
ಪ್ಯಾರಿಸ್, ಮಾರ್ಚ್ 18: ಕೊರೊನಾವೈರಸ್ ಕಾಟದಿಂದ ಪುರಷರ ಎಟಿಪಿ (ಅಸೋಸಿಯೇಷನ್ ಆಫ್ ಟೆನಿಸ್ ಪ್ರೊಫೆಶನಲ್ಸ್) ಟೂರ್, ವಿಟಿಎ (ವಿಮೆನ್ಸ್ ಟೆನಿಸ್ ಅಸೋಸಿಯೇಷನ್) ಟೂರ್ ಮತ್ತು ಐಪಿಎಫ್ (ಇಂಟರ್‌ನ್ಯಾಷನಲ್ ಟೆನಿಸ್ ಫೆಡರೇಶನ್) ಟೂರ್ನಿಗಳು ರದ್ದಾದ ಬಳಿಕ ರೋಲ್ಯಾಂಡ್ ಗ್ಯಾರೋಸ್ ಎಂದು ಕರೆಯಲ್ಪಡುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಕೂಡ ಮುಂದೂಡಲ್ಪಟ್ಟಿದೆ.
ಫ್ರೆಂಚ್ ಓಪನ್ ನಿಜಕ್ಕೂ 18 ಮೇನಿಂದ 7 ಜೂನ್‌ನಲ್ಲಿ ನಡೆಸಲು ವೇಳೆಪಟ್ಟಿ ಸಿದ್ಧವಾಗಿತ್ತು. ಆದರೆ ಕೋವಿಡ್-19 ಸೋಂಕು ವಿಶ್ವದೆಲ್ಲೆಡೆ ಹಬ್ಬಿ ಅಪಾರ ಸಾವಿಗೂ ಕಾರಣವಾಗುತ್ತಿರುವಿದರಿಂದ ಟೂರ್ನಿ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 4ರವರೆಗೆ ಈಗ ಮುಂದೂಡಲ್ಪಟ್ಟಿದೆ.
'ಈಗಿನ ಪರಿಸ್ಥಿತಿಯನ್ನು ಅವಲಂಭಿಸಿ ಮೇ 18ಕ್ಕೆ ಏನಾಗಲಿದೆ ಎಂದು ನಿರ್ಧರಿಸೋದು ಯಾರಿಂದಲೂ ಸಾಧ್ಯವಿಲ್ಲ. ಈಗಿನ ಸ್ಥಿತಿ ಗಮನಿಸಿದರೆ ಇದೇ ತಯಾರಿಯನ್ನು ಮುಂದಿಟ್ಟು ನಾವು ಮುಂದುವರೆಯೋದು ಸಾಧ್ಯವಿಲ್ಲ. ಹೀಗಾಗಿ ನಾವು ಈ ಮೊದಲು ನಿರ್ಧರಿಸಿದ್ದ ವೇಳಾಪಟ್ಟಿಯಂತೆ ಟೂರ್ನಿ ನಡೆಸುತ್ತಿಲ್ಲ,' ಎಂದು ಫ್ರೆಂಚ್ ಟೆನಿಸ್ ಫೆಡರೇಶನ್ ಹೇಳಿಕೆಯಲ್ಲಿ ತಿಳಿಸಿದೆ.
ಜಗತ್ತಿನಲ್ಲಿ ಸುಮಾರು 180,000ಕ್ಕೂ ಹೆಚ್ಚು ಮಂದಿ ಈಗಾಗಲೇ ಮಾರಕ ಕೊರೊನಾವೈರಸ್‌ಗೆ ತುತ್ತಾಗಿದ್ದಾರೆ. ಸುಮಾರು 7000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇದೇ ಕಾರಣಕ್ಕೆ ಎಲ್ಲಾ ಕ್ರೀಡಾಕೂಟಗಳೂ ರದ್ದಾಗುತ್ತಿವೆ, ಮುಂದೂಡಲ್ಪಡುತ್ತಿವೆ.