ಯುಎಸ್ ಓಪನ್ 2023ರ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 4ನೇ ಶ್ರೇಯಾಂಕದ ಹೋಲ್ಗರ್ ರೂನ್ ಆಘಾತಕಾರಿಯಾಗಿ ಸೋತು ನಿರ್ಗಮಿಸಿದ್ದಾರೆ. ಸ್ಪೇನ್‌ನ ರಾಬರ್ಟೊ ಕಾರ್ಬಲ್ಸ್ ಬೇನಾ ವಿರುದ್ಧ ರೂನ್ ಸೋಲು ಕಂಡಿದ್ದು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದಾರೆ. ಎರಡು ಗಂಟೆ 42 ನಿಮಿಷಗಳಲ್ಲಿ ನಡೆದ ಈ ಸೆಣೆಸಾಟದಲ್ಲಿ ಸ್ಪೇನ್ ಆಟಗಾರ 6-3, 4-6, 6-3, 6-2 ಸೆಟ್‌ಗಳ ಅಂತರದಿಂದ ಗೆದ್ದಿದ್ದಾರೆ. ಎಟಿಪಿ ಸರ್ಕ್ಯೂಟ್‌ನಲ್ಲಿ ಬೇನಾ ಅಗ್ರ 10 ಶ್ರೇಯಾಂಕಿತರ ವಿರುದ್ಧ ಗೆಲುವು ಸಾಧಿಸಿರುವುದು ಇದೇ ಮೊದಲು.
ಇನ್ನು ಯುಎಸ್ ಓಪನ್‌ನಲ್ಲಿ ಭಾಗವಹಿಸಿದ್ದ ರೂನ್ ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಆದರೆ ಮೊದಲ ಪಂದ್ಯದಲ್ಲಿಯೇ ಸೋಲು ಕಾಣುವ ಮೂಲಕ ಆಘಾತ ಅನುಭವಿಸಿದ್ದಾರೆ. ಈ ಸೆಣೆಸಾಟದಲ್ಲಿ ರೂನ್ 43 ಬಲವಂತದ ತಪ್ಪುಗಳನ್ನು ಮಾಡಿದರು. ಇದು ಅವರ ಎದುರಾಳಿ ರಾಬರ್ಟೊ ಕಾರ್ಬಲ್ಸ್ ಬೇನಾ ಅವರಿಗಿಂತ 22ರಷ್ಟು ಹೆಚ್ಚು. ಈ ತಪ್ಪುಗಳೇ ಅವರ ಸೋಲಿಗೆ ಕಾರಣವಾಯಿತು.

ಇನ್ನು ಬೇನಾ ಮೊದಲ ಸುತ್ತಿನಲ್ಲಿ ದೊಡ್ಡ ಎದುರಾಳಿಗೆ ಆಘಾತ ನೀಡಿ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಎರಡನೇ ಸುತ್ತಿನಲ್ಲಿ ಅವರು ಜಿರಿ ಲೆಹೆಕಾ ಮತ್ತು ಅಸ್ಲಾನ್ ಕಾರಟ್ಸೆವ್ ನಡುವಿನ ಪಂದ್ಯದಲ್ಲಿ ಗೆದ್ದವರೊಂದಿಗೆ ಸೆಣೆಸಾಡಬೇಕಿದೆ.
ಮತ್ತೊಂದೆಡೆ ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ರಾಫೆಲ್ ನಡಾಲ್‌ಗೆ ಸೋಲಿನ ರುಚಿ ತೋರಿಸಿದ್ದ ಫ್ರಾನ್ಸಿಸ್ ಟಿಯಾಫೋ ಮೊದಲ ಸುತ್ತಿನಲ್ಲಿ 17 ವರ್ಷದ ಲರ್ನರ್ ಟಿಯೆನ್ ಅವರನ್ನು 6-2, 7-5, 6-1 ಅಂತರದಿಂದ ಮಣಿಸಿದ್ದಾರೆ. ಈ ಸೆಣೆಸಾಟದಲ್ಲಿ ಗೆಲುವು ಸಾಧಿಸಲು ಅಮೆರಿಕನ್ ಆಟಗಾರ ಎರಡು ಗಂಟೆ ಎಂಟು ನಿಮಿಷಗಳನ್ನು ತೆಗೆದುಕೊಂಡರು. ಟಿಯೆನ್ ಕೂಡ ಅದ್ಭುತ ಹೋರಾಟ ಪ್ರದರ್ಶಿಸಿದರಾದರೂ ಟಿಯಾಫೋನ ಸಾಮರ್ಥ್ಯದ ಮುಂದೆ ಗೆಲುವು ಅಸಾಧ್ಯವಾಗಿತ್ತು.
ಟಿಯಾಫೊ 37 ವಿನ್ನರ್ಸ್‌ಗಳನ್ನು ಈ ಪಂದ್ಯದಲ್ಲಿ ಬಾರಿಸುವ ಮೂಲಕ ಪಂದ್ಯದಲ್ಲಿ ಹಿಡಿತವನ್ನು ಸಾಧಿಸಿದ್ದರು. ಆದರೆ 41 ಅನಗತ್ಯ ತಪ್ಪುಗಳಿನ್ನು ಮಾಡಿದ್ದು ಇದರಲ್ಲಿ ಸುಧಾರಣೆ ಕಾಣಬೇಕಿದೆ. ಟಿಯಾಫೋ ಮುಂದಿನ ಸುತ್ತಿನಲ್ಲಿ ಪೋರ್ಚುಗಲ್‌ನ ನುನೊ ಬೋರ್ಗೆಸ್ ವಿರುದ್ಧ ಗೆದ್ದ ಸೀಬಾಸ್ಟಿಯನ್ ಓಫ್ನರ್ ಅವರನ್ನು ಎದುರಿಸಲಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬೀಟ್ರಿಜ್ ಹಡ್ಡಾಡ್ ಮಾಯಾ ಎರಡು ಗಂಟೆ 57 ನಿಮಿಷಗಳ ಕಾದಾಟದಲ್ಲಿ ಸ್ಲೋನ್ ಸ್ಟೀಫನ್ಸ್‌ರನ್ನು ಮಣಿಸಿದ್ದಾರೆ. 6-2, 5-7, 6-4 ಸೆಟ್‌ಗಳ ಅಂತರದಿಂದ ಗೆದ್ದ ಬೀಟ್ರಿಜ್ ಹಡ್ಡಾಡ್ ಮಾಯಾ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ವರ್ಷದ ವಿಂಬಲ್ಡನ್‌ನಲ್ಲಿ ಹಡ್ಡಾಡ್ ಮಾಯಾ ಗಾಯದಿಂದ ನಿರ್ವೃತ್ತರಾಗಿದ್ದರು. ಮುಂದಿನ ಸುತ್ತಿನಲ್ಲಿ ಅವರಿಗೆ ಯುಎಸ್‌ಎನ ಟೇಲರ್ ಟೌನ್‌ಸೆಂಡ್ ಸವಾಲೊಡ್ಡಲಿದ್ದಾರೆ
ಮತ್ತೊಂದೆಡೆ ಯುಎಸ್‌ಎ ಆಟಗಾರ್ತಿ ಕೊಕೊ ಗೌಫ್ ಜರ್ಮನ್ ಕ್ವಾಲಿಫೈಯರ್ ಲಾರಾ ಸೀಗೆಮಂಡ್ ವಿರುದ್ಧ 3-6, 6-2, 6-4 ಅಂತರದಿಂದ ರೋಚಕ ಜಯ ಸಾಧಿಸಿದ್ದಾರೆ. ಈ ಸೆಣೆಸಾಟಕ್ಕೆ ಅಮೆರಿಕಾದ ಮಾಜಿ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ, ಬರಾಕ್ ಮತ್ತು ಮಿಚೆಲ್ ಒಬಾಮಾ ಹಾಜರಿದ್ದರು. ಈ ಪಂದ್ಯವು 2 ಗಂಟೆ 51 ನಿಮಿಷಗಳವರೆಗೆ ಸಾಗಿತ್ತು.