
ಒಟ್ಟಾವಾ, ಆಗಸ್ಟ್ 10: ವಿಶ್ವ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್ ಅವರು ಕೆನಡಿಯನ್ ಓಪನ್ (ರೋಜರ್ಸ್ ಕಪ್) ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಒಂದೇ ದಿನ ಎರಡೆರಡು ಪಂದ್ಯ ಗೆದ್ದು ಮಿಂಚಿದ್ದಾರೆ. ಒಂದು ಪಂದ್ಯ ಗೆದ್ದು ಬರೀ ಒಂದು ಗಂಟೆ ಅವಧಿಯಲ್ಲಿ ಇನ್ನೊಂದು ಸ್ಪರ್ಧೆಗಿಳಿದು ಅದರಲ್ಲೂ ಭರ್ಜರಿ ಗೆಲುವು ದಾಖಲಿಸಿದರು.
ಗುರುವಾರ ನಡೆದ ಪಂದ್ಯದಲ್ಲಿ ರೊಮೇನಿಯನ್ ಆಟಗಾರ್ತಿ ಸಿಮೋನಾ ಏಳು ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತೆ ಅಮೆರಿಕಾದ ವೀನಸ್ ವಿಲಿಯಮ್ಸ್ ಅವರನ್ನು ನೇರ ಸೆಟ್ ನಿಂದ ಸೋಲಿಸಿದರು. ಇದಕ್ಕೂ 1 ಗಂಟೆ ಮುನ್ನವಷ್ಟೇ ಸಿಮೋನಾ ರಷ್ಯನ್ ಆಟಗಾರ್ತಿ ಅನಸ್ತಾಸಿಯಾ ಪಾವ್ಲಿಚೆಂಕೋವಾ ಅವರಿಗೆ ಸೋಲುಣಿಸಿದ್ದರು. ಪಾವ್ಲಿಚೆಂಕೋವಾ-ಹಾಲೆಪ್ ನಡುವೆ 3 ಗಂಟೆಗಳ ಭರ್ಜರಿ ಕಾದಾಟ ನಡೆದಿತ್ತು.
ಈ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 38ರ ಹರೆಯದ ಅಮೆರಿಕಾ ಬಲಾಡ್ಯೆ ವೀನಸ್ ಅವರನ್ನು ಹಾಲೆಪ್ 6-2, 6-2ರ ಅಂತರದಿಂದ ಹಿಮ್ಮೆಟ್ಟಿಸಿದರು. ಇಬ್ಬರ ಮಧ್ಯೆ ಸುಮಾರು 71 ನಿಮಿಷಗಳ ಕಾದಾಟ ನಡೆಯಿತು.
ಅನಸ್ತಾಸಿಯಾ ಎದುರಿನ ಪಂದ್ಯ ನಿಜವಾಗಿ ಬುಧವಾರ (ಆಗಸ್ಟ್ 8) ನಡೆಯಬೇಕಿತ್ತು. ಆದರೆ ಮಳೆಯ ಕಾರಣ ಅನಿವಾರ್ಯವಾಗಿ ಪಂದ್ಯವನ್ನು ಗುರುವಾರ ನಡೆಸಲಾಯ್ತು. ಕ್ವಾರ್ಟರ್ ಫೈನಲ್ ನಲ್ಲಿ ಹಾಲೆಪ್, ವಿಶ್ವ ನಂ. 6ನೇ ಶ್ರೇಯಾಂಕಿತೆ ಫ್ರೆಂಚ್ ನ ಕ್ಯಾರೋಲಿನ್ ಗಾರ್ಸಿಯಾ ಅವರ ಸವಾಲು ಸ್ವೀಕರಿಸಲಿದ್ದಾರೆ.