Neeraj Chopra: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರ
ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಂಗೇರಿಯಾ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಫೈನಲ್‌ನಲ್ಲಿ 88.17 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಚಿನ್ನದ ಪದಕಕ್ಕೆ ಕೊರಳೋಡ್ಡುವಂತೆ ಮಾಡಿದ್ದಾರೆ.
2022ರಲ್ಲಿಯೂ ಈ ಸಾಧನೆಯ ಸನಿಹಕ್ಕೆ ತಲುಪಿದ್ದ ನೀರಜ್ ಚೋಪ್ರ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಅದು ಕೂಡ ಭಾರತದ ಮಟ್ಟಿಗೆ ಶ್ರೇಷ್ಠ ಸಾಧನೆಯಾಗಿತ್ತು. ಯಾಕೆಂದರೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅದು ಭಾರತ ಗೆದ್ದ ಪ್ರಪ್ರಥಮ ಬೆಳ್ಳಿ ಪದಕವಾಗಿತ್ತು. ಇದೀಗ ನೀರಜ್ ಚೋಪ್ರ ಮೂಲಕವೇ ಭಾರತ ಚಿನ್ನದ ಪದಕವನ್ನು ಕೂಡ ಗೆದ್ದಂತಾಗಿದೆ.

ಫೈನಲ್‌ನಲ್ಲಿ ನಿರೀಕ್ಷೆಂತೆಯೇ ಭಾರತದ ನೀರಜ್ ಚೋಪ್ರಗೆ ನಿಕಟ ಸ್ಪರ್ಧೆಯನ್ನು ನೀಡಿದ್ದು ಜರ್ಮನಿಯ ಜೂಲಿಯನ್ ವೇಬೆರ್ ಹಾಗೂ ಪಾಕಿಸ್ತಾನದ ಅರ್ಷದ್ ನದೀಮ್. ಮೊದಲ ಅವಕಾಶವನ್ನು ಫೌಲ್ ಮಾಡಿದ್ದ ನೀರಜ್ ಚೋಪ್ರ ಎರಡನೇ ಅವಕಾಶದಲ್ಲಿ 88.17 ಮೀಟರ್ ದೂರಕ್ಕೆ ಎಸೆದಿದ್ದರು. ಇದೇ ಸಂದರ್ಭದಲ್ಲಿ ಜರ್ಮನಿಯ ವೇಬೆರ್ 85.79 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದರು.
ಮೂರನೇ ಅವಕಾಶದಲ್ಲಿ ನೀರಜ್ 86.32 ಮೀಟರ್ ದೂರಕ್ಕೆ ಎಸೆದರೆ ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ದೂರಕ್ಕೆ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೇರಿದ್ದರು. ಇನ್ನು ನಾಲ್ಕನೇ ಅವಕಾಶದಲ್ಲಿಯೂ ನೀರಜ್ ಚೋಪ್ರ ಅವರ 88.17 ಮೀಟ್ ದೂರಕ್ಕೆ ಎಸೆದ ಸಾಧನೆಯನ್ನು ಹಿಂದಿಕ್ಕಲು ಉಳಿದ ಜಾವೆಲಿನ್ ಎಸೆತಗಾರರಿಗೆ ಸಾಧ್ಯವಾಗಲಿಲ್ಲ. ನಾಲ್ಕನೇ ಅವಕಶದಲ್ಲಿ ಸ್ವತಃ ಚೋಪ್ರ 84.64 ಮೀಟರ್ ದೂರಕ್ಕೆ ಎಸೆದರೆ ಅರ್ಷದ್ ನದೀಮ್ 87.15 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು.
ಐದನೇ ಸುತ್ತಿನಲ್ಲಿಯೂ ನೀರಜ್ ಚೋಪ್ರ ಅವರನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಈ ಸುತ್ತಿನಲ್ಲಿ ಜೆಕ್ ರಿಪಬ್ಲಿಕ್‌ನ ಜಾಕೂಬ್ ವಡ್ಲೇಜ್ 86.67 ಮೀಟರ್ ದೂರಕ್ಕೆ ಎಸೆದಿದ್ದರೆ ನೀರಜ್ ಚೋಪ್ರ 87.73 ಮೀಟರ್ ದೂರಕ್ಕೆ ಎಸೆದರು. ಪಾಕಿಸ್ತಾನದ ಅರ್ಷದ್ ಫೌಲ್ ಮಾಡಿಕೊಂಡಿದ್ದರು.
ಇನ್ನು ಕೊನೆಯ ಸುತ್ತಿನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 81.86 ಮೀಟರ್ ದೂರಕ್ಕೆ ಎಸೆಯಲು ಮಾತ್ರವೇ ಶಕ್ತವಾಗಿದ್ದರು. ನೀರಜ್ ಚೋಫ್ರ ಈ ಸುತ್ತಿನಲ್ಲಿ 83.98 ಮೀಟರ್ ದೂರಕ್ಕೆ ಎಸೆದಿದ್ದರು. ಈ ಮೂಲಕ ಎರಡನೇ ಸುತ್ತಿನಲ್ಲಿ ನೀರಜ್ ಚೋಪ್ರ ಅವರ 88.17 ಮೀಟರ್ ದೂರಕ್ಕೆ ಎಸೆದ ಸಾಧನೆಯೇ ಅಗ್ರಸ್ಥಾನದಲ್ಲಿತ್ತು. ಹೀಗಾಗಿ ನೀರಜ್ ಚೋಪ್ರ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡರು.
ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಎರಡನೇ ಪದಕವಾಗಿದ್ದರೆ ಭಾರತದ ಕೇವಲ ಮೂರನೇ ಇದಕ ಇದಾಗಿದೆ. ಕಳೆದ ವರ್ಷ ಒರೆಗಾನ್‌ನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರ ಬೆಳ್ಳಿ ಪದಕ ಗೆದ್ದಿದ್ದು ಭಾರತದ ಈವರೆಗಿನ ಅತ್ಯುನ್ನತ ಸಾಧನೆಯಾಗಿತ್ತು. . ಅದಕ್ಕೂ ಮುನ್ನ 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದು ಭಾರತದ ಪಾಲಿಗೆ ಮೊಟ್ಟ ಮೊದಲ ಪದಕವಾಗಿತ್ತು. ಹೀಗಾಗಿ ನೀರಜ್ ಚೋಪ್ರ ಅವರು ಈ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಾಡಿರುವ ಸಾಧನೆ ಅತ್ಯಂತ ಮೌಲ್ಯಯುತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications