
ಕಳೆದ ವಾರವಷ್ಟೇ ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್ ಚಾಲೆಂಜ್ ಒಂದನ್ನು ಹಾಕಿದ್ದರು. ಟೆನಿಸ್ ರಾಕೆಟ್ ನಲ್ಲಿ ಚೆಂಡನ್ನು ಸಮೀಪದಿಂದ ಬಾರಿಸುವ ಚಾಲೆಂಜ್ ಅದು. ಸ್ವತಃ ಇವದ ವಿಡಿಯೋ ಮಾಡಿದ್ದ ಫೆಡರರ್ ಬಳಿಕ ವಿರಾಟ್ ಕೊಹ್ಲಿ, ನೊವಾಕ್ ಜೊಕೊವಿಕ್, ರಾಫೆಲ್ ನಡಾಲ್ ಸೇರಿದಂತೆ ಅಭಿಮಾನಿಗಳು ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಬೇಕೆಂದು ಚಾಲೆಂಜ್ ಮಾಡಿದ್ದರು.
ಈಗ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಕೂಡ ಒಂದು ಚಾಲೆಂಜ್ ನೀಡಿದ್ದಾರೆ. ಪೇಸ್ ಹೊಸ 'ಫ್ರೈಯಿಂಗ್ ಪ್ಯಾನ್' ಚಾಲೆಂಜ್ ಮೂಲಕ ಸಾಮಾಜಿಕ ತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲು ತಯಾರಾಗಿದ್ದಾರೆ. ಕೊರೋನಾ ಕಾರಣ ದೇಶವೇ ಲಾಕ್ ಡೌನ್ ಆಗಿ ಎಲ್ಲರೂ ಮನೆಗಳಲ್ಲಿರುವ ಕಾರಣ ತಮ್ಮ ಅಭಿಮಾನಿಗಳು ಈ ಚಾಲೆಂಜ್ ತೆಗೆದುಕೊಳ್ಳಿ ಎಂದು ಅವರು ಕೇಳಿದ್ದಾರೆ.
" ಲಾಕ್‌ಡೌನ್‌ನಲ್ಲಿರುವಾಗ ನಿಮಗಾಗಿ ಒಂದು ಸವಾಲು ಇಲ್ಲಿದೆ! ನೀವು ಎಷ್ಟು ಬಾರಿ ಹೀಗೆ ಆಡಬಹುದು? ನಾನು ನಿಮ್ಮೆಲ್ಲರಿಗೆ ಗೆ ಸವಾಲು ಹಾಕುತ್ತಿದ್ದೇನೆ. ಫ್ರೈಯಿಂಗ್ ಪ್ಯಾನ್ ಚಾಲೆಂಜ್‌ನೊಂದಿಗೆ ನಿಮ್ಮ ವೀಡಿಯೋಗಳನ್ನು ಕಳಿಸಿ ನನ್ನನ್ನು ಟ್ಯಾಗ್ ಮಾಡಿ, ಮತ್ತು ನಾನು ಅತ್ಯುತ್ತಮವಾದ ಕೆಲವನ್ನು ಹಂಚಿಕೊಳ್ಳುವೆ. " ಪೇಸ್ ಹೇಳಿದ್ದಾರೆ. ಜತೆಗೆ ಚೆಂಡೊಂದನ್ನು ಫ್ರೈಯಿಂಗ್ ಪ್ಯಾನ್‌ನಿಂದ ಹೊಡೆಯುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ಇನ್ನು ಇದೇ ವಿಡಿಯೋವನ್ನು ಎಟಿಪಿ ಕೂಡ ಹಂಚಿಕೊಂಡಿದೆ. ಎಟಿಪಿ ಹಂಚಿಕೊಂಡ ವಿಡಿಯೋವನ್ನು ಮಹೇಶ್ ಭೂಪತಿ ರಿಟ್ವೀಟ್ ಮಾಡಿದ್ದು ಈ ಮನುಷ್ಯ ಯಾವುದರ ಜೊತೆಗೂ ವ್ಯಾಲಿ ಮಾಡಬಲ್ಲ ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ಮಹೇಶ್ ಭೂಪತಿ ಈ ಚಾಲೆಂಜನ್ನು ಸ್ವೀಕಾರ ಮಾಡಿದ್ದು ಅದರ ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ. ಲಿಯಾಂಡರ್ ಪೇಸ್ ಮಾಡಿದ ಈ ಚಾಲೆಂಜ್‌ಗೆ ಭಾರೀ ಪ್ರತಿಕ್ರಿಯೆಗಳು ಬರುತ್ತಿದೆ.