
ನವದೆಹಲಿ ಏ. 27: ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಮತ್ತು ಡಬಲ್ಸ್ ಖ್ಯಾತ ರೋಹನ್ ಬೋಪಣ್ಣ ಹೆಸರನ್ನು ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ (ಎಐಟಿಎ) ಅರ್ಜಿನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಎಐಟಿಎ ಕಾರ್ಯದರ್ಶಿ ಹಿರಣ್ಮಯ್ ಚಟರ್ಜೀ ಅವರು ಭಾರತದ ಪ್ರತಿಭಾನ್ವಿತ ಇಬ್ಬರು ಟೆನಿಸ್ ಆಟಗಾರರ ನಾಮಪತ್ರವನ್ನು ಅರ್ಜುನ ಪ್ರಶಸ್ತಿಗಾಗಿ ಸಲ್ಲಿಸಿರುವ ವಿಚಾರವನ್ನು ಖಾತರಿಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಚಟರ್ಜೀ, 'ಹೌದು. ನಾವು ಇಬ್ಬರು ಆಟಗಾರರ ಹೆಸರುಗಳನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿದ್ದೇವೆ' ಎಂದಿದ್ದಾರೆ.
ಯೂಕಿ ಭಾಂಬ್ರಿ ಇತ್ತೀಚೆಗಷ್ಟೇ ಟೆನಿಸ್ ವಿಶ್ವ ರ್ಯಾಂಕಿಂಗ್ ನಲ್ಲಿ ಅಗ್ರ ನೂರರೊಳಗೆ ಗುರುತಿಸಿಕೊಂಡು ಗಮನ ಸೆಳೆದಿದ್ದರು. ಪ್ರಕಟಿತ ಹೊಸ ರ್ಯಾಂಕಿಂಗ್ ನಲ್ಲಿ ಅವರು ಜೀವನಶ್ರೇಷ್ಠ 83ನೇ ರ್ಯಾಂಕಿಂಗ್ ಗೇರಿದ ಸಾಧನೆ ಮಾಡಿದ್ದರು.
ಭಾಂಬ್ರಿಯೂ ಈ ಕುರಿತು ಖುಷಿ ವ್ಯಕ್ತಪಡಿಸಿದ್ದಾರೆ. 'ನನ್ನ ಹೆಸರನ್ನು ಸೂಚಿಸಿರುವುದು ನನ್ನ ಪಾಲಿಗೆ ನಿಜಕ್ಕೂ ಹೆಮ್ಮೆಯ ವಿಚಾರ. ಇನ್ನೂ ಹೆಚ್ಚಿನ ಶ್ರಮ ವಹಿಸಲು ನನಗಿದು ಒಂದು ರೀತಿಯಲ್ಲಿ ಪ್ರೇರಣೆ' ಎಂದವರು ಹೇಳಿದ್ದಾರೆ.
ಬೋಪಣ್ಣ ಈ ಹಿಂದೆ ಕೆನಡಿಯನ್ ಆಟಗಾರ್ತಿ ಗಾಬ್ರಿಯೆಲಾ ಡಬ್ರೋಸ್ಕಿಅವರೊಂದಿಗೆ ಮಿಶ್ರ ಡಬಲ್ಸ್ ನಲ್ಲಿ ಸ್ಪರ್ಧಿಸಿ ಫ್ರೆಂಚ್ ಓಪನ್ ಜಯಿಸಿದ ಸಾಧನೆ ಮೆರೆದಿದ್ದರು. ಕಳೆದ ವರ್ಷವೂ ಬೋಪಣ್ಣ ಹೆಸರನ್ನು ಪ್ರಶಸ್ತಿಗಾಗಿ ಸೂಚಿಸಲಾಗಿತ್ತಾದರೂ ಆಗ ನಾಮಪತ್ರ ಸಲ್ಲಿಸಲು ಕಾಲಾವಕಾಶ ಮುಗಿದಿದ್ದರಿಂದ ಪ್ರಶಸ್ತಿ ಲಭಿಸಿರಲಿಲ್ಲ.