
ನವದೆಹಲಿ, ಮೇ 18: ಏಷ್ಯನ್ ಗೇಮ್ಸ್ ಪದಕ ವಿಜೇತ ಜೋಡಿ ಅಂಕಿತಾ ರೈನಾ ಮತ್ತು ದಿವಿಜ್ ಶರಣ್ ಹೆಸರುಗಳನ್ನು ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ (ಎಐಟಿಎ) ಅರ್ಜುನ ಪ್ರಶಸ್ತಿಗಾಗಿ ಶಿಫಾರಸು ಮಾಡಲಿದೆ. ಡೇವಿಸ್ ಕಪ್ ಮಾಜಿ ಕೋಚ್ ನಂದನ್ ಬಾಲ್ ಹೆಸರು ಧ್ಯಾನ್ ಚಂದ್ ಪ್ರಶಸ್ತಿಗೆ ನಿರ್ದೇಶನಗೊಳ್ಳಲಿದೆ.
27ರ ಹರೆಯದ ಅಂಕಿತಾ ರೈನಾ, 2019ರ ಏಷ್ಯನ್ ಗೇಮ್ಸ್‌ನ ಮಹಿಳಾ ಸಿಂಗಲ್ಸ್ ಟೆನಿಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದು. ಫೆಡ್‌ಕಪ್‌ನಲ್ಲೂ ಅಮೋಘ ಪ್ರದರ್ಶನ ನೀಡಿದ್ದ ರೈನಾ, ಭಾರತ ತಂಡ ಇದೇ ಚೊಚ್ಚಲ ಬಾರಿಗೆ ವರ್ಲ್ಡ್ ಗ್ರೂಪ್‌ನಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ದೆಹಲಿಯವರಾದ ದಿವಿಜ್ ಶರಣ್, ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದಿದ್ದ 2018ರ ಏಷ್ಯನ್ ಗೇಮ್ಸ್‌ನ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಜೊತೆಗೂಡಿ ಚಿನ್ನದ ಪದಕ ಜಯಿಸಿದ್ದರು. ಅಕ್ಟೋಬರ್ 2019ರಲ್ಲಿ ದಿವಿಜ್ ಭಾರತದ ಟಾಪ್ ಡಬಲ್ಸ್ ಟೆನಿಸ್ ಪ್ಲೇಯರ್ ಆಗಿ ಗಮನ ಸೆಳೆದಿದ್ದರು.
34ರ ಹರೆಯದ ಶರಣ್, 2019ರ ಸೀಸನ್‌ನಲ್ಲಿ ಎರಡು ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಶನಲ್ಸ್ (ಎಟಿಪಿ) ಪ್ರಶಸ್ತಿಗಳನ್ನು ಜಯಿಸಿದ್ದರು. ಟಾಟಾ ಓಪನ್ ಮಹಾರಾಷ್ಟ್ರ ಪ್ರಶಸ್ತಿಯನ್ನು ಶರಣ್, ಬೋಪಣ್ಣ ಜೊತೆಗೂಡಿ ಜಯಿಸಿದ್ದರೆ, ಸೇಂಟ್ ಪೀಟರ್ಸ್‌ಬರ್ಗ್ ಪ್ರಶಸ್ತಿಯನ್ನು ಇಗೋರ್ ಝೆಲೆನೇಯ್ ಜೊತೆಗೆ ಗೆದ್ದಿದ್ದರು.