ಟೆನಿಸ್ ಲೋಕದಲ್ಲಿ ದಿಗ್ಗಜ ಆಟಗಾರ ನೊವಾಕ್ ಜೊಕೊವಿಕ್ ಅತ್ಯುನ್ನತ ಸಾಧನೆಯೊಂದನ್ನು ಮಾಡಿದ್ದಾರೆ. ಭಾನುವಾರ ನಡೆದ ಫ್ರೆಂಚ್ ಓಪನ್ 2023ರ ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪೊಯನ್ ಎನಿಸಿಕೊಂಡ ಜೊಕೊವಿಕ್ ವಿಶ್ವ ದಾಖಲೆಯ 23ನೇ ಬಾರಿಗೆ ಗ್ರ್ಯಾನ್‌ಸ್ಲ್ಯಾಮ್ ಗೆದ್ದ ದಾಖಲೆ ಬರೆದಿದ್ದಾರೆ. ಈ ಮೂಲಕ ಪುರುಷರ ಟೆನಿಸ್‌ನಲ್ಲಿ ಅತ್ಯಂತ ಹೆಚ್ಚು ಗ್ರ್ಯಾನ್‌ಸ್ಲ್ಯಾಮ್ ಗೆದ್ದ ಸಾಧಕರ ಪಟ್ಟಿಯಲ್ಲಿ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ್ದಾರೆ.
ಇನ್ನು ಈ ಶ್ರೇಷ್ಠ ಸಾಧನೆಯ ಬಳಿಕ ಟೆನಿಸ್‌ನ ಸರ್ವಶ್ರೇಷ್ಠ ಆಟಗಾರ ಯಾರು ಎಂಬ ವಿಚಾರವಾಗಿ ಮತ್ತೆ ಚರ್ಚೆಗಳು ಆರಂಭವಾಗಿದೆ. ಈ ವಿಚಾರವಾಗಿ ಜೊಕೊವಿಕ್ ಮಾತನಾಡಿದ್ದು ನನ್ನನ್ನು ನಾನು ಸರ್ವಶ್ರೇಷ್ಠ ಆಟಗಾರ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಅದು ಬೇರೆಯವರಿಗೆ ಬಿಟ್ಟ ವಿಚಾರ ಎಂದು ಹೇಳಿಕೆ ನೀಡಿದ್ದಾರೆ. ರೊಲಂಡ್ ಗ್ಯಾರೊಸ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಕ್ಯಾಸ್ಪರ್ ರೂಡ್ ವಿರುದ್ಧ ಗೆದ್ದು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

"ಯಾರು ಶ್ರೇಷ್ಠ ಎಂಬ ಈ ಚರ್ಚೆಗೆ ನಾನು ಭಾಗವಹಿಸುವುದಿಲ್ಲ. ನಾನು ನನ್ನದೇ ಆದ ಇತಿಹಾಸವನ್ನು ಬರೆಯುತ್ತಿದ್ದೇನೆ" ಎಂದಿದ್ದಾರೆ 36ರ ಹರೆಯದ ನಿವಾಕ್ ಜೊಕೊವಿಕ್. ಮುಂದುವರಿದು ಅವರು "ನನ್ನನ್ನು ನಾನು ಸರ್ವಶ್ರೇಷ್ಠ ಆಟಗಾರ ಎಂದು ಹೇಳಿಕೊಳ್ಳಲು ಬಯಸುವುದಿಲ್ಲ. ಆ ಬಗ್ಗೆ ಚರ್ಚೆಯನ್ನು ನಾನು ಬೇರೆಯವರಿಗೆ ಬಿಟ್ಟುಬಿಡುತ್ತೇನೆ" ಎಂದಿದ್ದಾರೆ ನೊವಾಕ್ ಜೊಕೊವಿಕ್.
ನೊವಾಕ್ ಜೊಕೊವಿಕ್ 23ನೇ ಗ್ರ್ಯಾನ್‌ಸ್ಲ್ಯಾಮ್ ಗೆಲ್ಲುವ ಮೂಲಕ ಸೆರೆನಾ ವಿಲಿಯಮ್ಸನ್ ಅವರ 23 ಗ್ರ್ಯಾನ್‌ಸ್ಲ್ಯಾಮ್ ಗೆದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನು ಒಂದು ಗ್ರ್ಯಾನ್‌ಸ್ಲ್ಯಾಮ್ ಗೆದ್ದರೆ ಅದು ಟೆನಿಸ್‌ನ ಸಾರ್ವಕಾಲಿಕ ಶ್ರೇಷ್ಠ ಸಾಧನೆ ಎನಿಸಿಕೊಳ್ಳಲಿದೆ. ಪುರುಷರ ಟೆನಿಸ್‌ನಲ್ಲಿ ಈಗಾಗಲೇ ಜೊಕೊವಿಕ್ ಅತಿ ಹೆಚ್ಚು ಬಾರಿ ಈ ಸಾಧನೆ ಮಾಡಿದ ಆಟಗಾರ ಎನಿಸಿಕೊಂಡಾಗಿದೆ.
ಫೈನಲ್‌ನಲ್ಲಿ ಯುವ ಉತ್ಸಾಹಿ ಆಟಗಾರ ಕ್ಯಾಸ್ಪರ್ ರುಡ್ ವಿರುದ್ಧ ಮೂರು ಗಂಟೆ 13 ನಿಮಿಷಗಳ ಕಾಲ ಸೆಣೆಸಾಟ ನಡೆಸಿ ಗೆಲುವು ಸಾಧಿಸಿದ್ದಾರೆ ಜೊಕೊವಿಕ್. 7-6 (1), 6-3, 7-5ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ ಜೊಕೊವಿಕ್ ಈ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ಕಳೆದ ವರ್ಷ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡು 22ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ್ದಾರೆ ಜೊಕೊವಿಕ್. ಈ ಬಾರಿಯ ಫ್ರೆಂಚ್ ಓಪನ್‌ನಿಂದ ಗಾಯದ ಗಾರಣದಿಂದಾಗಿ ರಾಫೆಲ್ ನಡಾಲ್ ಹಿಂದೆ ಸರಿದಿದ್ದರು. ಈ ಗೆಲುವಿನಿಂದಾಗಿ ಪ್ರೆಂಚ್ ಓಪನ್‌ನಲ್ಲಿ ಮೂರನೇ ಬಾರಿಗೆ ಗ್ರ್ಯಾನ್‌ಸ್ಲ್ಯಾಮ್ ಗೆದ್ದ ಸಾಧನೆ ಮಾಡಿದ್ದಾರೆ ಜೊಕೊವಿಕ್.