ಶುಕ್ರವಾರ, ಸೆಪ್ಟೆಂಬರ್ 8ರಂದು ನ್ಯೂಯಾರ್ಕ್ ನಗರದ USTA ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಸೆಂಟರ್‌ನಲ್ಲಿ 2023ರ ಯುಎಸ್ ಓಪನ್ ಪುರುಷರ ಡಬಲ್ಸ್ ಫೈನಲ್ ಪಂದ್ಯವು ಮುಕ್ತಾಯಗೊಂಡಿತು.
ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಯು ಅಮೆರಿಕದ ರಾಜೀವ್ ರಾಮ್ ಮತ್ತು ಇಂಗ್ಲೆಂಡ್‌ನ ಜೋ ಸಾಲಿಸ್ಬರಿ ಜೋಡಿ ವಿರುದ್ಧ ರೋಚಕ ಡಬಲ್ಸ್ ಫೈನಲ್ ಹಣಾಹಣಿ ನಡೆಯಿತು.
ಆದರೆ, ಅಂತಿಮವಾಗಿ ಬೋಪಣ್ಣ ಮತ್ತು ಎಬ್ಡೆನ್ ಜೋಡಿಯು 6-2, 3-6, 4-6 ಸೆಟ್‌ಗಳಿಂದ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇನ್ನು ರಾಜೀವ್ ರಾಮ್-ಜೋ ಸಾಲಿಸ್‌ಬರಿ ಜೋಡಿಯು 2023ರ ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಗೆದ್ದು ನೂತನ ಚಾಂಪಿಯನ್ ಎನಿಸಿದರು.

ಭಾರತ-ಆಸ್ಟ್ರೇಲಿಯನ್ ಜೋಡಿಯಾದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರು ತಮ್ಮ ಎದುರಾಳಿ ಜೋಡಿಯ ವಿರುದ್ಧ ಮೊದಲ ಸೆಟ್ ಅನ್ನು 6-2 ಅಂತರದಿಂದ ಗೆದ್ದು ಪಂದ್ಯವನ್ನು ಉತ್ತಮವಾಗಿ ಪ್ರಾರಂಭಿಸಿದರು. ಆದರೆ, ನಂತರದ ಎರಡು ಸೆಟ್‌ಗಳಲ್ಲಿ ಅದನ್ನು ಪುನರಾವರ್ತಿಸಲು ವಿಫಲರಾದರು.
ಬಳಿಕ ಅಮೆರಿಕ-ಬ್ರಿಟಿಷ್ ಜೋಡಿಯಾದ ರಾಜೀವ್ ರಾಮ್ ಮತ್ತು ಜೋ ಸಾಲಿಸ್ಬರಿ ಎರಡನೇ ಸೆಟ್‌ನಲ್ಲಿ ಗಮನಾರ್ಹ ಪುನರಾಗಮನ ಮಾಡಿದರು. ಬೋಪಣ್ಣ ಮತ್ತು ಎಬ್ಡೆನ್ ಜೋಡಿಯನ್ನು 6-3 ಅಂತರದಿಂದ ಮಣಿಸಿದರು.
ಈ ಗೆಲುವು ಫೈನಲ್ ಪಂದ್ಯದ ನಿರ್ಣಾಯಕ ಮೂರನೇ ಸೆಟ್‌ಗೆ ತೆಗೆದುಕೊಂಡು ಹೋಯಿತು ಮತ್ತು ಪಂದ್ಯವು ನೆಕ್-ಟು-ನೆಕ್ ಹೋರಾಟವಾಗಿ ಕಂಡುಬಂತು.

ಮೂರನೇ ಸೆಟ್‌ನಲ್ಲಿ ಎರಡೂ ಜೋಡಿಗಳು ತಮ್ಮ ಹೋರಾಟದ ಮನೋಭಾವ ಪ್ರದರ್ಶಿಸಿದರು. ಆಗಾಗ ಅಂಕಗಳು ಸಮಬಲ ಸಾಧಿಸಿದವು. ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರ ತೀವ್ರ ಪ್ರಯತ್ನದ ಹೊರತಾಗಿಯೂ, ರಾಜೀವ್ ರಾಮ್ ಮತ್ತು ಜೋ ಸಾಲಿಸ್ಬರಿ ಅವರು ಫೈನಲ್ ಪಂದ್ಯದ ನಿರ್ಣಾಯಕ ಸೆಟ್‌ನಲ್ಲಿ ಮುನ್ನಡೆ ಸಾಧಿಸಿ 4-6 ಅಂತರದಿಂದ ಗೆದ್ದು ಬೀಗಿದರು.
ತೀವ್ರ ಪೈಪೋಟಿಯಿಂದ ಕೂಡಿದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಶ್ರೇಷ್ಠ ಕ್ರೀಡಾಮನೋಭಾವದ ಕ್ಷಣಗಳಿಗೆ ಸಾಕ್ಷಿಯಾಯಿತು. ಒಂದು ಹಂತದಲ್ಲಿ ರೋಹನ್ ಬೋಪಣ್ಣ ಅವರು ತಮ್ಮದೇ ಆದ ತಪ್ಪಿನ ಬಗ್ಗೆ ರೆಫರಿಯನ್ನು ಸಂಪರ್ಕಿಸಿದ ಬಳಿಕ ಒಂದು ಅಂಕವನ್ನು ಬಿಟ್ಟುಕೊಟ್ಟರು. ಇದು ಅಂಪೈರ್ ಅಥವಾ ಅವರ ಎದುರಾಳಿಗಳ ಗಮನಕ್ಕೆ ಬರಲಿಲ್ಲ.
ಅಂತಿಮವಾಗಿ, ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು 2023ರ ಯುಎಸ್ ಓಪನ್ ಪುರುಷರ ಡಬಲ್ಸ್ ಫೈನಲ್‌ನಲ್ಲಿ ರನ್ನರ್ ಅಪ್ ಆಗಿ ಮುಗಿಸಿದರು.
ಸೋಲಿನ ಹೊರತಾಗಿಯೂ, ಈ ಪಂದ್ಯದಲ್ಲಿ ರೋಹನ್ ಬೋಪಣ್ಣ ಅವರು ಗಮನಾರ್ಹ ಸಾಧನೆ ಮಾಡಿದರು. 43 ವರ್ಷ 6 ತಿಂಗಳ ವಯಸ್ಸಿನಲ್ಲಿ ಟೆನ್ನಿಸ್ ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎನಿಸಿದರು.
ಇದು ಗ್ರ್ಯಾಂಡ್ ಸ್ಲಾಮ್ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಅವರ ಎರಡನೇ ಪ್ರದರ್ಶನವಾಗಿದೆ, 2010ರಲ್ಲಿ ನಡೆದ ಯುಎಸ್ ಓಪನ್‌ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದರು.