ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧದ ಗೆಲುವಿನ ಶ್ರೇಯಸ್ಸನ್ನು ಪತ್ನಿಗೆ ಸಲ್ಲಿಸಿದ ಅತನು ದಾಸ್

ಟೋಕಿಯೋ, ಜುಲೈ 29: ಭಾರತದ ಆರ್ಚರ್ ಅತನು ದಾಸ್ ಗುರುವಾರ ಭರ್ಜರಿ ಪ್ರದರ್ಶನ ನೀಡಿದ್ದು ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಜಯ ಸಾಧಿಸಿದ್ದಾರೆ. ಅತನು ದಾಸ್ ಅವರ ಈ ಸಾಧನೆಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇನ್ನು ಈ ಗೆಲುವಿನ ಬಳಿಕ ಅತನು ದಾಸ್ ಪ್ರತಿಕ್ರಿಯೆ ನೀಡಿದ್ದಾರೆ.
ದಕ್ಷಿಣ ಕೊರಿಯಾದ ಜಿನ್ ಹ್ಯೇಕ್ ವಿರುದ್ಧದ ಪಂದ್ಯದಲ್ಲಿ ಅತನು ದಾಸ್ 6-4 ಅಂತರದಲ್ಲಿ ಜಯ ಸಾಧಿಸಿದರು. ಈ ಪಂದ್ಯದ ಸಂದರ್ಭದಲ್ಲಿ ಅತನು ದಾಸ್ ಪತ್ನಿ ಮಹಿಳಾ ವಿಭಾಗದ ನಂಬರ್ 1 ಆರ್ಚರ್ ದೀಪಿಕಾ ಕುಮಾರಿ ಅತನುಗೆ ಗ್ಯಾಲರಿಯಲ್ಲಿ ಕುಳಿತು ಹುರಿದುಂಬಿಸುತ್ತಿದ್ದರು. ಪತ್ನಿಯ ಪ್ರೋತ್ಸಾಹದ ಮಾತುಗಳನ್ನು ತಾನು ಆಲಿಸುತ್ತಿದ್ದೆ ಎಂದು ಅತನು ದಾಸ್ ಹೇಳಿದ್ದಾರೆ.
"ಪಂದ್ಯದುದ್ದಕ್ಕೂ ನಾನು ಆಕೆಯ ಪ್ರೋತ್ಸಾಹವನ್ನು ಆಲಿಸುತ್ತಿದ್ದೆ. ನನ್ನನ್ನು ಆಕೆ ಹುರಿದುಂಬಿಸುತ್ತಿದ್ದಳು. 'ತನ್ನೊಳಗೆ ನಂಬಿಕೆಯಿಡು, ನಿನ್ನಿಂದ ಇದು ಸಾಧ್ಯವಿದೆ. ತಾಳ್ಮೆಯಿಂದಿದ್ದು ಪರಿಸ್ಥಿತಿಯನ್ನು ಎದುರಿಸು' ಎಂದು ಉತ್ಸಾಹವನ್ನು ತುಂಬಿಸುತ್ತಿದ್ದಳು" ಎಂದು ಅತನು ದಾಸ್ ಹೇಳಿದ್ದಾರೆ.
"ಆಕೆ ನಂಬರ್ ವನ್ ಆಟಗಾರ್ತಿ. ಈ ಸಂದರ್ಭದಲ್ಲಿ ಪತ್ನಿ ಜೊತೆಯಿದ್ದದ್ದು ನನ್ನ ಅದೃಷ್ಟ. ಇದು ಅತ್ಯುತ್ತಮವಾದ ಬೆಂಬಲ ಹಾಗೂ ಪ್ರೋತ್ಸಾಹವಾಗಿದೆ" ಎಂದು ಅತನು ದಾಸ್ ಪತ್ನಿಯ ಪ್ರೋತ್ಸಾಹದ ಮಾತುಗಳ ಬಗ್ಗೆ ವಿವರಿಸಿದರು. ಇನ್ನು ಇದೇ ಸಂದರ್ಭದಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಪತ್ನಿಯ ಜೊತೆಗೆ ಸ್ಪರ್ಧಿಸುವ ಅವಕಾಶ ದೊರೆಯದ ಬಗ್ಗೆ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ ಅತನು ದಾಸ್.
"ನಾನು ಆಕೆಯೊಂದಿಗೆ ಮಿಶ್ರ ತಂಡದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯನ್ನು ಹೊಂದಿದ್ದೆ. ದುರಾದೃಷ್ಟವಶಾತ್ ಇದು ಸಾಧ್ಯವಾಗಲಿಲ್ಲ. ಅದು ಯಾಕೆಂದು ನನಗೆ ಗೊತ್ತಿಲ್ಲ. ಆದರೆ ಸ್ವಲ್ಪ ನಿರಾಳತೆಯೆಂದರೆ ನಾವಿಬ್ಬರೂ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದೇವೆ. ಮುಂದೇನಾಗುತ್ತೆ ನೋಡೋಣ" ಎಂದು ಅತನು ದಾಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications