
ಮ್ಯಾಡ್ರಿಡ್, ಮೇ 10: ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ಅವರ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಆಧುನಿಕ ಯುಗದ ಟೆನಿಸ್‌ನಲ್ಲಿ 1,200 ಪಂದ್ಯಗಳನ್ನು ಗೆದ್ದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬುಧವಾರ ತಡರಾತ್ರಿ ನಡೆದ ಪ್ರಿಕ್ವಾರ್ಟರ್‌ಫೈನಲ್ಸ್ ಪಂದ್ಯದಲ್ಲಿ ಅದ್ಭುತ ಆಟವಾಡಿದ 37 ವರ್ಷದ ರೋಜರ್, ಫ್ರಾನ್ಸ್‌ನ ಅನುಭವಿ ಆಟಗಾರ ಗೇಲ್ ಮೊನ್ಫಿಲ್ಸ್ ಅವರನ್ನು ಮಣಿಸಿ ಈ ಸಾಧನೆ ಮಾಡಿದರು.
ಈ ಮೂಲಕ ಸಾರ್ವಕಾಲಿಕ ಅತಿಹೆಚ್ಚು ಪಂದ್ಯಗಳನ್ನು ಗೆದ್ದವರ ಪೈಕಿ ರೋಜರ್ ತಮ್ಮ 2ನೇ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದಾರೆ. ಅಮೆರಿಕದ ಜಿಮಿ ಕಾನರ್ಸ್ ಮಾತ್ರವೇ ಈ ಪಟ್ಟಿಯಲ್ಲಿ ಫೆಡರರ್‌ಗಿಂತಲೂ ಮುಂದಿದ್ದಾರೆ. ಕಾನರ್ಸ್ ಅತಿ ಹೆಚ್ಚು ಎಟಿಪಿ ಟ್ರೋಫಿಗಳನ್ನು(109) ಗೆದ್ದವರ ಪೈಕಿಯೂ ಅಗ್ರಸ್ತಾನದಲ್ಲಿದ್ದಿದ್ದು, ಫೆಡರರ್ (101) ನಂತರದ ಸ್ಥಾನದಲ್ಲಿದ್ದಾರೆ.
ಬರೋಬ್ಬರಿ 3 ವರ್ಷಗಳ ಬಳಿಕ ಕ್ಲೇ ಕೋರ್ಟ್ ಟೆನಿಸ್‌ಗೆ ಮರಳಿರುವ 20 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್, ಅಂತಿಮ 16ರ ಘಟ್ಟದಲ್ಲಿ 15ನೇ ಶ್ರೇಯಾಂಕಿತ ಆಟಗಾರ ಮೊನ್ಫಿಲ್ಸ್ ಎದುರು ಪ್ರಬಲ ಪೈಪೋಟಿ ನಡೆಸಿ 6-0, 4-6, 7-6(7/3) ಅಂತರದ ಸೆಟ್‌ಗಳ ಜಯ ದಾಖಲಿಸಿದರು.
ಟೂರ್ನಿಯಲ್ಲಿನಾಲ್ಕನೇ ಶ್ರೇಯಾಂಕ ಹೊಂದಿರುವ ರೋಜರ್, ಇದೀಗ ಕ್ವಾರ್ಟರ್‌ಫೈನಲ್ಸ್ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಆಟಗಾರ ಆಸ್ಟ್ರಿಯಾದ ಡಾಮಿನಿಕ್ ಥೀಮ್ ಅವರ ಕಠಿಣ ಸವಾಲನ್ನು ಎದುರಿಸಲಿದ್ದಾರೆ.
ಆಧುನಿಕ ಯುಗದ ಟೆನಿಸ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದವರು (ಟಾಪ್ 5)
1. ಜಿಮ್ಮಿ ಕಾನರ್ಸ್ (ಅಮೆರಿಕ) 1,274
2. ರೋಜರ್ ಫೆಡರರ್ (ಸ್ವಿಜರ್ಲೆಂಡ್) 1,200*
3. ಇವಾನ್ ಲೆಂಡ್ಲ್ (ಝೆಕ್/ಅಮೆರಿಕ) 1,068
4. ಗ್ಯುಲೆರ್ಮೊ ವಿಲಾಸ್ (ಅರ್ಜೆಂಟೀನಾ) 949
5. ರಫೇಲ್ ನಡಾಲ್ (ಸ್ಪೇನ್) 936*