ಶುಕ್ರವಾರ, ಆಗಸ್ಟ್ 25ರಂದು ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಒಟ್ಟು 3 ಭಾರತೀಯರು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ವಿಶ್ವಮಟ್ಟದಲ್ಲಿ ನೀರಜ್ ಚೋಪ್ರಾ ಅವರ ಪ್ರಾಬಲ್ಯದ ನಡುವೆ ಜಾವೆಲಿನ್ ಕ್ರೀಡೆಯ ಬೆಳವಣಿಗೆಯನ್ನು ಪ್ರದರ್ಶಿಸಿದರು.
ಐತಿಹಾಸಿಕ ಸಾಧನೆಯಲ್ಲಿ ಅರ್ಹತಾ ಸುತ್ತಿಗೆ ಪ್ರವೇಶಿಸಿದ ನೀರಜ್ ಚೋಪ್ರಾ, ಡಿಪಿ ಮನು ಮತ್ತು ಕಿಶೋರ್ ಜೆನಾ ಈ 3 ಭಾರತೀಯರು ಬುಡಾಪೆಸ್ಟ್‌ನಲ್ಲಿ ಉತ್ತಮ ಪ್ರದರ್ಶನದೊಂದಿಗೆ 12 ಜನರ ಫೈನಲ್‌ಗೆ ಪ್ರವೇಶಿಸಿದರು.

ಬುಡಾಪೆಸ್ಟ್‌ನಲ್ಲಿ ನಡೆಯುವ ಪುರುಷರ ಜಾವೆಲಿನ್ ಪಂದ್ಯಾವಳಿಯ ಫೈನಲ್‌ನಲ್ಲಿ 12 ಪುರುಷ ಆಟಗಾರರಲ್ಲಿ 4 ಮಂದಿ ಭಾರತ ಮತ್ತು ಪಾಕಿಸ್ತಾನದವರಾಗಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಗಾಯದ ಹಿನ್ನಡೆಯಿಂದ ಉತ್ತಮವಾಗಿ ಚೇತರಿಸಿಕೊಂಡರು ಮತ್ತು ಸ್ವಯಂಚಾಲಿತವಾಗಿ ಫೈನಲ್ ಅರ್ಹತಾ ಸ್ಥಾನಗಳನ್ನು ಗಿಟ್ಟಿಸಿದ ಮೂವರಲ್ಲಿ ಒಬ್ಬರಾಗಿದ್ದಾರೆ. ಇನ್ನಿಬ್ಬರೆಂದರೆ ನೀರಜ್ ಚೋಪ್ರಾ ಮತ್ತು ಜಾಕೂಬ್ ವಡ್ಲೆಜ್.
ನೀರಜ್ ಚೋಪ್ರಾ ಅರ್ಹತಾ ಸುತ್ತಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 88.77 ಮೀ ಜಾವೆಲಿನ್ ಎಸೆಯುವ ಮೂಲಕ ಅಗ್ರಸ್ಥಾನ ಪಡೆದರು. ವಿಶ್ವ ವೇದಿಕೆಯ ಮೈದಾನದಲ್ಲಿ ಪ್ರಾಬಲ್ಯ ಸಾಧಿಸಲು ಕೇವಲ ಒಂದು ಎಸೆತವಷ್ಟೇ ಸಾಕಾಯಿತು.
ಇನ್ನು ಪಾಕಿಸ್ತಾನದ ಅರ್ಷದ್ ನದೀಮ್ ತಮ್ಮ ಅಂತಿಮ ಪ್ರಯತ್ನದಲ್ಲಿ 86.79 ಮೀಟರ್ ಎಸೆದು 2ನೇ ಸ್ಥಾನ ಪಡೆದರೆ, ಟೊಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜಾಕೂಬ್ ವಡ್ಲೆಜ್ 83.50 ಮೀಟರ್‌ನ ಅತ್ಯುತ್ತಮ ಪ್ರಯತ್ನದೊಂದಿಗೆ ಅರ್ಹತೆ ಸುತ್ತಿನಲ್ಲಿ 3ನೇ ಸ್ಥಾನ ಪಡೆದರು.

ಐತಿಹಾಸಿಕ ಸಾಧನೆ ಮಾಡಿದ ಭಾರತ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 3 ಭಾರತೀಯ ಪುರುಷ ಜಾವೆಲಿನ್ ಎಸೆತಗಾರರು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಭಾನುವಾರ, ಆಗಸ್ಟ್ 27ರಂದು ಫೈನಲ್ ನಡೆಯಲಿದೆ.
ಕಳೆದ ವರ್ಷ ಆಂಡರ್ಸನ್ ಪೀಟರ್ಸ್ ನಂತರ ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಮತ್ತು ರೋಹಿತ್ ಯಾದವ್ ಫೈನಲ್‌ಗೆ ಅರ್ಹತೆ ಪಡೆದಿದ್ದರು.
ಈ ವರ್ಷದ ಆರಂಭದಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಡಿಪಿ ಮನು 81.31 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ 6ನೇ ಸ್ಥಾನ ಪಡೆದು ಅರ್ಹತೆ ಪಡೆದರು.

ಇದೇ ವೇಳೆ ಅರ್ಹತಾ ಗ್ರೂಪ್ ಬಿನಲ್ಲಿ ಏಕೈಕ ಭಾರತೀಯನಾಗಿದ್ದ ಕಿಶೋರ್ ಜೆನಾ 80.55 ಮೀ ಅತ್ಯುತ್ತಮ ಪ್ರಯತ್ನದೊಂದಿಗೆ 9ನೇ ಸ್ಥಾನದಲ್ಲಿ ಅರ್ಹತೆ ಪಡೆದರು.
"ನನ್ನ ಗುರಿ 85 ಮೀ ಮಾರ್ಕ್ ಅನ್ನು ಸಾಧಿಸುವುದಾಗಿತ್ತು. ನಾನು ಫೈನಲ್ ಬಗ್ಗೆ ಯೋಚಿಸಲಿಲ್ಲ, ಆದರೆ ನನ್ನ ಗಮನವು ಹೊಸ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ. ಪಂದ್ಯಾವಳಿ ಆರಂಭದ ಮೊದಲು ನಾನು ಉತ್ತಮ ಅಭ್ಯಾಸಗಳನ್ನು ಹೊಂದಿರಲಿಲ್ಲ. ಅದು ಇಂದಿನ ನನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂದು ನಾನು ಭಾವಿಸುತ್ತೇನೆ".
"ಬಿ ಗುಂಪಿನಲ್ಲಿ ಏನಾಗಲಿದೆ ಮತ್ತು ಫೈನಲ್‌ನಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ," ಎಂದು ಫೈನಲ್‌ಗೆ ಅರ್ಹತೆ ಪಡೆದ ನಂತರ ಡಿಪಿ ಮನು ತಿಳಿಸಿದರು.