ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದ ಸಂದರ್ಭದಲ್ಲಿ ಪಂದ್ಯಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದ ಘಟನೆ ನಡೆದಿದೆ. ಅಮೆರಿಕಾದ ಆಟಗಾರ್ತಿ ಕೊಕೊ ಗೌಫ್ ಹಾಗೂ ಜೆಕ್ ರಿಪಬ್ಲಿಕ್‌ನ ಆಟಗಾರ್ತಿ ಕ್ಯಾರೊಲಿನಾ ಮುಕೋವಾ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಪಂದ್ಯದ ಎರಡನೇ ಸೆಟ್‌ನ ಸಂದರ್ಭದಲ್ಲಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಲು ಆರಂಭಿಸಿದರು.
ನ್ಯೂಯಾರ್ಕ್ ನಗರದ ಕ್ವೀನ್ಸ್‌ನ ಫ್ಲಶಿಂಗ್ ಮೆಡೋಸ್-ಕೊರೊನಾ ಪಾರ್ಕ್‌ನಲ್ಲಿರುವ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು. ಈ ಸಂದರ್ಭದಲ್ಲಿ ಕ್ರೀಡಾಂಗಣದ ಮೇಲಿನ ಹಂತದಿಂದ ಪ್ರತಿಭಟನಾಕಾರ ಘೋಷಣೆಗಳ ಶಬ್ದ ತೀವ್ರವಾಗಿದ್ದ ಕಾರಣ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಿ ಆಟಗಾರರು ಮೈದಾನವನ್ನು ತೊರೆದ ಘಟನೆಯೂ ನಡೆದಿದೆ. ಈ ಹಂತದಲ್ಲಿ ಗೌಫ್ ಪಂದ್ಯವನ್ನು 6-4, 1-0 ರಿಂದ ಮುನ್ನಡೆಯಲಿದ್ದರು.

ಅಂಪೈರ್‌ಗಳ ಸೂಚನೆಯ ಹೊರತಾಗಿಯೂ ಪ್ರತಿಭಟನಾಕಾರರು ತಮ್ಮ ಘೋಷಣೆಗಳನ್ನು ಮುಂದುವರೆಸಿ ಅಡ್ಡಿಪಡಿಸಿದರು. ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗಳು ಮಧ್ಯಪ್ರವೇಶಿಸಬೇಕಾಯಿತು. ಈ ಸಂದರ್ಬದಲ್ಲಿ ಅಭಿಮಾನಿಗಳು ಪ್ರತಿಭಟನಾಕಾರರ ವಿರುದ್ಧ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದು ಅವರನ್ನು ಹಪರಹಾಕುವಂತೆ ಘೋಷಣೆ ಕೂಗಲು ಆರಂಬಿಸಿದ್ದರು. ನಂತರ ಭದ್ರತಾ ಸಿಬ್ಬಂದಿಗಳು ಪ್ರತಿಭಟನಾಕಾರರನ್ನು ತಮ್ಮ ವಶಕ್ಕೆ ಪಡೆದುಕೊಂಡರು. ನಂತರ ಪಂದ್ಯ ಮುಂದುವರಿದಿದೆ.
ಇನ್ನು ಈ ಪಂದ್ಯದಲ್ಲಿ 19ರ ಹರೆಯದ ಕೊಕೊ ಗೌಫ್ ಅಮೋಘ ಗೆಲುವು ಸಾಧಿಸಿದ್ದು ತಮ್ಮ ವೃತ್ತಿ ಜೀವನದಲ್ಲಿ ಪ್ರಪ್ರಥಮ ಬಾರಿಗೆ ಯುಎಸ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಕ್ಯಾರೊಲಿನಾ ಮುಕೋವಾ ವಿರುದ್ಧದ ಪಂದ್ಯದಲ್ಲಿ ರೋಚಕವಾದ ಗೆಲುವು ಸಾಧಿಸಿದ ಬಳಿಕ ಈ ಸಾಧನೆ ಮಾಡಿದ್ದಾರೆ ಕೊಕೊ ಗೌಫ್.
ಫ್ಲಶಿಂಗ್ ಮೆಡೋಸ್‌ನಲ್ಲಿ ಸೆರೆನಾ ವಿಲಿಯಮ್ಸ್ ಬಳಿಕ ಸೆಮಿಫೈನಲ್ ತಲುಪಿದ ಮೊದಲ ಹದಿಹರೆಯದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಗೌಫ್. ಉತ್ತಮ ಫಾರ್ಮ್‌ನಲ್ಲಿ ಮೊದಲ ಸೆಟ್ ಆರಂಭಿಸಿದ ಗೌಫ್ 5-1 ಅಂತರದಿಂದ ಮುನ್ನಡೆ ಹೊಂದಿದ್ದರು. ಆದರೆ ಮುಕೋವಾ ಅದ್ಭುತ ಪೈಪೋಟಿ ನೀಡಿ ನಂತರ 5-4 ಅಂಕಗಳ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಈ ಮೊದಲ ಸೆಟ್‌ನಲ್ಲಿ ಇಬ್ಬರು ಆಟಗಾರರು 26 ತಪ್ಪುಗಳನ್ನು ಎಸೆಗಿದ್ದು ಏಳು ವಿನ್ನರ್‌ಗಳನ್ನು ಹೊಂದಿದ್ದರು. ಆದರೆ ಅಂತಿಮವಾಗಿ ಗೌಫ್ 6-4 ಅಂಕಗಳೊಂದಿಗೆ ಮೊದಲ ಸೆಟ್ ವಶಕ್ಕೆ ಪಡೆದುಕೊಂಡರು.
ಎರಡನೇ ಸೆಟ್ ಕೂಡ ಇಷ್ಟೇ ತೀವ್ರವಾದ ಪೈಪೋಟಿಯಿಂದ ಕೂಡಿತ್ತು. ಒಂದು ಹಂತದಲ್ಲಿ 3-3 ಸಮಬಲದಲ್ಲಿದ್ದ ಈ ಸೆಣೆಸಾಟದಲ್ಲಿ ನಂತರ ಗೌಫ್ 5-3 ಅಂತರದಿಂದ ಮುನ್ನಡೆ ಪಡೆದುಕೊಂಡರು. ಈ ಹಂತದಲ್ಲಿಯೂ ಮುಕೋವಾ ಹೋರಾಟ ಕೈಬಿಡಲಿಲ್ಲ ಹಾಗಾಗಿ ಮತ್ತೆ 5-5 ಅಂತರದಿಂದ ಬಮಬಲಕ್ಕೆ ಬಂದಿತ್ತು ಈ ಸೆಣೆಸಾಟ. ನಂತರ ಮತ್ತೆ ತೀವ್ರ ಕಾದಾಟದಲ್ಲಿ ಗೌಫ್ 6-5ರ ಮುನ್ನಡೆ ಪಡೆದುಕೊಂಡರು. ಮತ್ತೊಮ್ಮೆ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಮುಕೋವಾ ತೀವ್ರ ಹೋರಾಟ ಪ್ರದರ್ಶಿಸಿದರೂ ಅಂತಿಮವಾಗಿ ಕೊಕೊ ಗೌಫ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು. ಈ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.