ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ತೀವ್ರ ಪೈಪೋಟಿಯ ಕಾದಾಟ ನಡೆಸಿದೆ. ಕೊನೆಯ ಹಂತದವರಗೂ ಅತ್ಯಂತ ರೋಚಕವಾಗಿ ನಡೆದ ಕಾದಾಟದಲ್ಲಿ ಪಾಕಿಸ್ತಾನ ಕೇವಲ ಒಂದು ವಿಕೆಟ್‌ಗಳ ಅಂತರದಿಂದ ಒಂದು ಎಸೆತ ಬಾಕಿಯಿರುವಂತೆ ಗೆಲುವು ಸಾಧಿಸುವ ಮೂಲಕ ಗೆದ್ದು ಬೀಗಿದೆ. ಈ ಮೂಲಕ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಆರಂಭಿಕ ಆಟಗಾರ ಮೊಹಮ್ಮದ್ ಗುರ್ಬಾಜ್. ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಗುರ್ಬಾಜ್ ಅಮೋಘ ಶತಕ ಸಿಡಿಸಿದ ಕಾರಣ ಅಫ್ಘಾನಿಸ್ತಾನ ತಂಡ ಈ ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. ಐವತ್ತು ಓವರ್‌ಗಳಲ್ಲಿ ಅಫ್ಘಾನಿಸ್ತಾನ ತಂಡ 300 ರನ್‌ಗಳನ್ನು ಕಲೆ ಹಾಕಿ ಪಾಕಿಸ್ತಾನ ತಂಡಕ್ಕೆ ಬೃಹತ್ ಗುರಿಯನ್ನು ಮುಂದಿಟ್ಟಿತ್ತು.

ಗುರ್ಬಾಜ್ ಈ ಪಂದ್ಯದಲ್ಲಿ ಆರಂಭಿಕ ಜೊತೆಗಾರ ಇಬ್ರಾಹಿಮ್ ಜದ್ರಾನ್ ಅವರೊಂದಿಗೆ ಮೊದಲ ವಿಕೆಟ್‌ಗೆ ಅಮೋಘ ಜೊತೆಯಾಟ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ಭರ್ತಿ 227 ರನ್‌ಗಳನ್ನು ಕಲೆಹಾಕುವ ಮೂಲಕ ಪಾಕಿಸ್ತಾನದ ವಿರುದ್ಧ ಯಾವುದೇ ಆರಂಭಿಕ ಜೋಡಿಯಿಂದ ದಾಖಲಾದ ಎರಡನೇ ಅತಿ ದೊಡ್ಡ ಜೊತೆಯಾಟಕ್ಕೆ ಕಾರಣವಾದರು. ಗುರ್ಬಾಜ್ ಈ ಪಂದ್ಯದಲ್ಲಿ 151 ರನ್‌ಗಳನ್ನು ಗಳಿಸಿದ್ದು 14 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಅವರಿಗೆ ಅದ್ಭುತವಾಗಿ ಸಾಥ್ ನಿಡಿದ ಜದ್ರಾನ್ 80 ರನ್‌ಗಳ ಕೊಡುಗೆ ನೀಡಿ ಗಮನ ಸೆಳೆದರು.
ಇನ್ನು ಈ ಪಂದ್ಯದಲ್ಲಿ ಮೊಹಮ್ಮದ್ ಗುರ್ಬಾಜ್ ಹಲವು ದಾಖಲೆಗಳನ್ನು ಮುರಿದಿದ್ದು ಅದರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ 18 ವರ್ಷಗಳ ಹಿಂದಿನ ದಾಖಲೆಯೊಂದು ಕೂಡ ಸೇರಿದೆ. ಗುರ್ಬಾಜ್ ಈಗ ಪಾಕಿಸ್ತಾನದ ವಿರುದ್ಧ ವಿಕೆಟ್ ಕೀಪರ್ ಬ್ಯಾಟರ್ ಓರ್ವ ಗಳಿಸಿದ ಅತಿ ಹೆಚ್ಚಿನ ರನ್‌ಅನ್ನು ಈ ಪಂದ್ಯದಲ್ಲಿ ಗಳಿಸಿದ್ದಾರೆ. ಇದಕ್ಕೂ ಮುನ್ನ ಎಂಎಸ್ ಧೋನಿ ವಿಶಾಖಪಟ್ಟಣಂನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡಿದ್ದಾಗ 148 ರನ್‌ಗಳನ್ನು ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಆ ಪಂದ್ಯವನ್ನು ಭಾರತ 58 ರನ್‌ಗಳಿಂದ ಗೆದ್ದಿತ್ತು.
ಇನ್ನು ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ 300 ರನ್‌ಗಳನ್ನು ಗಳಿಸಿದ ಹೊರತಾಗಿಯೂ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಕೂಡ ಉತ್ತಮ ಆರಂಭವನ್ನು ಪಡೆಯಿತು. ಅಲ್ಲದೆ ಅಗ್ರ ಕ್ರಮಾಂಕದ ಮೂವರು ಆಟಗಾರರಿಂದ ಪಾಕ್‌ಗೆ ಉತ್ತಮ ರನ್‌ಗಳು ಹರಿದುಬಂದಿತ್ತು. ಇಮಾಮ್ ಉಲ್ ಹಕ್ 91 ರನ್‌ಗಳಿಸಿದ್ದರೆ ಫಕರ್ ಜಮಾನ್ 30 ರನ್‌ಗಳಿಸಿದರು. ಇನ್ನು ನಾಯಕ ಬಾಬರ್ ಅಜಂ 53 ರನ್‌ಗಳ ಕೊಡುಗೆ ನೀಡಿದರು.
ಆದರೆ ನಂತರ ಮಧ್ಯಮ ಕ್ರಮಾಂಕದ ದಾಂಡಿಗರ ವಿರುದ್ಧ ಅಫ್ಘಾನಿಸ್ತಾನ ಬೌಲರ್‌ಗಳು ಉತ್ತಮ ಮೇಲುಗೈ ಸಾಧಿಸಿದರು. ಹೀಗಾಗಿ ಪಾಕಿಸ್ತಾನ ತಂಡ ಈ ಹಂತದಲ್ಲಿ ಹಿನ್ನಡೆ ಕಂಡಿತು. ಒಂದು ಹಂತದಲ್ಲಿ ಅಫ್ಘಾನಿಸ್ತಾನ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಅಫ್ಘನ್ ಪಡೆಯ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು ಆಲ್‌ರೌಂಡರ್ ಶದಬ್ ಖಾನ್. ಕೊನೆಯ ಹಂತದವರೆಗೂ ಹೋರಾಡಿದ ಶದಬ್ ಪಾಕಿಸ್ತಾನ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು.
ಅಂತಿಮ ಓವರ್‌ನಲ್ಲಿ ಶದಬ್ ಖಾನ್ ಮಂಕಡಿಂಗ್‌ಗೆ ತಮ್ಮ ವಿಕೆಟ್ ಕಳೆದುಕೊಂಡಾಗ ಪಾಕಿಸ್ತಾನ ತಂಡ ಒಂದು ಓವರ್‌ಗಳಲ್ಲಿ 7 ರನ್‌ಗಳನ್ನು ಗಳಿಸಬೇಕಿತ್ತು. ಆದರೆ ಕೈಯ್ಯಲ್ಲಿ ಕೇವಲ ಒಂದು ವಿಕೆಟ್ ಮಾತ್ರವೇ ಇತ್ತು. ಆದರೆ ನಸೀಮ್ ಶಾ ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪಾಕಿಸ್ತಾನ ಈ ಸರಣಿಯ ಎರಡನೇ ಪಂದ್ಯವನ್ನು ಕೂಡ ಗೆದ್ದುಕೊಂಡಿದ್ದು ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.