Roger Federer Retires : 24 ವರ್ಷಗಳ ಭವ್ಯ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಣೆ ಮಾಡಿದ ರೋಜರ್ ಫೆಡರರ್

ಟೆನಿಸ್ ಲೋಕದ ಸರ್ವಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ ರೋಜರ್ ಫೆಡರರ್ ಟೆನಿಸ್‌ಗೆ ನಿವೃತ್ತಿಯ ಬಗ್ಗೆ ಘೋಷಣೆ ಮಾಡಿದ್ದಾರೆ. ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್ ತಮ್ಮ ಫೈನಲ್ ಎಟಿಪಿ ಸ್ಪರ್ಧೆಯಾಗಿರಲಿದೆ ಎಂದು ತಿಳಿಸಿದ್ದಾರೆ. ಈ ಮೂಲಕ 24 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಟೆನಿಸ್ ಬದುಕಿಗೆ ಅಂತ್ಯ ಹೇಳಲು ನಿರ್ಧರಿಸಿದ್ದಾರೆ. 41ನೇ ಹರೆಯದ ರೋಜರ್ ಫೆಡರರ್ 20 ಬಾರಿಯ ಗ್ರ್ಯಾನ್‌ಸ್ಲ್ಯಾಮ್ ವಿಜೇತರಾಗಿದ್ದು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರೋಜರ್ ಫೆಡರರ್ ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದು ಭಾವನಾತ್ಮಕ ಪತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆಡಿಯೋ ಸಂದೇಶವನ್ನು ಕುಡ ಫೆಡರರ್ ಹಂಚಿಕೊಂಡಿದ್ದು ಟೆನಿಸ್‌ನಲ್ಲಿ ತಮ್ಮ ಏಳು ಬೀಳುಗಳಲ್ಲಿ ಜೊತೆಯಾದವರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
2003ರ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಗ್ರ್ಯಾನ್‌ಸ್ಲ್ಯಾಮ್ ಬೇಟೆ ಆರಂಭಿಸಿದ ಫೆಡರರ್ ನಂತರ ಟೆನಿಸ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ 6 ಆಸ್ಟ್ರೇಲಿಯನ್ ಓಪನ್, 8 ವಿಂಬಲ್ಡನ್, 5 ಯುಎಸ್ ಓಪನ್ ಪ್ರಶಸ್ತಿಗಳು ಮತ್ತು ಒಂದು ಫ್ರೆಂಚ್ ಓಪನ್ ಗೆದ್ದುಕೊಂಡಿದ್ದಾರೆ ಸ್ವಿಜರ್ಲ್ಯಾಂಡ್‌ನ ಈ ದಿಗ್ಗಜ ಆಟಗಾರ. ಅಲ್ಲದೆ ಪುರುಷರ ಸಿಂಗಲ್ಸ್‌ನಲ್ಲಿ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ನಂತರ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ ಫೆಡರರ್.
ಕಳೆದ ವರ್ಷ ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದ ಫೆಡರರ್ ನಂತರ ಮೊಣಕಾಲಿನ ಗಾಯದಿಂದ ಕಣಕ್ಕಿಳಿದಿರಲಿಲ್ಲ. ಟೋಕಿಯೊ ಒಲಿಂಪಿಕ್ಸ್ ಬಳಿಕ ಯಾವುದೇ ಸ್ಪರ್ಧೆಯಲ್ಲೂ ಫೆಡರರ್ ಕಾಣಿಸಿಕೊಂಡಿರಲಿಲ್ಲ. ಇನ್ನು ಇತ್ತೀಚೆಗಷ್ಟೇ ಮಹಿಳಾ ಟೆನಿಸ್ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಟೆನಿಸ್‌ಗೆ ವಿದಾಯ ಹೇಳಿದ್ದರು..ಇದೀಗ ಫೆಡರರ್ ಕೂಡ ನಿವೃತ್ತಿಯ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications