
ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿಯಾಗುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ದುಬೈನಲ್ಲಿ ನಡೆಯಲಿರುವ WTA 1000 ಟೂರ್ನಿಯ ನಂತರ ಟೆನಿಸ್‌ನಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷವೇ ಅವರು ಟೆನಿಸ್‌ನಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದರು. ನಂತರ ತಮ್ಮ ನಿರ್ಣಯದಿಂದ ಯೂ ಟರ್ನ್ ತೆಗೆದುಕೊಂಡಿದ್ದ ಅವರು, ಮತ್ತೆ ಆಡುವುದನ್ನು ಮುಂದುವರೆಸಿದ್ದರು. ಈಗ ಮತ್ತೊಮ್ಮೆ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
ಈ ವರ್ಷ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲಿದ್ದಾರೆ. ನಂತರ ಫೆಬ್ರವರಿಯಲ್ಲಿ ನಡೆಯಲಿರುವ ದುಬೈನಲ್ಲಿ ನಡೆಯಲಿರುವ WTA 1000 ಟೂರ್ನಿಯ ನಂತರ ಟೆನಿಸ್ ಪಯಣವನ್ನು ಮುಗಿಸಲಿದ್ದಾರೆ.
ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕಜಕಿಸ್ತಾನದ ಅನ್ನಾ ಡ್ಯಾನಿಲಿಯಾ ಅವರೊಂದಿಗೆ ಡಬಲ್ಸ್‌ನಲ್ಲಿ ಆಡಲು ಅವರು ಸಹಿ ಹಾಕಿದ್ದಾರೆ. ಆರು ಬಾರಿ ಅವರು ಚಾಂಪಿಯನ್ ಆಗಿದ್ದಾರೆ. ಇದರಲ್ಲಿ ಡಬಲ್ಸ್‌ನಲ್ಲಿ ಮೂರು ಬಾರಿ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಮೂರು ಬಾರಿ.
ಸಾನಿಯಾ ತಮ್ಮ ವೃತ್ತಿಜೀವನದಲ್ಲಿ ಎರಡು ಆಸ್ಟ್ರೇಲಿಯನ್ ಓಪನ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ, 2016 ರಲ್ಲಿ ಮಹಿಳಾ ಡಬಲ್ಸ್‌ನಲ್ಲಿ ಮಾರ್ಟಿನಾ ಹಿಂಗಿಸ್ ಜೊತೆ ಮತ್ತು 2009 ರಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.
ಭಾರತದ ಖ್ಯಾತ ಟೆನಿಸದ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಶೋಯೆಬ್ ಮಲಿಕ್‌ರನ್ನು ಮದುವೆಯಾದರು. ಈ ಜೋಡಿ ಈಗ ವಿಚ್ಛೇದನ ಪಡೆದುಕೊಂಡಿದೆ ಎನ್ನುವ ವದಂತಿಗಳಿವೆ. ಸದ್ಯ ಸಾನಿಯಾ ಮಿರ್ಜಾ ತನ್ನ ಮಗನೊಂದಿಗೆ ಇದ್ದಾರೆ, ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಅವರು ದುಬೈನಲ್ಲಿ ವಾಸಿಸುತ್ತಿದ್ದಾರೆ.

ಅಭಿಮಾನಿಗಳ ಸಮ್ಮುಖದಲ್ಲಿ ನಿವೃತ್ತಿ ಘೋಷಿಸಲು ನಿರ್ಧಾರ
ಆಸ್ಟ್ರೇಲಿಯಾ ಓಪನ್ ನಂತರ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯಲಿರುವ ಡಬ್ಲ್ಯುಟಿಎ 1000 ಟೂರ್ನಿಯ ಮುಕ್ತಾಯದ ಬಳಿಕ ಅವರು ನಿವೃತ್ತಿ ಘೋಷಿಸಲಿದ್ದಾರೆ. ದುಬೈನಲ್ಲಿ ತಮ್ಮ ಅಭಿಮಾನಿಗಳ ಮುಂದೆ ನಿವೃತ್ತಿಯಾಗುವ ನಿರ್ಧಾರ ಮಾಡಿದ್ದಾರೆ.
"ಡಬ್ಲ್ಯುಟಿಎ ಫೈನಲ್ಸ್ ನಂತರ ನಾನು ಟೆನಿಸ್ ಆಡುವುದನ್ನು ನಿಲ್ಲಿಸಲಿದ್ದೇನೆ. 2022ರ ಕ್ರೀಡಾಋತುವಿನ ಮುಕ್ತಾಯದ ನಂತರವೇ ನಿವೃತ್ತಿಯಾಗಬೇಕಲು ನಿರ್ಧರಿಸಿದ್ದೆ. ಆದರೆ, ಗಾಯದ ಸಮಸ್ಯೆಯಿಂದಾಗಿ ಮುಂದೂಡಬೇಕಾಯಿತು" ಎಂದು ಅವರು ಹೇಳಿದ್ದಾರೆ. ಮೊಣಕೈ ಗಾಯದ ಕಾರಣ ಅವರು ಕಳೆದ ಬಾರಿ ಯುಎಸ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿಲ್ಲ.

ಇತ್ತೀಚಿನ ದಿನಗಳಲ್ಲಿ ಸಾನಿಯಾ ಮಿರ್ಜಾ ಗಾಯದ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು "ನನಗೆ 36 ವರ್ಷ, ಗಾಯದ ಸಮಸ್ಯೆಗಳು ಹೆಚ್ಚಾಗಿವೆ. ಆದ್ಯತೆಗಳು ಬದಲಾಗುತ್ತವೆ, ದೇಹದ ಮೇಲೆ ಈಗ ಹೆಚ್ಚಿನ ಒತ್ತಡ ಹಾಕಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.