
ಜಕಾರ್ತಾ, ಆಗಸ್ಟ್ 24: ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ ಈವರೆಗಿನ ದಿನಗಳನ್ನು ಗಮನಿಸಿದರೆ ಆಗಸ್ಟ್ 24ರದ್ದು ಮಹತ್ವದ ದಿನ. ಯಾಕೆಂದರೆ ಭಾರತಕ್ಕೆ ಟೆನಿಸ್ ಮತ್ತು ರೋಯಿಂಗ್ ನಲ್ಲಿ ಚಿನ್ನದ ಪದಕ ಲಭಿಸಿದೆ. ಅದರಲ್ಲೂ ಟೆನಿಸ್ ಡಬಲ್ಸ್ ನಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿಯ ಗೆಲುವು ಶ್ಲಾಘನೀಯ.
ಶುಕ್ರವಾರ ನಡೆದ ಪುರಷರ ಟೆನಿಸ್ ಡಬಲ್ಸ್ ಫೈನಲ್ ನಲ್ಲಿ ಭಾರತದ ಬೋಪಣ್ಣ-ಶರಣ್ ಜೋಡಿ ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್-ಡೆನಿಸ್ ಯೆವ್ಸೇವ್ ಜೋಡಿಯನ್ನು 6-3, 6-4ರ ನೇರ ಸೆಟ್ ನಿಂದ ಸೋಲಿಸಿ ಬಂಗಾರದ ನಗೆ ಬೀರಿತ್ತು. ಇದು ಈ ಜೋಡಿಗೆ ಲಭಿಸಿದ ಏಷ್ಯನ್ ಗೇಮ್ಸ್ ಮೊದಲ ಬಂಗಾರ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಏಷ್ಯನ್ ಗೇಮ್ಸ್ ಆರಂಭವಾದಾಗಿನಿಂದ ಆಗಸ್ಟ್ 22ರ ವರೆಗೆ ಸತತ ನಾಲ್ಕು ದಿನ ಭಾರತಕ್ಕೆ ಒಂದೊಂದರಂತೆ ನಾಲ್ಕು ಬಂಗಾರದ ಪದಕಗಳು ಲಭಿಸಿದ್ದವು. 23ನೇ ಆಗಸ್ಟ್ ಗೆ ಭಾರತಕ್ಕೆ ಬಂಗಾರ ಲಭಿಸದೆ ಒಂದು ಬೆಳ್ಳಿ, ಎರಡು ಕಂಚುಗಳಷ್ಟೇ ಲಭಿಸಿದ್ದವು. ಆದರೆ 24ಕ್ಕೆ ಹಿಂದಿನ ದಿನದ ಬಾಕಿ ಸೇರಿಸಿ ಒಟ್ಟಿಗೆ ಎರಡು ಪದಕಗಳು ಲಭಿಸಿದವು.
ಕ್ರೀಡಾ ಸ್ಪರ್ಧೆಗಳು ಆರಂಭಗೊಂಡು ಇದು 6ನೇ ದಿನ. ಭಾರತದ ಪದಕ ಖಾತೆಯಲ್ಲಿ 6 ಬಂಗಾರ, 5 ಬೆಳ್ಳಿ ಮತ್ತು 14 ಕಂಚಿನ ಪದಕಗಳಿವೆ. ಪದಕ ಪಟ್ಟಿಯಲ್ಲಿ ಭಾರತ ಒಟ್ಟು 25 ಪದಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಇನ್ನು ಸ್ಕ್ವಾಶ್ ಮತ್ತು ಬ್ಯಾಡ್ಮಿಂಟನ್ ನಲ್ಲೂ ಭಾರತ ಪದಕದ ನಿರೀಕ್ಷೆಯನ್ನಿಟ್ಟುಕೊಂಡಿದೆ.