ಭಾನುವಾರ ನಡೆದ ವಿಂಬಲ್ಡನ್ 2023 ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 20 ವರ್ಷದ ಹುಡುಗ ಇತಿಹಾಸ ಸೃಷ್ಟಿಸಿದ್ದಾನೆ. ಸರ್ಬಿಯಾ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವಿರುದ್ಧ 1-6, 7-6 (6), 6-1, 3-6, 6-4 ಸೆಟ್‌ಗಳಲ್ಲಿ ಗೆದ್ದ ಕಾರ್ಲೋಸ್ ಅಲ್ಕಾರಾಜ್ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಇದು ಅವರ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯಾಗಿದೆ.
ಸ್ಪೇನ್‌ನ ವಿಶ್ವದ ನಂಬರ್ 1 ಆಟಗಾರ ಕಾರ್ಲೋಸ್ ಅಲ್ಕಾರಾಜ್ ಚಾಂಪಿಯನ್ ಆಟವಾಡಿದರು, 36 ವರ್ಷದ ಅಪಾರ ಅನುಭವ ಹೊಂದಿರುವ ದಿಗ್ಗಜ ನೊವಾಕ್ ಜೊಕೊವಿಕ್ ವಿರುದ್ಧ ಸೆಣೆಸಲು ಸಾಕಷ್ಟು ಶ್ರಮಿಸಿದರು. ಮೊದಲ ಸೆಟ್‌ನಲ್ಲಿ 1-6 ರಿಂದ ಸೋತ ಕಾರ್ಲೋಸ್ ಅಲ್ಕರಾಜ್ ನಂತರ ತಿರುಗಿಬಿದ್ದರು.
ಎರಡನೇ ಸೆಟ್‌ನಲ್ಲಿ ಸಮಬಲದ ಹೋರಾಟ ನಡೆಯಿತು ಅಂತಿಮವಾಗಿ ಅಲ್ಕಾರಾಝ್ 7-6 ರಿಂದ ಎರಡನೇ ಸೆಟ್ ಗೆದ್ದುಕೊಂಡರು. ಈ ಮೂಲಕ 1-1 ರಲ್ಲಿ ಸಮಬಲಗೊಂಡಿತು. ಮೂರನೇ ಸೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಕಾರ್ಲೋಸ್ 6-1 ಅಂತರದಿಂದ ಗೆದ್ದುಕೊಂಡರು. 2-1 ಸೆಟ್‌ಗಳ ಮುನ್ನಡೆ ಪಡೆದುಕೊಂಡರು.

ನಾಲ್ಕನೇ ಸೆಟ್‌ನಲ್ಲಿ ಜೊಕೊವಿಕ್ ಮತ್ತೆ ಅದ್ಭುತ ಪ್ರದರ್ಶನ ನೀಡುವ 6-3 ಪಾಯಿಂಟ್‌ಗಳಿಂದ ಗೆದ್ದುಕೊಂಡರು. ಈ ಮೂಲಕ 2-2 ರಲ್ಲಿ ಸಮಬಲಗೊಂಡಿದ್ದರಿಂದ, ನಿರ್ಣಾಯಕ 5ನೇ ಸೆಟ್‌ಗೆ ಪಂದ್ಯ ಮುಂದುವರೆಯಿತು. 5ನೇ ಸೆಟ್‌ನಲ್ಲಿ ಜೊಕೊವಿಕ್ ಆರಂಭದಲ್ಲೇ 1 ಅಂಕ ಪಡೆಯುವ ಮೂಲಕ ಮುನ್ನಡೆ ಸಾಧಿಸಿದರು.
ಆದರೂ ಛಲ ಬಿಡದ ಅಲ್ಕಾರಾಝ್ ಅಮೋಘ ಹೋರಾಟ ನೀಡುವ ಮೂಲಕ ಜೊಕೊವಿಕ್‌ರನ್ನು ಕಟ್ಟಿಹಾಕಿದರು. ಅದ್ಭುತ ಸರ್ವ್, ರಿವರ್ಸ್ ಹೊಡೆತಗಳ ಮೂಲಕ ನೆರೆದ ಪ್ರೇಕ್ಷಕರ ಮನಸೂರೆಗೊಂಡರು. ಕೊನೆಯ ಸೆಟ್‌ನಲ್ಲಿ 5-4 ರಲ್ಲಿ ಮುನ್ನಡೆ ಪಡೆದುಕೊಂಡ ಅವರು ಕೊನೆಯ ಪಾಯಿಂಟ್‌ಗಾಗಿ ಹೋರಾಟ ನಡೆಸಿದರು. ಅಂತಿಮವಾಗಿ ಜೊಕೊವಿಕ್ ಪಂದ್ಯವನ್ನು ಕೈಚೆಲ್ಲಿದರೆ, ಕೊನೆಯ ಅಂಕ ಪಡೆದ ಅಲ್ಕಾರಾಝ್ ಸಂಭ್ರಮಿಸಿದರು.
ಕಾರ್ಲೋಸ್ ಅಲ್ಕಾರಾಜ್‌ಗೆ ಕೇವಲ 20 ವರ್ಷ ಹರೆಯ, ಈಗಾಗಲೇ ನಂಬರ್ 1 ರ್‍ಯಾಂಕಿಂಗ್ ಪಡೆದುಕೊಂಡಿರುವ ಅವರು ಅದಕ್ಕೆ ತಕ್ಕಂತೆ ಪ್ರದರ್ಶನ ನೀಡಿದರು. ಮಾತ್ರವಲ್ಲದೆ ತಮ್ಮ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡರು. ಅದರಲ್ಲೂ ಖ್ಯಾತ ತಾರೆ ಜೊಕೊವಿಕ್ ವಿರುದ್ಧ ಆಡಿ ಗೆದ್ದದ್ದು ಮಾತ್ರ ಇತಿಹಾಸ. 20 ವರ್ಷದಲ್ಲೇ ಪ್ರಶಸ್ತಿ ಗೆದ್ದ ಅಲ್ಕಾರಾಝ್ ಈ ಸಾಧನೆ ಮಾಡಿದ ಮೂರನೇ ಕಿರಿಯ ಆಟಗಾರ ಎನಿಸಿಕೊಂಡರು.
ಸತತ ನಾಲ್ಕು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದ ನೊವಾಕ್ ಜೊಕೊವಿಕ್ 5ನೇ ಬಾರಿ ಪ್ರಶಸ್ತಿ ಗೆದ್ದು ಜೋನ್ ಬೋರ್ಗ್ ಮತ್ತು ರೋಜರ್ ಫೆಡರರ್ ದಾಖಲೆ ಸರಿಗಟ್ಟುವಲ್ಲಿ ವಿಫಲವಾದರು. ಈವರೆಗೂ 7 ಬಾರಿ ಸತತವಾಗಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಜೊಕೊವಿಕ್, 8ನೇ ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದು ಫೆಡರರ್ ದಾಖಲೆ ಸರಿಗಟ್ಟುವ ಅವಕಾಶವನ್ನು ಕಳೆದುಕೊಂಡರು.
ಕಳೆದ 10 ವರ್ಷಗಳಿಂದ ನೊವಾಕ್ ಜೊಕೊವಿಕ್ ವಿಂಬಲ್ಡನ್ ಸೆಂಟರ್ ಅಂಗಳದಲ್ಲಿ ಸೋಲು ಕಂಡಿರಲಿಲ್ಲ. ಆದರೆ ಈ ಬಾರಿ ಫೈನಲ್‌ನಲ್ಲಿ ಸೋಲು ಕಂಡರು. ತಮ್ಮ ವೃತ್ತಿ ಜೀವನದ 24ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಅವಕಾಶ ಕೂಡ ಕಳೆದುಕೊಂಡರು.