ಇತ್ತೀಚೆಗೆ ಭಾರತದಲ್ಲಿ ಮುಕ್ತಾಯಗೊಂಡ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕಳಪೆ ಅಭಿಯಾನ ಹೊಂದಿತ್ತು. ಒಟ್ಟು ಒಂಬತ್ತು ಲೀಗ್ ಪಂದ್ಯಗಳಲ್ಲಿ ಬಾಬರ್ ಅಜಂ ಪಡೆ ಕೇವಲ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿತು ಮತ್ತು ಲೀಗ್ ಹಂತದಲ್ಲೇ ಪಂದ್ಯಾವಳಿಯಿಂದ ಹೊರಬಿತ್ತು.
ಅಂದಿನಿಂದ ಪಾಕಿಸ್ತಾನ ತಂಡ, ವಿಶೇಷವಾಗಿ ಬಾಬರ್ ಅಜಂ ಅವರು ತಮ್ಮ ಮಾಜಿ ಕ್ರಿಕೆಟಿಗರು ಮತ್ತು ಪಂಡಿತರಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. 29ರ ಹರೆಯದ ಬಾಬರ್ ಅಜಂ ಎಲ್ಲಾ ಮೂರು ಮಾದರಿಗಳ ನಾಯಕತ್ವದಿಂದ ಕೆಳಗಿಳಿದರು.
ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸೋತ ಎಲ್ಲಾ ಐದು ಪಂದ್ಯಗಳಲ್ಲಿ, ಅಫ್ಘಾನಿಸ್ತಾನದ ವಿರುದ್ಧದ ಸೋಲು ಅತಿದೊಡ್ಡ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ತಂಡವು ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ದಾಖಲಿಸಿತು. ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದ ಹಶ್ಮತುಲ್ಲಾ ಶಾಹಿದಿ ನಾಯಕತ್ವದ ತಂಡಕ್ಕೆ, ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು.
ವಿಶ್ವಕಪ್‌ನಲ್ಲಿ ಸೋಲಿನ ಬಳಿಕ, ಪಾಕಿಸ್ತಾನ ತಂಡ ಮತ್ತು ಕೋಚಿಂಗ್ ಸಿಬ್ಬಂದಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಅಜಯ್ ಜಡೇಜಾ ಅವರನ್ನು ಪಾಕಿಸ್ತಾನದ ಕೋಚ್ ಪಾತ್ರವನ್ನು ತೆಗೆದುಕೊಳ್ಳಲು ಬಯಸುತ್ತೀರಾ ಎಂದು ಪ್ರಶ್ನಿಸಲಾಯಿತು. ಇದಕ್ಕೆ, "ಐ ಯಾಮ್ ರೆಡಿ' (ನಾನು ಸಿದ್ಧ) ಎಂದು ಉತ್ತರಿಸಿ ಅಚ್ಚರಿ ಮೂಡಿಸಿದರು.
"ನಾನು ನನ್ನ ಕಲಿಕೆಯನ್ನು ಅಫ್ಘಾನಿಸ್ತಾನ ತಂಡದೊಂದಿಗೆ ಹಂಚಿಕೊಂಡಿದ್ದೇನೆ ಮತ್ತು ಪಾಕಿಸ್ತಾನ ಕೂಡ ಒಂದು ಕಾಲದಲ್ಲಿ ಅಫ್ಘಾನಿಸ್ತಾನದಂತಿತ್ತು ಎಂದು ನಾನು ನಂಬುತ್ತೇನೆ. ನಿಮ್ಮ ಸಹ ಆಟಗಾರನ ಮುಖದಲ್ಲಿ ನೀವು ಏನು ಬೇಕಾದರೂ ಹೇಳಬಹುದು," ಎಂದು ಅಜಯ್ ಜಡೇಜಾ ಸ್ಪೋರ್ಟ್ಸ್ ಟಾಕ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 1996ರ ಏಕದಿನ ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನವಜೋತ್ ಸಿಂಗ್ ಸಿಧು, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದೇ ಪಂದ್ಯದಲ್ಲಿ ಅಜಯ್ ಜಡೇಜಾ ಪಾಕಿಸ್ತಾನ ವಿರುದ್ಧ 25 ಎಸೆತಗಳಲ್ಲಿ 45 ರನ್ ಗಳಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಭಾರತಕ್ಕೆ ನೆರವಾಗಿದ್ದರು.
ಬಾಬರ್ ಅಜಂ ಮೂರೂ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದರೆ, ಪಾಕಿಸ್ತಾನ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿದ್ದ ತಂಡದ ಸಂಪೂರ್ಣ ಮ್ಯಾನೇಜ್‌ಮೆಂಟ್ ಅನ್ನು ವಜಾಗೊಳಿಸಿದೆ.

ಆರಂಭಿಕ ಬ್ಯಾಟರ್ ಶಾನ್ ಮಸೂದ್ ಅವರು ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದು, ಶಾಹೀನ್ ಶಾ ಅಫ್ರಿದಿ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ತಂಡದ ಮ್ಯಾನೇಜ್‌ಮೆಂಟ್‌ನಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರನ್ನು ಕ್ರಿಕೆಟ್ ನಿರ್ದೇಶಕರಾಗಿ ನೇಮಿಸಲಾಯಿತು ಮತ್ತತು ಮಾಜಿ ವೇಗಿ ವಹಾಬ್ ರಿಯಾಜ್ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಸದ್ಯ ಪಾಕಿಸ್ತಾನ ತಂಡವು ಮೂರು ಟೆಸ್ಟ್ ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಡಿಸೆಂಬರ್ 14ರಿಂದ ಪರ್ತ್‌ನಲ್ಲಿ ಮೊದಲ ಪಂದ್ಯವನ್ನು ಆರಂಭಿಸುತ್ತದೆ. ಟೆಸ್ಟ್ ಸರಣಿಗೂ ಮುನ್ನ ಪಾಕಿಸ್ತಾನ ತಂಡ ಬುಧವಾರದಿಂದ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.