Pak vs Afg: ಚೆನ್ನೈನಲ್ಲಿ ಕೂಡ ಪಾಕಿಸ್ತಾನ ಗೆಲ್ಲೋದು ಅನುಮಾನ! ಪಾಕ್ ಮಾಜಿ ಕ್ರಿಕೆಟಿಗನ ಅಚ್ಚರಿಯ ಹೇಳಿಕೆ
ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಗೆದ್ದ ಪಾಕಿಸ್ತಾನ ನಂತರ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದೆ. ಪಾಕಿಸ್ತಾನದ ಅಭಿಮಾನಿಗಳು, ಮಾಜಿ ಆಟಗಾರರೆ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 23 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಈ ಪಂದ್ಯದಲ್ಲಿ ಪಾಕಿಸ್ತಾನ ಸೋಲುವ ಸಾಧ್ಯತೆ ಇದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನವು 2023 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಫೇವರಿಟ್ ಆಗಿ ಆಡಲಿದೆ ಎಂದು ರಮಿಜ್ ರಾಜಾ ಹೇಳಿದ್ದಾರೆ. ಗುಣಮಟ್ಟದ ಸ್ಪಿನ್ ಬೌಲಿಂಗ್ ಇದ್ದು, ಪಾಕಿಸ್ತಾನದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದರಿಂದ ಆಫ್ಘನ್ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು ಎಂದು ಹೇಳಿದರು.
ಏನು ಬೇಕಾದರು ಆಗಬಹುದು!
''ಪಾಕಿಸ್ತಾನಕ್ಕೆ ತಿರುಗೇಟು ನೀಡುವುದು ಕಷ್ಟ. ಅಫ್ಘಾನಿಸ್ತಾನ ವಿರುದ್ಧದ ಮುಂದಿನ ಪಂದ್ಯದಲ್ಲಿ ಚೆನ್ನೈನಲ್ಲಿ ಏನು ಬೇಕಾದರೂ ಆಗಬಹುದು. ಸ್ಪಿನ್ ವಿರುದ್ಧ ಪಾಕಿಸ್ತಾನ ಬ್ಯಾಟರ್‌ಗಳ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಏನು ಬೇಕಾದರೂ ಆಗಬಹುದು. ಇದು ಸ್ಪಿನ್ನಿಂಗ್ ವಿಕೆಟ್ ಆಗಿದ್ದರೆ, ಅಫ್ಘಾನಿಸ್ತಾನಕ್ಕೆ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ರಾಜಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
2012 ರಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಭೇಟಿಯ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಏಳು ಬಾರಿ ಮುಖಾಮುಖಿಯಾಗಿದೆ. ಅಫ್ಘಾನಿಸ್ತಾನ ಇದುವರೆಗೂ ಏಕದಿನ ಮಾದರಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿಲ್ಲ, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನೇ ಈ ಬಾರಿ ವಿಶ್ವಕಪ್‌ನಲ್ಲಿ ಸೋಲಿಸಿರುವ ಅಫ್ಗಾನಿಸ್ತಾನ ಸುಲಭವಾಗಿ ಅಂತೂ ಸೋಲುವುದಿಲ್ಲ.
ಪಾಕಿಸ್ತಾನ ಫೀಲ್ಡಿಂಗ್ ವಿರುದ್ಧ ಟೀಕೆ
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಅಕ್ಟೋಬರ್ 20 ರಂದು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ತಂಡ ಫೀಲ್ಡಿಂಗ್ ಮಾಡಿದ ರೀತಿಗೆ ರಾಜಾ ಕೋಪಗೊಂಡಿದ್ದಾರೆ.
ಡೇವಿಡ್ ವಾರ್ನರ್ 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಉಸಾಮಾ ಮಿರ್ ಮಿಡ್ ಆನ್‌ನಲ್ಲಿ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು. ವಾರ್ನರ್ ಅವರು 124 ಎಸೆತಗಳಲ್ಲಿ 14 ಬೌಂಡರಿ ಮತ್ತು 9 ಸಿಕ್ಸರ್‌ಗಳ ನೆರವಿನಿಂದ 163 ರನ್ ಗಳಿಸುವ ಮೂಲಕ ಪಾಕಿಸ್ತಾನವನ್ನು ಕಾಡಿದರು. 368ರ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಪಾಕಿಸ್ತಾನ 62 ರನ್‌ಗಳಿಂದ ಸೋಲನುಭವಿಸಿತು.
ಕ್ಯಾಚ್ ಕೈಬಿಟ್ಟ ನಂತರ ಪಂದ್ಯದ ಸ್ವರೂಪವೇ ಬದಲಾಯಿತು. ಶಾಹೀನ್ ವಾರ್ನರ್ ಅವರನ್ನು ಹಿಂದಕ್ಕೆ ಕಳುಹಿಸಿದ್ದರೆ, ಆಸ್ಟ್ರೇಲಿಯಾವನ್ನು ಒತ್ತಡಕ್ಕೆ ಸಿಲುಕಿಸಬಹುದಿತ್ತು. ಪಾಕಿಸ್ತಾನದ ಫೀಲ್ಡಿಂಗ್ ತುಂಬಾ ಕೆಟ್ಟದಾಗಿತ್ತು. ಹೀಗಾಗಿ ಒತ್ತಡ ಸೃಷ್ಟಿಯಾಯಿತು ಎಂದು ರಾಜಾ ಹೇಳಿದರು. ಅಂಕಪಟ್ಟಿಯಲ್ಲಿ ಪಾಕಿಸ್ತಾನ ಸದ್ಯ 5ನೇ ಸ್ಥಾನದಲ್ಲಿದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆಯಬೇಕೆಂದರೆ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications