ಭಾರತದ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯನ್ ಓಪನ್ 2025ರ ಮೊದಲ ಸುತ್ತಿನಲ್ಲೇ ಮಂಗಳವಾರ ಹೊರಬಿದ್ದಿದ್ದಾರೆ. ಬೋಪಣ್ಣ ಕಳೆದ ವರ್ಷ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಆದರೆ ಈ ಬಾರಿ ಅವರು ಕೊಲಂಬಿಯಾದ ಹೊಸ ಪಾಲುದಾರ ನಿಕೋಲಸ್ ಬ್ಯಾರಿಯೆಂಟೋಸ್ ಅವರೊಂದಿಗೆ ಜೋಡಿಯಾಗಿದ್ದರು. ಪುರುಷರ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನ ಪಂದ್ಯದಲ್ಲಿ ಬೋಪಣ್ಣ ಮತ್ತು ಬ್ಯಾರಿಯೆಂಟೋಸ್ ಅವರು ಸ್ಪೇನ್ ಜೋಡಿ ಪೆಡ್ರೊ ಮಾರ್ಟಿನೆಜ್ ಮತ್ತು ಜೈಮ್ ಮುನಾರ್ ವಿರುದ್ಧ ಸೋಲನುಭವಿಸಬೇಕಾಯಿತು.
ಸ್ಪೇನ್ ಜೋಡಿ ವಿರುದ್ಧ ಮೊದಲ ಸೆಟ್‌ನಲ್ಲಿ ಬೋಪಣ್ಣ ಮತ್ತು ಬ್ಯಾರಿಯೆಂಟೋಸ್ ಜೋಡಿ 5-7ರಲ್ಲಿ ಸೋಲನುಭವಿಸಿತು. ಇದಾದ ನಂತರ ಎರಡನೇ ಸೆಟ್‌ನಲ್ಲಿ 6-6 ಆಗಿದ್ದರಿಂದ ಪಂದ್ಯವು ತುಂಬಾ ಕಠಿಣವಾಗಿತ್ತು. ಆದ್ದರಿಂದ ಸೆಟ್ ಟೈಬ್ರೇಕರ್‌ಗೆ ಹೋಯಿತು. ಟೈಬ್ರೇಕರ್‌ನಲ್ಲಿ ಬೋಪಣ್ಣ ಮತ್ತು ಬ್ಯಾರಿಯೆಂಟೋಸ್ 4-2 ಮುನ್ನಡೆ ಸಾಧಿಸಿದರೂ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಅವರು ತಮ್ಮ ಪ್ರಾಬಲ್ಯವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ಸೆಟ್ ಅನ್ನು 6-7 ಅಂತರದಲ್ಲಿ ಇಂಡೋ-ಕೊಲಂಬಿಯಾ ಜೋಡಿ ಸೋಲುಂಡಿತು.

ಬೋಪಣ್ಣ ಕಳೆದ ಋತುವಿನ ಕೊನೆಯಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದರು. ಈ ಜೋಡಿಯು ಆಸ್ಟ್ರೇಲಿಯನ್ ಓಪನ್‌ನಲ್ಲಿ ಗೆಲುವು ಮತ್ತು ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪುವುದು ಸೇರಿದಂತೆ ಗ್ರ್ಯಾಂಡ್‌ಸ್ಲಾಮ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿತ್ತು. ಈ ಬಾರಿ ಬೋಪಣ್ಣ ಅವರ ಹೊಸ ಪಾಲುದಾರ ಬ್ಯಾರಿಯೆಂಟೋಸ್ ಜೊತೆಗೂಡಿ ಎಟಿಪಿ 250 ಈವೆಂಟ್‌ನ ಅಡಿಲೇಡ್ ಓಪನ್‌ನ ಮೊದಲ ಸುತ್ತಿನಲ್ಲಿ ಹೊರನಬಿದ್ದಿದ್ದರು.
ಇದಕ್ಕೂ ಮುನ್ನ ಸುಮಿತ್ ನಗಾಲ್ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿ ಆಸ್ಟ್ರೇಲಿಯನ್ ಓಪನ್ 2025ರ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ, ಡಬಲ್ಸ್‌ನಲ್ಲಿ ಪ್ರಶಸ್ತಿ ಹೋರಾಟ ನಡೆಸುತ್ತಿದ್ದ ಬೋಪಣ್ಣ ಕೂಡ ಸೋಲ ಕಂಡಿರುವುದು ಭಾರತಕ್ಕೆ ಹಿನ್ನಡೆ ತಂದಿದೆ. ಆಸ್ಟ್ರೇಲಿಯನ್ ಓಪನ್‌ನ ಡಬಲ್ಸ್ ಸ್ಪರ್ಧೆಯಲ್ಲಿ ಭಾರತ ಇನ್ನೂ ಕೆಲವು ಆಟಗಾರರನ್ನು ಹೊಂದಿದೆ. ಎನ್ ಶ್ರೀರಾಮ್ ಬಾಲಾಜಿ ಮತ್ತು ಮಿಗುಯೆಲ್ ರೆಯೆಸ್-ವರೆಲಾ, ಯೂಕಿ ಭಾಂಬ್ರಿ ಮತ್ತು ಅಲ್ಬಾನೊ ಒಲಿವೆಟ್ಟಿ ಆಡಲಿದ್ದಾರೆ.