
ಮೆಲ್ಬೋರ್ನ್, ಮೇ 12: ಆಸ್ಟ್ರೇಲಿಯಾದ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿ ಬಿಗ್ ಬ್ಯಾಷ್ ಲೀಗ್(ಬಿಬಿಎಲ್)ನಲ್ಲಿ ಆಡಲು ಈ ಮೊದಲು ಆಸಕ್ತಿ ತೋರಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿ'ವಿಲಿಯರ್ಸ್ ಇದೀಗ ಗುಡ್ ಬೈ ಹೇಳಿದ್ದಾರೆ.
35 ವರ್ಷದ ಅನುಭವಿ ಆಟಗಾರ 2019-20ರ ಆವೃತ್ತಿಯ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವ ಇಂಗಿತ ವ್ಯಕ್ತ ಪಡಿಸಿರುವುದಾಗಿ ಕಳೆದ ತಿಂಗಳು ವರದಿಯಾಗಿತ್ತು. ಆದರೀಗ ಇತ್ತೀಚಿನ ವರದಿ ಪ್ರಕಾರ ಹರಿಣ ಪಡೆಯ ಮಾಜಿ ನಾಯಕ ಬಿಗ್ ಬ್ಯಾಷ್ ಲೀಗ್‌ನಿಂದ ಹಿಂದೆ ಸರಿದಿರುವುದು ಖಾತ್ರಿಯಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಬಳಿಕ ಕ್ಲಬ್ ಮಟ್ಟದ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಸಕ್ರಿಯರಾಗಿರುವ ಡಿ'ವಿಲಿಯರ್ಸ್, 2019ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 13 ಪಂದ್ಯಗಳನ್ನಾಡಿ 442 ರನ್‌ಗಳನ್ನು ಚಚ್ಚಿದ್ದಾರೆ. ಆದರೂ ರಾಯಲ್ ಚಾಲೆಂಜರ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತ್ತು.
ಐಪಿಎಲ್ ಫೈನಲ್ 2019: ವಿಜೇತ ತಂಡಕ್ಕೆ ಭರ್ಜರಿ ನಗದು ಬಹುಮಾನ
ಇತ್ತೀಚೆಗಷ್ಟೇ ಕ್ರಿಕೆಟ್ ಆಸ್ಟ್ರೇಲಿಯಾ ಬಿಗ್ ಬ್ಯಾಷ್ ಲೀಗ್‌ನ ಫ್ರಾಂಚೈಸಿ ತಂಡಗಳು ಮುಂಬರುವ ಟೂರ್ನಿಯಲ್ಲಿ 4ರ ಬದಲಾಗಿ 6 ವಿದೇಶಿ ಆಟಗಾರರನ್ನು ಹೊಂದಲು ಅನುಮತಿ ನೀಡಿತ್ತು. ಇನ್ನು ತಂಡದ 18 ಆಟಗಾರರ ಸದಸ್ಯತ್ವದಲ್ಲಿ 2 ವಿದೇಶಿ ಆಟಗಾರರನ್ನು ಹೊಂದಬಹುದು. ಇದಕ್ಕೆ ಹೆಚ್ಚುವರಿಯಾಗಿ 4 ಮಂದಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶವಿದೆ.
ಈ ನಿಟ್ಟಿನಲ್ಲಿ ಡಿವಿಲಿಯರ್ಸ್ ಬಿಬಿಎಲ್‌ನಲ್ಲಿ ಆಡುವ ಇಂಗಿತ ವ್ಯಕ್ತ ಪಡಿಸಿದ್ದರು. ಆದರೆ, ಇದೀಗ ಹಠಾತ್ತನೆ ಹಿಂದೆ ಸರಿದಿರುವುದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.
"ಕ್ಲಬ್ ತಂಡಗಳಿಗೆ ಗರಿಷ್ಠ 2 ವಿದೇಶಿ ಆಟಗಾರರನ್ನು ಹೊಂದಲು ಅನುಮತಿಸಲಾಗಿದೆ. ಹಾಗೆಯೇ ವಿದೇಶಿ ಆಟಗಾರರಲ್ಲಿ ಬದಲಾವಣೆ ತಂದುಕೊಳ್ಳಲು ಹೆಚ್ಚುವರಿಯಾಗಿ 4 ಆಟಗಾರರೊಡನೆ ಒಪ್ಪಂದ ಹೊಂದ ಬಹುದಾಗಿದೆ. ಇದು ಟೂರ್ನಿಯ ಮೇಲೆ ಉತ್ತಮ ಪ್ರಭಾವ ಬೀರಲಿದೆ. ವಿದೇಶಿ ಆಟಗಾರರಿಗೆ ಅಲ್ಪಾವಧಿಗೆ ಇಲ್ಲಿ ಬಂದು ಆಡುವ ಅವಕಾಶ ಲಭ್ಯವಾಗಲಿದೆ,'' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿತ್ತು.