ಏನ್ಮಾಡ್ಲಿ ಸರ್,ನನ್ನ ಹತ್ರ ದುಡ್ಡಿಲ್ಲ, ಸ್ನೇಹಿತರೂ ಇಲ್ಲ ; ತಿಹಾರ್ ಜೈಲು ಸೇರುವ ಮುನ್ನ ರಾಜ್‌ಪಾಲ್ ಯಾದವ್ ಕಣ್ಣೀರು

By Sarvesh Mithare

ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಮೇಲ್ನೋಟಕ್ಕೆ ಹಲವರಿಗೆ ಚಿತ್ರರಂಗದವರ ಬದುಕು ಸುಂದರವಾಗಿ ಕಂಡರೂ ಕೂಡ ವಾಸ್ತವದಲ್ಲಿ ಹಲವರು ಕತ್ತಲ ಕೋಣೆಯೊಳಗೆ ಕಣ್ಣೀರು ಹಾಕುತ್ತಿರುತ್ತಾರೆ.

ಬಣ್ಣವನ್ನೇ ನಂಬಿದವರಿಗೆ ಕೆಲ ಒಮ್ಮೆ ಅದೃಷ್ಟ ಹೇಗೆ ಕೈ ಕೊಡುತ್ತೆ ಅಂದರೆ ಒಂದಾದ ಮೇಲೊಂದರಂತೆ ಕಷ್ಟಗಳು ಒತ್ತರಿಸಿಕೊಂಡು ಬರುತ್ತವೆ. ಅದರಲ್ಲಿಯೂ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ಹೆಸರು ಮಾಡಿದ ಹಲವರು ನಿಜ ಜೀವನದಲ್ಲಿ ಹೇಳಿಕೊಳ್ಳಲಾರದಂಥ ಸಂಕಟ ಅನುಭವಿಸುತ್ತಿರುತ್ತಾರೆ. ಉದಾಹರಣೆಗೆ ರಾಜ್‌ಪಾಲ್ ಯಾದವ್.


The Comedy King s Loneliest Bow A Penniless Rajpal Yadav Surrenders as Friends Vanish

ಹೌದು, ರಾಜ್‌ಪಾಲ್ ಯಾದವ್.. ಬಾಲಿವುಡ್‌ನ ಒನ್ ಆಫ್ ದಿ ಬೆಸ್ಟ್ ಕಾಮೆಡಿಯನ್. '' ಜಂಗಲ್''.. ''ಹಂಗಾಮಾ''.. ''ಫಿರ್ ಹೇರಾ ಪೇರಿ''.. ''ಚುಪ್ ಚುಪ್ ಕೇ''.. ''ಭೂಲ್ ಭೂಲಯ್ಯ''.. ಹೀಗೆ ಒಂದಾ.. ಎರಡಾ.. ಹಲವಾರು ಚಿತ್ರ.. ತರಹೇವಾರಿ ಪಾತ್ರಗಳ ಮೂಲಕ ಹತ್ ಹತ್ರ 30 ವರ್ಷಗಳಿಂದ ಮನೆ ಮಾತಾದವರು ರಾಜ್‌ಪಾಲ್ ಯಾದವ್.

ಆದರೆ ಇಂದು ಇದೇ ರಾಜ್‌ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಅಸಹಾಯಕರಾಗಿ ತಿಹಾರ್ ಜೈಲು ಸೇರಿದ್ದಾರೆ. ಜೈಲು ಸೇರುವ ಮುನ್ನ ಕಣ್ಣೀರನ್ನು ಹಾಕಿದ್ದಾರೆ.

ನಿಮಗೆ ಗೊತ್ತಿರಲಿ.. ಅಸಲಿಗೆ 2010 ರಲ್ಲಿ ರಾಜಪಾಲ್ ಯಾದವ್ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದ ಹೆಸರು ''ಅತಾ ಪತಾ ಲಾಪತಾ''. ಬಾಕ್ಸಾಫೀಸ್‌ನಲ್ಲಿ ಹೇಳ ಹೆಸರಿಲ್ಲದಂತೆ ಕಾಣೆಯಾದ ಈ ಚಿತ್ರಕ್ಕೆ ರಾಜ್ ಪಾಲ್ ಯಾದವ್ ಆ ಕಾಲದಲ್ಲಿ 5 ಕೋಟಿ ಸಾಲವನ್ನು ಮಾಡಿದ್ದರು.

ಆದರೆ ಹಣ ಮರಳಿ ನೀಡುವಲ್ಲಿ ವಿಫಲರಾಗಿದ್ದರು. ಆ ನಂತರ ಬಡ್ಡಿ ಸೇರಿ ಈ ಮೊತ್ತ 9 ಕೋಟಿಯಾಗಿತ್ತು. ಆಗಲೂ ಕೂಡ ಹಣ ಮರಳಿ ಬರಲಿಲ್ಲ. ಈ ಹಿನ್ನೆಲೆ ಬೇಸತ್ತು ಎಂ.ಎಸ್ ಮುರಳಿ ಪ್ರೊಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿತ್ತು. ಆಗ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿತ್ತು. ಸೆಷನ್ಸ್ ನ್ಯಾಯಾಲಯ ಕೂಡ 2019ರಲ್ಲಿ ಈ ತೀರ್ಪನ್ನು ಎತ್ತಿ ಹಿಡಿದಿತ್ತು.


The Comedy King s Loneliest Bow A Penniless Rajpal Yadav Surrenders as Friends Vanish

ಆ ನಂತರ ಬೇರೆ ದಾರಿ ಇಲ್ಲದೆ ರಾಜ್‌ಪಾಲ್ ಯಾದವ್ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಸಮಯದಲ್ಲಿ ಹೈಕೋರ್ಟ್‌ನ ಪೀಠ ಶಿಕ್ಷೆಯ ಆದೇಶವನ್ನು ರದ್ದು ಮಾಡಿತ್ತು. ಈ ಹಣಕಾಸಿನ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಳ್ಳುವ ಭರವಸೆಯನ್ನು ಆಗ ರಾಜ್‌ಪಾಲ್ ಯಾದವ್ ನ್ಯಾಯಾಲಯಕ್ಕೆ ನೀಡಿದ್ದರು.

ಆದರೆ ಭರವಸೆ ಭರವಸೆಯಾಗಿಯೇ ಉಳಿಯಿತು. 2025ರಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಎರಡು ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ರಾಜ್‌ಪಾಲ್ ಯಾದವ್ ನೀಡಿದರಾದರೂ ಪೂರ್ತಿ ಹಣ ಮರಳಿಸಲು ಸಾಧ್ಯವಾಗಲೇ ಇಲ್ಲ. ಈ ಹಿನ್ನೆಲೆ ಮೊನ್ನೆ ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರಣ ಕಾಂತ್ ಶರ್ಮಾ, ಪ್ರಕರಣ ಇತ್ಯರ್ಥ ಪಡಿಸುವಲ್ಲಿ ಗಂಭೀರತೆಯ ಕೊರತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನ್ಯಾಯಾಲಯದ ಮುಂದೆ ನೀಡಲಾದ ಭರವಸೆಗಳನ್ನು ಪದೇ ಪದೇ ಉಲ್ಲಂಘಿಸಿದ ಹಿನ್ನೆಲೆ ಜೈಲು ಅಧಿಕಾರಿಗಳ ಮುಂದೆ ಫೆಬ್ರವರಿ 4ರ ಸಂಜೆ 4 ಗಂಟೆಯೊಳಗೆ ಶರಣಾಗುವಂತೆ ಜಡ್ಜ್ ಸ್ವರಣ ಕಾಂತ್ ಶರ್ಮಾ ಆದೇಶ ಹೊರಡಿಸಿದ್ದರು.

ಒಂದು ವಾರ ಕಾಲಾವಕಾಶ ನೀಡುವಂತೆ ರಾಜ್‌ಪಾಲ್ ಯಾದವ್ ಮನವಿ ಮಾಡಿದರೂ ಮನವಿಯನ್ನು ತಿರಸ್ಕರಿಸಿದರು. ಈ ಹಿನ್ನೆಲೆ ಬೇರೆ ದಾರಿ ಇಲ್ಲದೇ ರಾಜ್‌ಪಾಲ್‌ ಯಾದವ್ ಫೆಬ್ರವರಿ 4ರಂದು ತಿಹಾರ್ ಜೈಲಿಗೆ ಶರಣಾದರು. ಇದೇ ಸಮಯದಲ್ಲಿ ಭಾವುಕರಾಗಿದ್ದ ರಾಜ್‌ಪಾಲ್ ಯಾದವ್ ಶರಣಾಗುವ ಮುನ್ನ ಸರ್ ನಾನೇನು ಮಾಡಲಿ..? ನನ್ನ ಬಳಿ ಹಣ ಇಲ್ಲ. ಬೇರೆ ದಾರಿ ಕೂಡ ಕಾಣ್ತಿಲ್ಲ ಎಂದು ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ್ದಾರೆ. ನಾನು ಒಬ್ಬಂಟಿ, ನನಗೆ ಯಾವ ಸ್ನೇಹಿತರು ಇಲ್ಲ, ಈ ಬಿಕ್ಕಟ್ಟನ್ನು ನಾನೇ ನಿಭಾಯಿಸಬೇಕು ಎಂದು ಬಿಕ್ಕಿದ್ದಾರೆ ಎಂದು ''ನ್ಯೂಸ್ ಎಕ್ಸ್'' ವರದಿ ಮಾಡಿದೆ.

ಸದ್ಯ ರಾಜ್‌ಪಾಲ್ ಯಾದವ್ ಅವರ ಈ ಕರುಣಾಜನಕ ಕಥೆ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಹಲವರು ಮರುಗುತ್ತಿದ್ದಾರೆ. ಯಾರಾದರೂ ಒಬ್ಬ ಸ್ಟಾರ್ ಆದರೂ ಅವರಿಗೆ ಸಹಾಯ ಮಾಡಿ ಈ ಸಂಕಷ್ಟದಿಂದ ಅವರನ್ನು ಪಾರು ಮಾಡಬಹುದಿತ್ತು..? ಆದರೆ, ಅವರಿಗ್ಯಾರಿಗೂ ಬೇಕಿಲ್ಲ. ಯಾರಲ್ಲಿಯೂ ಸಹಾಯದ ಮನೋಭಾವ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಾಜ್‌ಪಾಲ್ ಯಾದವ್ ಜೊತೆ ಕೆಲಸ ಮಾಡಿ ದುಡ್ಡು ಎಣಿಸಿದ ಸೂಪರ್ ಸ್ಟಾರ್ ಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.

Credit: Filmibeat

Story first published: Tuesday, February 10, 2026, 10:36 [IST]
Other articles published on Feb 10, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+