
ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಸಿಂಗಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಭಾರತದ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಸೋತು ಹೊರಬಿದ್ದಿದ್ದಾರೆ. ಜಪಾನ್‌ನ ತುತ್ಸುಮಾ ಇಟೋ ವಿರುದ್ಧ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಜ್ಞೇಶ್ ಸುಲಭವಾಗಿ ಶರಣಾಗಿದ್ದಾರೆ.
ಮೊದಲೆರಡು ಸೆಟ್‌ಗಳನ್ನು ಪ್ರಜ್ಞೇಶ್ ಯಾವುದೇ ಪ್ರತಿರೋಧ ತೋರದೆ ಕಳೆದುಕೊಂಡಿದ್ದರು. ಬಳಿಕ ಮೂರನೇ ಸೆಟ್‌ನಲ್ಲಿ ಪ್ರಜ್ಞೇಶ್ ತಿರುಗಿ ಬಿದ್ದರಾದರೂ ಪಂದ್ಯದ ಮೇಲೆ ಒಟ್ಟಾರೆ ಹಿಡಿತವನ್ನು ಸಾಧಿಸುವಲ್ಲಿ ವಿಫಲರಾದರು. ಅಂತಿಮವಾಗಿ ಜಪಾನ್ ಆಟಗಾರ ಇಟೋ 6-4,6-2, 7-5 ಅಂತರದಿಂದ ಪ್ರಜ್ಞೇಶ್ ಸೋಲುಕಂಡಿದ್ದಾರೆ.
30 ವರ್ಷದ ಪ್ರಜ್ಞೇಶ್ ಗುಣೇಶ್ವರನ್ ಗ್ರ್ಯಾಂಡ್ ಸ್ಲ್ಯಾಮ್‌ನ ಪ್ರಧಾನ ಸುತ್ತಿನಲ್ಲಿ ಪಾಲ್ಗೊಳ್ಳುತ್ತಿರುವ ಐದನೇ ದೃಷ್ಟಾಂತ ಇದಾಗಿತ್ತು. ಇದಕ್ಕೂ ಮುನ್ನ ವಿಂಬಲ್ಡನ್ಮ ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್‌ನಲ್ಲಿ ಪ್ರಜ್ಞೇಶ್ ಪಾಲ್ಗೊಂಡಿದ್ದರು. ಈ ಪಂದ್ಯವನ್ನು ಗೆದ್ದಿದ್ದರೆ ಎರಡನೇ ಸುತ್ತನಲ್ಲಿ ವಿಶ್ವದ ನಂಬರ್ 2 ಆಟಗಾರ ನೋವಾಕ್ ಜಾಕೋವಿಕ್ ಅವರನ್ನು ಎದುರಿಸುವ ಸಾಧ್ಯತೆಯಿತ್ತು.
ಈ ಪಂದ್ಯವನ್ನು ಸೋಲುವುದರೊಂದಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾರತದ ಸಿಂಗಲ್ಸ್ ಹೋರಾಟ ಅಂತ್ಯವಾದಂತಾಗಿದೆ. ಪ್ರಜ್ಞೇಶ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೋತಿದ್ದರು. ಆದರೆ ಪ್ರಧಾನ ಸುತ್ತಿಗೆ ಅವಕಾಶವನ್ನು ಪಡೆದಿದ್ದ ಆಟಗಾರ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದ ಕಾರಣ ಪ್ರಜ್ಞೇಶ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಅವಕಾಶವನ್ನು ಪಡೆದಿದ್ದರು.