
ಚಳಿಗಾಲದ ಒಲಿಂಪಿಕ್ಸ್ ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿದೆ. ಆದರೆ ಈ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ಚೀನಾ ತನ್ನ ದುಷ್ಟ ಬುದ್ದಿಯನ್ನು ತೋರಿಸಿದ್ದ ಭಾರತದ ಕೆಂಗಣ್ಣಿಗೆ ಕಾರಣವಾಗಿತ್ತು. ಇದೀಗ ತನ್ನ ನಡೆಯನ್ನು ಚೀನಾ ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭಕ್ಕೂ ಮುನ್ನ ನಡೆಯುವ ಕ್ರೀಡಾ ಜ್ಯೋತಿಯ ಮಾರ್ಚ್‌ನಲ್ಲಿ ಗಲ್ವಾನ್ ವ್ಯಾಲಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಘರ್ಷಣೆಯಲ್ಲಿ ಭಾಗಿಯಾಗಿದ್ದ ಸೈನಿಕನಿಗೆ ಅವಕಾಶ ನೀಡಿತ್ತು.
ಚೀನಾದ ಈ ನಡೆಯನ್ನು ಖಂಡಿಸಿ ಭಾರತ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಒಲಿಂಪಿಕ್ಸ್ ಕ್ರೀಡಾಕೂಟವನ್ನು ಚೀನಾ ಈ ರೀತಿಯಾಗಿ ಬಳಸಿಕೊಳ್ಳುತ್ತಿರುವುದು ವಿಷಾದದ ವಿಚಾರ ಎಂದಿರುವ ಭಾರತ ರಾಜತಾಂತ್ರಿಕ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡಿತ್ತು. ಪಿಎಲ್‌ಎ ಕಮಾಂಡರ್‌ಅನ್ನು ಟಾರ್ಚ್ ಬೇರರ್ ಆಗಿ ಆಯ್ಕೆ ಮಾಡಿರುವ ವಿಚಾರವಾಗಿ ಸೋಮವಾರ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು ತನ್ನ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದೆ. "ತನ್ನ ಈ ನಡೆಯನ್ನು ಭಾರತ ತರ್ಕಬದ್ಧವಾಗಿ ಹಾಗೂ ವಸ್ತುನಿಷ್ಠ ದೃಷ್ಟಿಕೋನದಿಂದ ನೋಡಬೇಕಿದೆ" ಎಂದು ಚೀನಾ ಹೇಳಿದೆ.
ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಚೀನಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂಬ ಕಾರಣಕ್ಕೆ ಅಮೆರಿಕಾ, ಯುಕೆ, ಆಸ್ಟ್ರೇಲಿಯಾ ಹಾಗೂ ಕೆನಡಾ ದೇಶಗಳು ಉದ್ಘಾಟನಾ ಸಮಾರಂಭಕ್ಕೆ ಈ ಮೊದಲೇ ಬಹಿಷ್ಕಾರ ಹಾಕಿದ್ದವು. ಈ ಬಗ್ಗೆ ಕೂಡ ಮಾತನಾಡಿರುವ ಚೀನಾ ಈ ದೇಶಗಳು ಕ್ರೀಡಾ ಕೂಟವನ್ನು ರಾಜಕೀಯಗೊಳಿಸುತ್ತಿದೆ ಎಂದು ತಿರುಗೇಟು ನೀಡಿದೆ.
ಚೀನಾದಲ್ಲಿ ಆಯೋಜನೆಯಾಗುತ್ತಿರುವ ಈ ಚಳಿಗಾಲದ ಒಲಿಂಪಿಕ್ಸ್‌ನಿಂದ ಅಮೇರಿಕಾ, ಕೆನಡಾ, ಯುಕೆ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ರಾಜತಾಂತ್ರಿಕ ಬಹಿಷ್ಕಾರವನ್ನು ಈ ಮೊದಲೇ ಹಾಕಿತ್ತು. ಆದರೆ ಭಾರತ ಉನ್ನತ ಮಟ್ಟದ ರಾಜತಾಂತ್ರಿಕ ಪ್ರತಿನಿಧಿಗಳನ್ನು ಕಳುಹಿಸದಿರಲು ನಿರ್ಧರಿಸಿದ್ದರೂ ರಾಜತಾಂತ್ರಿಕ ಬಹಿಷ್ಕಾರದ ಘೋಷಣೆಯನ್ನು ಆರಂಭದಲ್ಲಿ ಮಾಡಿರಲಿಲ್ಲ. ಆದರೆ ಚೀನಾ ಈ ಹಿಂದೆ ಗಲ್ವಾನ್ ವ್ಯಾಲಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಘರ್ಷಣೆಯಲ್ಲಿ ಭಾಗಿಯಾಗಿದ್ದ ಸೈನಿಕನೊರ್ವನಿಗೆ ಸಾಂಪ್ರದಾಯಿಕ ಒಲಿಂಪಿಕ್ಸ್ ಜ್ಯೋತಿ ರಿಲೇಯಲ್ಲಿ ಅವಕಾಶ ನೀಡಿದ ನಂತರ ರಾಜತಾಂತ್ರಿಕ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡಿತು.
ಇನ್ನು ಭಾರತದ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದರು. ಈ ಸಂದರ್ಭದಲ್ಲಿ ಅವರು "ಚೀನಾ ಒಲಿಂಪಿಕ್ಸ್ ಅನ್ನು ರಾಜಕೀಯಗೊಳಿಸಲು ಆಯ್ಕೆ ಮಾಡಿಕೊಂಡಿರುವುದು ವಿಷಾದನೀಯ. ಹೀಗಾಗಿ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಹಾಗು ಸಮಾರೋಪ ಸಮಾರಂಭದಲ್ಲಿ ಭಾರತೀಯ ರಾಯಭಾರಿ ಪಾಲ್ಗೊಳ್ಳುವುದಿಲ್ಲ" ಎಂದಿದ್ದರು.
ಭಾರತ ತೆಗೆದುಕೊಂಡ ಈ ನಿರ್ಧಾರದ ನಂತರ ಈ ವರ್ಷದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತದ ಏಕೈಕ ಕ್ರೀಡಾಪಟು ಆರಿಫ್ ಖಾನ್ ತಮ್ಮ ಸಹಾಯಕರೊಂದಿಗೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಜಮ್ಮು ಕಾಶ್ಮಿರ ಮೂಲದ ಆರಿಫ್ ಖಾನ್ ಸ್ಲಾಲೋಮ್ ಈವೆಂಟ್‌ನಲ್ಲಿ (ಆಲ್ಪೈನ್ ಸ್ಕೀಯಿಂಗ್) ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.