ಪಾಕಿಸ್ತಾನದ ವಿರುದ್ಧ ಸೋತಿದ್ದಕ್ಕೆ ಭಾರತ ತಂಡದಲ್ಲಿ ಬದಲಾವಣೆಯಾಗುತ್ತಿದೆ ಎಂದ ರಮೀಝ್ ರಾಜಾ

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ರಮೀಝ್ ರಾಜಾರನ್ನು ತೆಗೆದುಹಾಕಲಾಗಿದೆ. ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ರಮೀಝ್ ರಾಜಾ ವಿರುದ್ಧ ಬಹಿರಂಗವಾಗಿಯೇ ಟೀಕೆ ಮಾಡಿದ್ದರು. ಅವರನ್ನು ಪಿಸಿಬಿಯಿಂದ ಹೊರಹಾಕಿದ ನಂತರ ಆಗುತ್ತಿರುವ ಬದಲಾವಣೆ ಬಗ್ಗೆ ಕೂಡ ರಾಜಾ ಮಾತನಾಡಿದ್ದಾರೆ.
ತಾನು ಅಧಿಕಾರದಲ್ಲಿ ಪಾಕಿಸ್ತಾನ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ರಮೀಝ್ ರಾಜಾ ಹೇಳಿದ್ದಾರೆ. ಸುಮೋ ಟಿವಿಯಲ್ಲಿ ಮಾತನಾಡಿದ ಅವರು, ತಮ್ಮನ್ನು ಟೀಕಿಸಿದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತ ತಂಡದಲ್ಲಿ ಹಲವು ಬದಲಾವಣೆ ಮಾಡಲು ಪಾಕಿಸ್ತಾನವೇ ಕಾರಣ ಎಂದು ಅವರು ಹೇಳಿದ್ದಾರೆ.
"ಪಾಕಿಸ್ತಾನ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಏಷ್ಯಾಕಪ್‌ನಲ್ಲಿ ಫೈನಲ್ ತಲುಪಿದ್ದೇವೆ, ಭಾರತ ಫೈನಲ್ ತಲುಪಲು ವಿಫಲವಾಯಿತು. ಭಾರತದ ಬಿಲಿಯನ್ ಡಾಲರ್ ಕ್ರಿಕೆಟ್ ಮಂಡಳಿ ಪಾಕಿಸ್ತಾನಕ್ಕಿಂತ ಹಿಂದುಳಿದಿದೆ. ಪಾಕ್ ವಿರುದ್ಧ ಸೋಲನುಭವಿಸಿದ ಬಳಿಕ, ಬಿಸಿಸಿಐ ಭಾರತ ಕ್ರಿಕೆಟ್ ತಂಡ ಮುಖ್ಯ ಆಯ್ಕೆ ಸಮಿತಿಯನ್ನು ವಜಾಗೊಳಿಸಿತು. ಪಾಕಿಸ್ತಾನ ತಂಡ ಭಾರತ ತಂಡಕ್ಕೆ ಮುಂದೆ ಸಾಗಿತು ಎಂದು ಅವರು ತಮ್ಮ ತಂಡದ ನಾಯಕನನ್ನು ಕೂಡ ಬದಲಾವಣೆ ಮಾಡಿದ್ದಾರೆ." ಎಂದು ರಮೀಝ್ ರಾಜಾ ಹೇಳಿದರು.

ಫೈನಲ್‌ನಲ್ಲಿ ಸೋತ ಪಾಕಿಸ್ತಾನ
ರಮೀಝ್ ರಾಜಾ ಅಧಿಕಾರಾವಧಿಯಲ್ಲಿ, ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ ಭಾರತ ತಂಡದ ವಿರುದ್ಧ ಮೊದಲ ಗೆಲುವು ಸಾಧಿಸಿತು. 2021 ರಲ್ಲಿ ನಡೆದ ಟಿ20 ವಿಶ್ವಕಪ್‌ನ ಗುಂಪು ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. 2021ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಪಾಕಿಸ್ತಾನ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದರು.
2022ರಲ್ಲಿ ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲನುಭವಿಸಿತು. ಆದರೆ, ಭಾರತದ ವಿರುದ್ಧದ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಆದರೂ, ಫೈನಲ್‌ನಲ್ಲಿ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಸೋಲನುಭವಿಸಿತು.
ಟಿ20 ವಿಶ್ವಕಪ್ 2022ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು. ಆದರೂ, ಅದೃಷ್ಟದ ನೆರವಿನಿಂದ ಸೆಮಿಫೈನಲ್ ಪ್ರವೇಶಿಸಿದ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತು, ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತು.
ಟಿ20 ವಿಶ್ವಕಪ್ ಮುಕ್ತಾಯವಾದ ನಂತರ ಪಾಕಿಸ್ತಾನ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಮುಖಭಂಗ ಅನುಭವಿಸಿತು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ವೈಟ್ ವಾಶ್ ಮಾಡಿತು.
ಬಿಸಿಸಿಐ ಏಷ್ಯಾಕಪ್ -2023ರಲ್ಲಿ ಪಾಲ್ಗೊಳ್ಳಲು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಲ್ಲ ಎಂದು ಹೇಳಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರಮೀಝ್ ರಾಜಾ, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಕಳುಹಿಸುವುದಿಲ್ಲ ಎಂದು ಹೇಳಿದ್ದರು. ಈ ಬೆನ್ನಲ್ಲೇ ಅವರನ್ನು ಪಿಸಿಬಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದಾರೆ. ಆದರೂ ರಾಜಾ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications