
ವಿಂಬಲ್ಡನ್, ಜೂನ್ 2: ವಿಶ್ವದ ನಂಬರ್ 1 ಶ್ರೇಯಾಂಕಿತ ನೋವಾಕ್ ಜೊಕೋವಿಕ್ ಮೂರನೇ ಸುತ್ತಿನ ಕಾದಾಟದಲ್ಲಿ ತೀವ್ರ ಪೈಪೋಟಿಯನ್ನು ಎದುರಿಸಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕಾದ ಆಟಗಾರ ಡೆನಿಸ್ ಕುಡ್ಲ ವಿರುದ್ಧ 6-4, 6-3, 7-6 ಅಂತರದಿಂದ ಗೆಲುವು ಸಾಧಿಸಿದರು. ಈ ಜಿದ್ದಾಜಿದ್ದಿನ ಕಾದಾಟ ಎರಡು ಗಂಟೆಗೂ ಅಧಿಕ ಕಾಲ ಸಾಗಿತ್ತು.
ಈ ಗೆಲುವಿನ ಮೂಲಕ ಜೊಕೋವಿಕ್ ಪ್ರತಿಷ್ಟಿತ ವಿಂಬಲ್ಡನ್ ಟೂರ್ನಿಯಲ್ಲಿ 75ನೇ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಜೊಕೋವಿಕ್ ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿಯೂ 75ಕ್ಕೂ ಅಧಿಕ ಗೆಲುವು ಪಡೆದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ 82 ಗೆಲವು ಫ್ರೆಂಚ್ ಓಪನ್‌ನಲ್ಲಿ 81 ಗೆಲುವು ಹಾಗೂ ವಿಂಬಲ್ಡನ್ ಹಾಗೂ ಯುಎಸ್ ಓಪನ್‌ನಲ್ಲಿ ತಲಾ 75 ಗೆಲುವು ಪಡೆದುಕೊಂಡಿದ್ದಾರೆ. ಇದು ವಿಂಬಲ್ಡನ್‌ನಲ್ಲಿ ಜೊಕೋವಿಕ್ ಅವರ ಸತತ 17ನೇ ಗೆಲುವಾಗಿದೆ.
ಇನ್ನು ಈ ಪಂದ್ಯದ ಗೆಲುವಿನ ಮೂಲಕ ಅಮೇರಿಕಾದ ಟೆನ್ನಿಸಿಗ ಕುಡ್ಲ ವಿರುದ್ಧ ಜೊಕೋವಿಕ್ ಹೆಡ್ ಟು ಹೆಡ್ ಅಂಕಿಅಂಶದಲ್ಲಿ 3-0 ಮುನ್ನಡೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಜೊಕೋವಿಕ್ ಈ ಸೀಸನ್‌ನ್ಲಲಿ 30ನೇ ಗೆಲುವನ್ನು ಸಾಧಿಸಿದಂತಾಗಿದೆ.
ಇನ್ನು ನೊವಾಕ್ ಜೊಕೋವಿಕ್ ಈವರೆಗೆ 16 ಬಾರಿ ವಿಂಬಲ್ಡನ್‌ನಲ್ಲಿ ಆಡಿದ್ದು ಇದರಲ್ಲಿ 13ನೇ ಬಾರಿ ನಾಲ್ಕನೇ ಸುತ್ತಿಗೆ ಪ್ರವೇಶವನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. 2018 ಹಾಗೂ 2019ರ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಜೊಕೋವಿಕ್ ಸತತ ಮೂರನೇ ಬಾರಿಗೆ ವಿಂಬಲ್ಡನ್ ಟ್ರೋಫಿಗೆ ಮುತ್ತಿಕ್ಕುವ ಹಾದಿಯಲ್ಲಿದ್ದಾರೆ.