರ ತಂಡಕ್ಕೆ ಅಭಿನಂದನೆಗಳು. ಈ ಗೆಲುವಿನೊಂದಿಗೆ ಹಾಕಿ ತಂಡ ನಮ್ಮ ಹಿರಿಮೆಯನ್ನು ಎತ್ತಿ ಹಿಡಿದಿದೆ. ಮುಖ್ಯವಾಗಿ ಯುವಕರಿಗೆ ಇದರಿಂದ ಸ್ಫೂರ್ತಿ ಲಭಿಸಿದೆ' ಎಂದು ಮೋದಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಟ್ವೀಟ್
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಗೋಲ್ ಕೀಪರ್ ಶ್ರೀಜೇಶ್ ಪರತ್ತು ರವೀಂದ್ರನ್ ಪ್ರದರ್ಶನವನ್ನು ಸ್ಮರಿಸಿರುವ ಸಚಿನ್, ಕಂಚು ಗೆದ್ದ ತಂಡದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು ಎಂದಿದ್ದಾರೆ. ಆಗಸ್ಟ್ 5ರ ಗುರುವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಮೊದಲು ಗೋಲ್ ಖಾತೆ ತೆರೆದಿದ್ದು ಜರ್ಮನಿ ತಂಡ. ಮೊದಲ ಕ್ವಾರ್ಟರ್‌ನ 2ನೇ ನಿಮಿಷದಲ್ಲಿ ತೈಮೂರ್ ಒರುಜ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ನೀಡಿದರು. ಅದಾಗಿ ಮೊದಲ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳಿಂದ ಗೋಲ್ ದಾಖಲಾಗಲಿಲ್ಲ. ಮೊದಲ ಕ್ವಾರ್ಟರ್ 1-0ಯಿಂದ ಕೊನೆಗೊಂಡಿತು. ಆದರೆ ದ್ವಿತೀಯ ಕ್ವಾರ್ಟರ್ ಆರಂಭದಲ್ಲೇ ಭಾರತ ಗೋಲ್ ಬಾರಿಸಿತು. 17ನೇ ನಿಮಿಷದಲ್ಲಿ ಸಿಮರ್ಜೀತ್ ಸಿಂಗ್ ಗೋಲ್ ಬಾರಿಸಿ ಭಾರತಕ್ಕೆ ಹುರುಪು ತುಂಬಿದರು. ಮತ್ತೆ ಜರ್ಮನಿಯ ನಿಕ್ಲಾಸ್ ವೆಲ್ಲೆನ್ 24ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. ಇಷ್ಟರ ವೇಳೆ ಪಂದ್ಯ ಜಿದ್ದಾಜಿದ್ದಿ ಅನ್ನಿಸಿತ್ತು.
ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್
ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಕೂಡ ಟ್ವೀಟ್ ಮಾಡಿ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಅಂದ್ಹಾಗೆ ಗುರುವಾರದ ಪಂದ್ಯದ ದ್ವಿತೀಯ ಕ್ವಾರ್ಟರ್ ಆರಂಭದಲ್ಲಿ ಸಿಮರ್ಜೀತ್ ಮತ್ತು ವೆಲ್ಲೆನ್ ಗೋಲ್ ಬಾರಿಸಿದ ಬಳಿಕ ಮತ್ತೂ ಗೋಲ್‌ಗಳು ಸಿಡಿಯಲಾರಂಭಿದವು. ಜರ್ಮನಿಯ ಬೆನೆಡಿಕ್ಟ್ ಫರ್ಕ್ 25ನೇ ನಿಮಿಷದಲ್ಲಿ ತಂಡಕ್ಕೆ ಎರಡನೇ ಗೋಲ್ ಬಾರಿಸಿದರು. ಭಾರತದಿಂದ 27ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಭಾರತದ ಪರ 2ನೇ ಗೋಲ್ ಬಾರಿಸಿದರು. 29ನೇ ನಿಮಿಷದಲ್ಲಿ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್‌ರಿಂದ ತಂಡಕ್ಕೆ ಮೂರನೇ ಗೋಲ್ ಸಿಡಿಯಿತು. ದ್ವಿತೀಯ ಕ್ವಾರ್ಟರ್ 3-3ರ ಸಮಬಲದೊಂದಿಗೆ ಕೊನೆಗೊಂಡಿತು. ಆ ಬಳಿಕ ಭಾರತದ್ದೇ ಮೇಲುಗೈ ಸಾಗಿತು.
ಶಿಖರ್ ಧವನ್, ಸೂರ್ಯಕುಮಾರ್ ಯಾದವ್
ಪ್ರಸ್ತುತ ಟೀಮ್ ಇಂಡಿಯಾದಲ್ಲಿರುವ ಬ್ಯಾಟ್ಸ್‌ಮನ್‌ಗಳಾದ ಸೂರ್ಯಕುಮಾರ್ ಯಾದವ್ ಮತ್ತು ಶಿಖರ್ ಧವನ್ ಕೂಡ ಪುರುಷರ ಹಾಕಿ ತಂಡಕ್ಕೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.
ಭಾರತಕ್ಕೆ ವಿಜಯದ ಗೋಲ್: ಸಿಕ್ಕಿದ್ದು ತೃತೀಯ ಕ್ವಾರ್ಟರ್‌ನಲ್ಲಿ. 3-3ರಿಂದ ಅಂಕ ಸರಿದೂಗಿದ್ದಾಗ 31ನೇ ನಿಮಿದಲ್ಲಿ ಭಾರತದ ರೂಪೀಂದರ್ ಪಾಲ್ ಸಿಂಗ್ ತಂಡದ ಪರ ನಾಲ್ಕನೇ ಗೋಲ್ ಬಾರಿಸಿದರು. ಅದಾಗಿ 34ನೇ ನಿಮಿಷದಲ್ಲಿ ಸಿಮರ್ಜೀತ್ ಸಿಂಗ್ ಅವರಿಂದ 5ನೇ ಗೋಲ್ ಸಿಡಿಯಿತು. ವಿಶ್ವ ನಂ.3 ಭಾರತ ಆಗಲೇ ಗೆಲುವಿನ ಹುರುಪಿನಲ್ಲಿತ್ತು. ಆ ಬಳಿಕ ಪಂದ್ಯ ಇನ್ನೂ ರೂಚಕ ರೀತಿಯಲ್ಲಿ ಮುಂದುವರೆಯಿತು. ಯಾಕೆಂದರೆ ಜರ್ಮನಿಯ ಲುಕಾಸ್ ವಿಂಡ್‌ಫೆಡರ್ 48ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. ಆದರೆ ಆ ಬಳಿಕ ಗೋಲ್ ಬಾರಿಸಲು ಜರ್ಮನಿ ಮಾಡಿದ ಪ್ರಯತ್ನವೆಲ್ಲ ವಿಫಲವಾಯ್ತು. ಮುಖ್ಯವಾಗಿ ತಂಡದ ಗೋಲ್ ಕೀಪರ್ ಶ್ರೀಜೇಶ್ ಪರತ್ತು ರವೀಂದ್ರನ್ ಉತ್ತಮ ರಕ್ಷಣಾತ್ಮಕ ಆಟವಾಡಿ ಎದುರಾಳಿ ತಂಡದ ಗೋಲ್ ಯತ್ನಗಳನ್ನು ವಿಫಲಗೊಳಿಸಿದರು. ಶ್ರೀಜೇಶ್ ಪ್ರಯತ್ನ ತಂಡದ ಗೆಲುವಿನಲ್ಲಿ ಪ್ರಮುಖವೆನಿಸಿತು.
ಹರ್ಭಜನ್ ಸಿಂಗ್, ಮೀರಾಬಾಯಿ ಚಾನು
ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿ, ಭಾರತದ ಹಾಕಿ ತಂಡದ ಬಗ್ಗೆ ಅಪಾರ ಹೆಮ್ಮೆ ಅನ್ನಿಸುತ್ತಿದೆ ಎಂದಿದ್ದಾರೆ. ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಮೀರಾಬಾಯಿ ಚಾನು ಕೂಡ ಪದಕದ ಗೆಲುವಿನ ಖುಷಿಯನ್ನು ಟ್ವೀಟ್ ಮೂಲಕ ತೋರಿಕೊಂಡಿದ್ದಾರೆ.
ಸೆಮಿಫೈನಲ್‌ನಲ್ಲಿ ಭಾರತಕ್ಕೆ ನಿರಾಸೆ: ಆಗಸ್ಟ್ 3ರಂದು ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಪುರುಷರ ಹಾಕಿ ತಂಡ ಚಿನ್ನದ ಪದಕದಾಸೆಯನ್ನು ಕೈ ಚೆಲ್ಲಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ಧ ಭಾರತ 5-2ರ ಸೋಲನುಭವಿಸಿತ್ತು. ಹೀಗಾಗಿಯೇ ಭಾರತಕ್ಕೆ ಜರ್ಮನಿ ವಿರುದ್ಧ ಕಂಚಿನ ಪದಕಕ್ಕಾಗಿ ಪಂದ್ಯ ನಡೆದಿತ್ತು. ಇದರಲ್ಲಿ ಭಾರತ ಗೆದ್ದು ಪದಕಗಳ ಸಂಖ್ಯೆ ಹೆಚ್ಚಿಸಿದೆ. ಆಗಸ್ಟ್ 4ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವೂ ಅರ್ಜೆಂಟೀನಾ ವಿರುದ್ಧ 2-1ರ ಸೋಲು ಕಂಡಿತ್ತು. ಮಹಿಳಾ ತಂಡಕ್ಕೂ ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕಾಗಿ ಪಂದ್ಯ ನಡೆಯಲಿದೆ. ಆಗಸ್ಟ್ 6ರ 7 AMಗೆ ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲೂ ಭಾರತಕ್ಕೆ ಪದಕ ಲಭಿಸುವ ನಿರೀಕ್ಷೆಯಿದೆ.
ಇನ್ನು ಫೆನ್ಸರ್ ಭವಾನಿ ದೇವಿ, ಕರ್ನಾಕಟದ ಸಚಿವ ಸುಧಾಕರ್, ಪ್ರಿಯಾಂಕ್ ಖರ್ಗೆ, ದೇವೆಂದ್ರ ಫಡ್ನವಿಸ್, ಸೇರಿದಂತೆ ಅನೇಕರು ಟ್ವೀಟ್ ಮೂಲಕ ಭಾರತೀಯ ಹಾಕಿ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಆ ಟ್ವೀಟ್‌ಗಳು ಕೆಳಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications