ಒಲಿಂಪಿಕ್ಸ್: ಸೆಮಿಫೈನಲ್‌ನಲ್ಲಿ ಸೋತ ನಂ.1 ಜೊಕೋವಿಕ್: ಗೋಲ್ಡನ್ ಸ್ಲ್ಯಾಮ್ ಕನಸು ಭಗ್ನ

ಟೋಕಿಯೋ, ಜುಲೈ 30: ವಿಶ್ವದ ನಂಬರ್ 1 ಆಟಗಾರ ನೊವಾಕ್ ಜೊಕೋವಿಕ್ ಟೋಕಿಯೋ ಒಲಿಂಪಿಕ್ಸ್ ಹೋರಾಟ ಅಂತ್ಯವಾಗಿದೆ. ಸೆಮಿಫೈನಲ್‌ನಲ್ಲಿ ಆಘಾತಕರ ರೀತಿಯಲ್ಲಿ ಜೊಕೋವಿಕ್ ಸೋಲನ್ನು ಕಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಪದಕ ಮಾತ್ರವಲ್ಲದೆ ಈವರೆಗೂ ಯಾವುದೇ ಪುರುಷ ಟೆನಿಸ್ ಆಟಗಾರನಿಂದ ಸಾಧ್ಯವಾಗದ ಗೋಲ್ಡನ್ ಸ್ಲ್ಯಾಮ್ ನೊವಾಕ್ ಜೊಕೋವಿಕ್ ಪಾಲಿಗೆ ಕೂಡ ಕನಸಾಗಿಯೇ ಉಳಿದುಕೊಂಡಿದೆ.
ಸೆಮಿ ಫೈನಲ್‌ನಲ್ಲಿ ವಿಶ್ವದ ಸ್ಟಾರ್ ಟೆನಿಸ್ ಆಟಗಾರ ಸರ್ಬಿಯಾ ಮೂಲದ ಟೆನಿಸ್ ನೊವಾಕ್ ಜೊಕೋವಿಕ್‌ಗೆ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸೋಲು ಕಂಡಿದ್ದಾರೆ. ಅಲೆಕ್ಸಾಂಡರ್ ಜ್ವೆರೆವ್ ಜೊಕೋವಿಕ್ ವಿರುದ್ಧ 1-6, 6-3, 6-1 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಮೊದಲ ಸುತ್ತು ಗೆದ್ದುಕೊಂಡ ಜೊಕೋವಿಕ್: ಈ ಪಂದ್ಯ ಮೊದಲ ಸುತ್ತಿನಲ್ಲಿ ನೊವಾಕ್ ಜೊಕೋವಿಕ್ ಅಂದುಕೊಂಡಂತೆಯೇ ಸಾಗಿತ್ತು. 6-1 ಅಂತರದಿಂದ ಮೊದಲ ಸುತ್ತನ್ನು ಜೊಕೋವಿಕ್ ಸುಲಭವಾಗಿ ಗೆದ್ದುಕೊಂಡರು. ಈ ಮೂಲಕ ಎಲ್ಲಾ ಟೆನಿಸ್ ಅಭಿಮಾನಿಗಳು ಕೂಡ ನೊವಾಕ್ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತಾರೆ ಎಂದೇ ಭಾವಿಸಿದ್ದರು. ಆದರೆ ಮುಂದೆ ವಿಶ್ವದ ನಂಬರ್ ಆಟಗಾರನಿಗೆ ಅತಿ ದೊಡ್ಡ ಆಘಾತ ಕಾದಿತ್ತು. ಎದುರಾಳಿ ಅಲೆಕ್ಸಾಂಡರ್ ಜ್ವೆರೆವ್ ಅವರಿಂದ ಈ ಪ್ರಮಾಣದ ಪ್ರತಿರೋಧವನ್ನು ಜೊಕೋವಿಕ್ ನಿರೀಕ್ಷಿಸಿಯೇ ಇರಲಿಲ್ಲ.
ಮೊದಲ ಸೆಟ್‌ಅನ್ನು ಭಾರೀ ಅಂತರದಿಂದ ಕಳೆದುಕೊಂಡ ನಂತರ ಅಲೆಕ್ಸಾಂಡರ್ ಜ್ವೆರೆವ್ ಅಕ್ಷರಶಃ ತಿರುಗಿ ಬಿದ್ದರು. ನೊವಾಕ್ ಜೊಕೋವಿಕ್‌ಗೆ ಆಘಾತದ ಮೇಲೆ ಆಘಾತವನ್ನು ನೀಡಿದರು. ಈ ಮೂಲಕ ಎರಡನೇ ಸೆಟ್‌ಅನ್ನು ಅಲೆಕ್ಸಾಂಡರ್ ಜ್ವೆರೆವ್ 6-3 ಅಂತರದಿಂದ ಗೆದ್ದುಕೊಂಡರು. ಈ ಮೂಲಕ ನಂಬರ್ 1 ಆಟಗಾರನಿಗೆ ಕಠಿಣ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾದರು.
ಪಟ್ಟು ಸಡಿಲಿಸದ ಅಲೆಕ್ಸಾಂಡರ್: ಅಂತಿಮ ಸೆಟ್‌ನಲ್ಲಿ ಕೂಡ ಅಲೆಕ್ಸಾಂಡರ್ ಜ್ವೆರೆವ್ ತಮ್ಮ ಪಟ್ಟು ಸಡಿಲಿಸಲಿಲ್ಲ. ಈ ಹಣಾಹಣಿಯಲ್ಲಂತೂ ಜ್ವೆರೆವ್ ಅಕ್ಷರಶಃ ಚಾಂಪಿಯನ್ ರೀತಿಯಲ್ಲಿಯೇ ಹೋರಾಟವನ್ನು ನಡೆಸಿದರು. ನೋವಾಕ್ ಜೊಕೋವಿಕ್‌ಗೆ ಯಾವ ಹಂತದಲ್ಲಿಯೂ ತಿಎಉಗಿ ಬೀಳು ಸಣ್ಣ ಅವಕಾಶವನ್ನು ಕೂಡ ಅಲೆಕ್ಸಾಂಡರ್ ಜ್ವೆರೆವ್ ನೀಡಲಿಲ್ಲ. ಪರಿಣಾಮವಾಗಿ ಮೂರನೇ ಹಾಗೂ ನಿರ್ಣಾಯಕ ಸುತ್ತನ್ನು 6-1 ಅಂತರದಿಂದ ಭರ್ಜರಿಯಾಗಿ ಅಲೆಕ್ಸಾಂಡರ್ ಜ್ವೆರೆವ್ ಗೆದ್ದುಕೊಂಡರು. ಈ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಂಬರ್ 1 ಆಟಗಾರನ ಹೋರಾಟವನ್ನು ಸೆಮಿಫೈನಲ್‌ಗೆ ಅಂತ್ಯಗೊಳಿಸಿದರು.
ಸಾರ್ವಕಾಲಿಕ ದಾಖಲೆ ಕನಸು ಭಗ್ನ: ನೋವಾಕ್ ಜೊಕೋವಿಕ್ ಟೆನಿಸ್‌ನಲ್ಲಿ ಪುರುಷ ಆಟಗಾರನಿಂದ ಈವರೆಗೆ ಮಾಡಲಾಗದ ಸಾರ್ವಕಾಲಿಕ ದಾಖಲೆಯೊಂದನ್ನು ಮಾಡಲು ಅವಕಾಶ ಹೊಂದಿದ್ದರು. ಒಂದು ವರ್ಷದಲ್ಲಿ ಈವರೆಗೆ ಯಾವ ಟೆನಿಸ್ ಆಟಗಾರ ಕೂಡ ಎಲ್ಲಾ ಪ್ರಮುಖ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಇತಿಹಾಸವಿಲ್ಲ. ಈ ದಾಖಲೆಯನ್ನು 'ಗೋಲ್ಡನ್ ಸ್ಲ್ಯಾಮ್' ಎನ್ನಲಾಗುತ್ತದೆ. ಈ ವಿಶೇಷ ಸಾಧನೆ ಮಾಡಿದ ಪ್ರಥಮ ಪುರುಷ ಟೆನಿಸ್ ಆಟಗಾರ ಎನಿಸಿಕೊಳ್ಳುವ ಅವಕಾಶ ಜೊಕೋವಿಕ್ ಮುಂದಿತ್ತು. ಟೆನಿಸ್‌ನ ದಿಗ್ಗಜ ಆಟಗಾರರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಈ ಬಾರಿಯ ಒಲಿಂಪಿಕ್ಸ್ ಟೆನಿಸ್ ಕ್ರೀಡಾಕೂಟದಿಂದ ಹಿಂದಕ್ಕೆ ಸರಿದ ಕಾರಣದಿಂದಾಗಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಆಟಗಾರನಾಗಿ ಜಾಕೋವಿಕ್ ಗುರುತಿಸಿಕೊಂಡಿದ್ದರು.
ಈ ವರ್ಷದ ಮೊದಲ 3 ಗ್ರ್ಯಾಂಡ್‌ಸ್ಲ್ಯಾಮ್‌ಗಳು ಜೊಕೋವಿಕ್ ಪಾಲು: ಸರ್ಬಿಯಾದ ಈ ಸ್ಟಾರ್ ಆಟಗಾರ ಈ ವರ್ಷದ ಮೊದಲ ಮೂರು ಗ್ರಾಂಡ್‌ಸ್ಲಾಮ್‌ಗಳನ್ನು ಗೆದ್ದುಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಟೂರ್ನಿಗಳನ್ನು ಗೆದ್ದು ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಈ ಅತ್ಯಂತ ವಿಶೇಷ ದಾಖಲೆಯನ್ನು ನಿರ್ಮಿಸಲು ಟೋಕಿಯೋ ಒಲಿಂಪಿಕ್ಸ್ ಹಾಗೂ ಯುಎಸ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬೇಕಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸುವ ಮೂಲಕ ನೊವಾಕ್ ಜೊಕೋವಿಕ್ ಹಾಗೂ ಅವರ ಕೋಟ್ಯಂತರ ಅಭಿಮಾನಿಗಳ ಕನಸು ಭಗ್ನವಾಗಿದೆ.
ಒಟ್ಟಾರೆಯಾಗಿ ಟೆನಿಸ್ ಇತಿಹಾಸದಲ್ಲಿ ಗೋಲ್ಡನ್ ಸ್ಲ್ಯಾಮ್ ಸಾಧನೆ ಮಾಡಿದ ಏಕೈಕ ನಿದರ್ಶನವಿದೆ. 1988ರಲ್ಲಿ ಜರ್ಮನಿಯ ಮಹಿಳಾ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ಗೋಲ್ಡನ್ ಸ್ಲ್ಯಾಮ್ ದಾಖಲೆ ಬರೆದಿದ್ದರು. ಪುರುಷ ಟೆನಿಸ್ ಆಟಗಾರರ ಪೈಕಿ ಈವರೆಗೂ ಇದು ಯಾರಿಂದಲೂ ಸಾಧ್ಯವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications