ಟೋಕಿಯೋ ಒಲಿಂಪಿಕ್ಸ್: ಇತಿಹಾಸ ಬರೆದ ರಸ್ಲರ್ ರವಿಕುಮಾರ್ ದಾಹಿಯ, ಭಾರತಕ್ಕೆ ಮತ್ತೊಂದು ಬೆಳ್ಳಿ ಖಚಿತ!

ಟೋಕಿಯೋ: ಭಾರತಕ್ಕೆ ಮತ್ತೊಂದು ಸಂಭ್ರಮದ ಸಂಗತಿ ಕೇಳಿ ಬಂದಿದೆ. ಭಾರತದ ರಸ್ಲರ್ ರವಿಕುಮಾರ್ ದಾಹಿಯ ದೇಶಕ್ಕೆ ಇನ್ನೊಂದು ಬೆಳ್ಳಿ ಪದಕ ಖಾತರಿಪಡಿಸಿದ್ದಾರೆ. ಪುರುಷರ ರಸ್ಲಿಂಗ್ 57 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ರವಿಕುಮಾರ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಸೆಮಿಫೈನಲ್‌ನಲ್ಲಿ ಕಝಕೀಸ್ತಾನದ ನುರಿಸ್ಲಾಮ್ ಸನಾಯೆವ್ ಎದುರು ಗೆದ್ದಿರುವ ರವಿ, ಫೈನಲ್ ಪ್ರವೇಶದೊಂದಿಗೆ ಭಾರತಕ್ಕೆ ರಜತ ಪದಕ ಖಾತರಿಪಡಿಸಿದ್ದಾರೆ.
ಬುಧವಾರ (ಆಗಸ್ಟ್ 4) ನಡೆದ ಸೆಮಿಫೈನಲ್ ಪಂದ್ಯದಲ್ಲಿ ನುರಿಸ್ಲಾಮ್ ಸನಾಯೆವ್ ಅವರು 9-7 ಅಂತರದ ಮುನ್ನಡೆಯಲ್ಲಿದ್ದರಾದರೂ ಪಿನ್‌ಫಾಲ್ ಮೂಲಕ ರವಿ ಪಂದ್ಯದ ಫಲಿತಾಂಶ ತನ್ನದಾಗಿಸಿಕೊಂಡಿದ್ದಾರೆ. ಇಲ್ಲಿಗೆ ಭಾರತಕ್ಕೆ ಒಟ್ಟು 4ನೇ ಪದಕ ಖಾತರಿಯಾಗಿದೆ. ಎರಡು ಬೆಳ್ಳಿ, ಎರಡು ಕಂಚಿನ ಪದಕಗಳು ಸದ್ಯ ಭಾರತದ ಖಾತೆಯಲ್ಲಿವೆ. ಇದರಲ್ಲಿ ರವಿಯ ಬೆಳ್ಳಿ ಪದಕ ಬಂಗಾರಕ್ಕೆ ಬದಲಾಗಲೂಬಹುದು.
ಇತಿಹಾಸ ಬರೆದ ರವಿಕುಮಾರ್ ದಾಹಿಯ
2012ರ ಲಂಡನ್ ಒಲಿಂಪಿಕ್ಸ್‌ನ ರಸ್ಲಿಂಗ್‌ನಲ್ಲಿ ಸುಶೀಲ್ ಕುಮಾರ್ ರಜತ ಪದಕ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಪುರುಷರ ರಸ್ಲಿಂಗ್‌ನಲ್ಲಿ ಭಾರತಕ್ಕೆ ಪದಕ ಲಭಿಸುತ್ತದೆ. ಫೈನಲ್ ಪಂದ್ಯದಲ್ಲಿ ರವಿ ಬಂಗಾರ ಗೆದ್ದರೆ ಅದು ಇನ್ನೂ ಶ್ರೇಷ್ಠ ಸಾಧನೆ ಎನಿಸಲಿದೆ. ಸೆಮಿಫೈನಲ್‌ನಲ್ಲಿ ಎರಡನೇ ಅವಧಿಯಲ್ಲಿ 9-2ರ ಹಿನ್ನಡೆಯಲ್ಲಿದ್ದ ರವಿ, ಪಿನ್‌ಫಾಲ್ ಮೂಲಕ 5 ಅಂಕ ಗಳಿಸಿಕೊಂಡರಲ್ಲದೆ ಫೈನಲ್‌ಗೆ ಪ್ರವೇಶ ಕೂಡ ಗಿಟ್ಟಿಸಿಕೊಂಡಿದ್ದಾರೆ. ಸನಾಯೆವ್ ಅವರನ್ನು ರವಿ ಕುಮಾರ್ ಬಡಿದಾಗ ರವಿ ಕೊಂಚ ಗಾಯಗೊಂಡರು. ಎರಡುಬಾರಿಯ ವಿಶ್ವಚಾಂಪಿಯನ್‌ಶಿಪ್ ಪದಕ ವಿಜೇತ ರವಿ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು. ಆ ಬಳಿಕ ದಾಹಿಯ ಸನಾಯೆವ್ ಅವರನ್ನು ಕೆಡವಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಅನಂತರ ರವಿ ಪಿನ್‌ಫಾಲ್ ಮೂಲಕ ಪಂದ್ಯ ಗೆದ್ದರು.
ಆಗಸ್ಟ್ 5ರಂದು ರವಿಗೆ ಫೈನಲ್ ಪಂದ್ಯ
ರವಿಕುಮಾರ್ ಅವರು ಆಗಸ್ಟ್ 5ರಂದು ನಡೆಯುವ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ರಷ್ಯಾದ ಜೌರ್ ಉಗುವ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಈ ಪಂದ್ಯ ಆಗಸ್ಟ್ 5ರ ಸಂಜೆ 4:20 PMಗೆ ಆರಂಭಗೊಳ್ಳಲಿದೆ. ಮತ್ತೊಂದು ಸ್ಪರ್ಧೆಯಲ್ಲಿ ಪುರಷರ 86 ಕೆಜಿ ವಿಭಾಗ ಫ್ರೀ-ಸ್ಟೈಲ್ ರಸ್ಲಿಂಗ್‌ನಲ್ಲಿ ಸ್ಪರ್ಧಿಸಿದ್ದ ದೀಪಕ್ ಪೂನಿಯಾ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಡೇವಿಡ್ ಟೇಲರ್ ವಿರುದ್ಧ 0-10ರ ಅಂತರದಲ್ಲಿ ಸೋತಿದ್ದಾರೆ. ಇನ್ನು ದೀಪಕ್ ಅವರು ಕಂಚಿನ ಪದಕಕ್ಕಾಗಿ ಆಗಸ್ಟ್ 5ರಂದು ಸ್ಪರ್ಧಿಸಲಿದ್ದಾರೆ. ಅಂದ್ಹಾಗೆ ದೇಶಕ್ಕೆ ಬೆಳ್ಳಿ ಪದಕ ಖಾತರಿಪಡಿಸಿರುವ ರವಿಕುಮಾರ್‌ಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್, ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರಸ್ಲರ್ ರೀತು ಫೋಗಟ್, ಕ್ರಿಕೆಟರ್ ಮನೋಜ್ ತಿವಾರಿ ಸೇರಿ ಹಲವಾರು ಮಂದಿ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.

ಭಾರತಕ್ಕೆ ಎರಡು ಬೆಳ್ಳಿ, ಎರಡು ಕಂಚಿನ ಪದಕಗಳು
ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈಗ ನಾಲ್ಕು ಪದಕಗಳು ಬಂದಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಮೂರನೇ ಪದಕವಾಗಿ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದಾರೆ. ಈಗ ರವಿ ಮತ್ತೊಂದು ಬೆಳ್ಳಿ ಖಾತರಿಪಡಿಸಿದ್ದಾರೆ. 4 ಆಗಸ್ಟ್ 5 PM ವೇಳೆ ಭಾರತದ ಖಾತೆಯಲ್ಲಿ ಎರಡು ಬೆಳ್ಳಿ, ಎರಡು ಕಂಚಿನ ಪದಕಗಳು ಇದ್ದವು. ಪದಕ ಪಟ್ಟಿಯಲ್ಲಿ ಭಾರತ 62ನೇ ಸ್ಥಾನದಲ್ಲಿತ್ತು. ಇನ್ನು ಪುರುಷರ ಅಥ್ಲೆಟಿಕ್ಸ್ ವಿಭಾಗದ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಪದಕ ಬರುವುದರಲ್ಲಿದೆ. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ನಿರಾಸೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications