ಅಫ್ಘಾನಿಸ್ತಾನವೇ ಗೆಲ್ಲಬೇಕಿತ್ತು, ಗೆದ್ದಿದೆ!: ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯ ಹೀಗಿದೆ ನೋಡಿ
ದುಬೈ, ಸೆಪ್ಟೆಂಬರ್ 26: 'ಅಯ್ಯೋ, ಅಫ್ಘಾನಿಸ್ತಾನ ಗೆಲ್ಲಬೇಕಿತ್ತು...'- ಇದು ಅಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿಯ ಬೇಸರದ ಉದ್ಗಾರವಲ್ಲ. ಭಾರತವನ್ನು ವಿರೋಧಿಸುವ ಕ್ರಿಕೆಟ್ ಪ್ರೇಮಿಗಳ ಹತಾಶೆಯೂ ಅಲ್ಲ. ಸ್ವತಃ ಭಾರತದ ಕ್ರಿಕೆಟ್ ಅಭಿಮಾನಿಗಳ ಬೇಸರ ನುಡಿ.
ಕ್ರಿಕೆಟ್ ಶಿಶು ಎಂದೇ ಪರಿಗಣಿಸಲಾಗಿದ್ದ ಅಫ್ಘಾನಿಸ್ತಾನ ನೀಡುತ್ತಿರುವ ಅಮೋಘ ಪ್ರದರ್ಶನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಏಷ್ಯಾ ಕಪ್‌ನ ಮೊದಲ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ಆಘಾತ ನೀಡಿದ್ದ ಅಫ್ಘಾನಿಸ್ತಾನ, ನಂತರದ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ಗೆಲುವಿನ ಸಮೀಪ ಬಂದು ಅವಕಾಶ ಕಳೆದುಕೊಂಡಿತ್ತು.
ಭಾರತದ ವಿರುದ್ಧವೂ ಅಫ್ಘಾನಿಸ್ತಾನ ನೀಡಿದ ಪೈಪೋಟಿ ಗಮನಾರ್ಹ. ಪಂದ್ಯ ಗೆಲ್ಲದಿದ್ದರೂ, ಬಲಿಷ್ಠ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳನ್ನು ಕಂಗಾಲಾಗುವಂತೆ ಮಾಡಿದ ಈ ತಂಡದ ಆಟವನ್ನು ಮೆಚ್ಚಿಗೊಳ್ಳದೆ ಇರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ಕ್ರಿಕೆಟ್ ಪ್ರೇಮಿಗಳು.
ಭಾರತ-ಅಫ್ಘಾನಿಸ್ತಾನ ತಂಡಗಳ ನಡುವೆ ದುಬೈನಲ್ಲಿ ಮಂಗಳವಾರ ನಡೆದ ಪಂದ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಕೆಲವು ಅಭಿಪ್ರಾಯಗಳು ಇಲ್ಲಿವೆ.
ಈ ತಂಡದಲ್ಲಿ ವಿಶೇಷವಿದೆ
ಅಫ್ಘಾನಿಸ್ತಾನ ತಂಡಕ್ಕೆ ಇದು ವಿಶೇಷ ದಿನ. ಭಾರತದ ವಿರುದ್ಧ ಟೈ ಸಾಧಿಸಿರುವುದು ಸ್ಮರಣಾರ್ಹ ಸಾಧನೆ. ಪ್ರತಿ ಆಫ್ಘನ್ ಆಟಗಾರನೂ ತನ್ನ ಹೋರಾಟ ಮತ್ತು ಪ್ರದರ್ಶನದ ಬಗ್ಗೆ ಹೆಮ್ಮೆಪಟ್ಟುಕೊಳ್ಳಬಹುದು. ಅಫ್ಘಾನಿಸ್ತಾನದ ಈ ತಂಡದಲ್ಲಿ ಏನೂ ವಿಶೇಷತೆ ಇದೆ. ಏಷ್ಯಾ ಕಪ್‌ನಲ್ಲಿ ಅತ್ಯಂತ ಗಮನಾರ್ಹ ಆಟ ಪ್ರದರ್ಶಿಸಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆ(ಕ)ದ್ದ ಪಾಕ್ ಪೋರಿ
ಅರ್ಹ ಟೈ
ಇದಕ್ಕಿಂತ ಉತ್ತಮ ಪಂದ್ಯವನ್ನು ಬಯಸಲು ಸಾಧ್ಯವಿಲ್ಲ. ಜಡೇಜಾ ಸಾಧ್ಯವಾದಷ್ಟೂ ಹತ್ತಿರ ಕೊಂಡೊಯ್ದರು. ಆದರೆ, ನ್ಯಾಯಯುತವಾಗಿ, ಅಫ್ಘಾನಿಸ್ತಾನಕ್ಕೆ ಅರ್ಹವಾದ ಟೈ ಇದು ಎಂದು ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಟ್ವೀಟಿಸಿದ್ದಾರೆ.
ಪ್ರಬಲಗೊಳ್ಳುತ್ತಿರುವ ತಂಡ
ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯಂತ ತ್ವರಿತವಾಗಿ ಬಲಗೊಳ್ಳುತ್ತಿರುವ ದೇಶವೆಂದರೆ ಅಫ್ಘಾನಿಸ್ತಾನ. ಭಾರತದೊಂದಿಗೆ ಟೈ ಸಾಧಿಸಿದೆ. ಹತ್ತು ವರ್ಷಗಳ ಹಿಂದೆ ಈ ಅಫ್ಘಾನಿಸ್ತಾನ ತಂಡ ಜಪಾನ್ ಮತ್ತು ಬೊಟ್ಸ್ವಾನಾ ಜತೆಗೆ ಆಡುತ್ತಿತ್ತು ಎಂದು ಅಂತಾರಾಷ್ಟ್ರೀಯ ಕ್ರೀಡಾ ಪತ್ರಕರ್ತ ಟಿಮ್ ಟ್ವೀಟ್ ಮಾಡಿದ್ದಾರೆ.
ಟೀಮ್ ಆಫ್ ದಿ ಸೀರೀಸ್
ಏಷ್ಯಾಕಪ್ಪನ್ನು ಯಾರಾದರೂ ಗೆಲ್ಲಲಿ. ಆದರೆ ಇಡೀ ಟೂರ್ನಿಯ ಹೈಲೈಟ್ ಆಫ್ಘನಿಸ್ತಾನ ತಂಡ. ಐಸಿಸಿ ತುರ್ತಾಗಿ 'ಟೀಮ್ ಆಫ್ ದಿ ಸೀರೀಸ್' ಎಂಬ ಹೊಸ ಪ್ರಶಸ್ತಿಯನ್ನು ಆಫ್ಘನ್ ತಂಡದ ಹೆಸರಿಗೆ ಘೋಷಿಸಬೇಕು.
ಎರಡನೆಯ ಅತ್ಯುತ್ತಮ ತಂಡ
ಮತ್ತೊಂದು ಯೋಚನೆ ಇಲ್ಲದೆ ಹೇಳುವುದಾದರೆ ಈ ಏಷ್ಯಾ ಕಪ್‌ನಲ್ಲಿ ಭಾರತದ ಬಳಿಕ ಅಫ್ಘಾನಿಸ್ತಾನ ಎರಡನೆಯ ಅತ್ಯುತ್ತಮ ತಂಡ. ರಶೀದ್ ಖಾನ್ ಮತ್ತು ತಂಡದ ನಿರ್ಗಮನ ಇರಬಹುದು. ಆದರೆ, ಅವರು ಈಗಾಗಲೇ ಅದನ್ನು ಗೆದ್ದಿದ್ದಾರೆ ಎಂದು ಸಲ್ಮಾನ್ ಅಬ್ದಿ ಹೇಳಿದ್ದಾರೆ.
ಅಫ್ಘಾನಿಸ್ತಾನದ್ದೇ ಗೆಲುವು
ಪಂದ್ಯದ ಫಲಿತಾಂಶ ಟೈ ಆಗಿರಬಹುದು. ಆದರೆ, ಇದರಲ್ಲಿ ಅಫ್ಘಾನಿಸ್ತಾವೇ ಗೆದ್ದಂತೆ. ಎಲ್ಲ ವಿಭಾಗಗಳಲ್ಲಿಯೂ ಅವರು ಪ್ರಾಬಲ್ಯ ಮೆರೆದರು. ಈ ಪಂದ್ಯದ ನೈತಿಕ ಗೆಲುವು ಅಫ್ಘಾನಿಸ್ತಾನದ್ದೇ ಎಂದು ಗೋಪಿ ಪ್ರೀತಂ ಎಂಬುವವರು ಮೆಚ್ಚುಗೆ ಸೂಚಿಸಿದ್ದಾರೆ.
ಭಾರತ-ಪಾಕ್ ಪಂದ್ಯಕ್ಕಿಂತ...
ಭಾರತ-ಅಫ್ಘಾನಿಸ್ತಾನ ಪಂದ್ಯವು, ಭಾರತ-ಪಾಕಿಸ್ತಾನ ಪಂದ್ಯಗಳಿಗಿಂತಲೂ ಹೆಚ್ಚು ಆಸಕ್ತಿಕರ ಮತ್ತು ಉದ್ವೇಗಕಾರಿಯಾಗಿತ್ತು. ಇದು ಕ್ರಿಕೆಟ್‌ನ ಹೊಸ ಮಜಲು. ಪಾಕಿಸ್ತಾನದ ಹೊಸ ಹಿನ್ನಡೆ ಎಂದು ನಟ, ಸಂಸದ ಪರೇಶ್ ರಾವಲ್ ಅವರ ಹೆಸರಿನ ನಕಲಿ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಅಲ್ಲಿ ನಿರೀಕ್ಷಿಸಿದ್ದು, ಇಲ್ಲಿ ಸಿಕ್ಕಿತು
ಭಾರತ vs ಪಾಕಿಸ್ತಾನ ಪಂದ್ಯಗಳಲ್ಲಿ ನಾವು ನಿರೀಕ್ಷಿಸಿದ್ದು, ಭಾರತ vs ಅಫ್ಘಾನಿಸ್ತಾನ ಪಂದ್ಯದಲ್ಲಿ ಸಿಕ್ಕಿತು. ಎಂತಹ ಮಹಾನ್ ಹೋರಾಟಗಾರರ ಆಫ್ಘನ್ ತಂಡವಿದು ಎಂದು ರಕ್ಷಿತ್ ಪೊನ್ನತ್‌ಪುರ್ ಟ್ವೀಟ್ ಮಾಡಿದ್ದಾರೆ.
ಭಾರತ-ಅಫ್ಘಾನಿಸ್ತಾನ ಗೆಳೆತನ
ಭಾರತದೊಂದಿಗೆ ಥ್ರಿಲ್ಲಿಂಗ್ ಟೈಯನ್ನು ಅಫ್ಘಾನಿಸ್ತಾನ ಪಡೆದುಕೊಂಡಿದೆ ಎಂದು ಟ್ವೀಟ್ ಮಾಡಿರುವ ದರ್ಯೋಶ್ ಮಜಿದಿ, ಭಾರತ-ಅಫ್ಘಾನಿಸ್ತಾನದ ಗೆಳೆತನವನ್ನು ಸೂಚಿಸುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
ಆಫ್ಘನ್ ಆಟಗಾರ ಶೆಹಜಾದ್ ಅವರ ಶೂ ಲೇಸ್‌ಅನ್ನು ಕಾರ್ತಿಕ್ ಕಟ್ಟುತ್ತಿರುವುದು, ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ಕಣ್ಣಿಗೆ ಹೋಗಿದ್ದ ದೂಳನ್ನು ಧೋನಿ ತೆಗೆಯುತ್ತಿರುವುದು, ಪ್ರಧಾನಿ ನರೇಂದ್ರ ಮೋದಿ ಮತ್ತು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಸ್ನೇಹತ್ವದ ಸಂಕೇತ ತೋರಿಸುತ್ತಿರುವ ಚಿತ್ರಗಳನ್ನು ಸೇರಿಸಿರುವ ಅವರು, ಫಲಿತಾಂಶ 'ಟೈ' (ಗೆಳೆತನ) ಎಂಬ ಅರ್ಥ ಬರುವಂತೆ ಟ್ವೀಟ್ ಮಾಡಿದ್ದಾರೆ.
ಜಡೇಜಾ ಕರಾಮತ್ತು
ಸಾಮಾನ್ಯ ಆಟಗಾರರು ಪಂದ್ಯವನ್ನು ಫಿನಿಶ್ ಮಾಡಿದಾಗ ಒಂದೇ ಒಂದು ತಂಡ ಸಂಭ್ರಮಿಸುತ್ತದೆ. ಆದರೆ, ಸರ್ ರವೀಂದ್ರ ಜಡೇಜಾ ಪಂದ್ಯ ಮುಗಿಸಿದಾಗ ಎರಡೂ ತಂಡಗಳು ಖುಷಿಯಾಗುತ್ತವೆ ಎಂದು ಸರ್ ರವೀಂದ್ರ ಜಡೇಜಾ ಪರೋಡಿ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಭಾರತ ಗೆಲ್ಲಲಿ
ಈ ಪಂದ್ಯದ ಚಿತ್ರ ಇದು ಎಂದು ಧೋನಿ ಆಫ್ಘನ್ ಬ್ಯಾಟ್ಸ್‌ಮನ್‌ನ ಕಣ್ಣಿನ ದೂಳು ತೆಗೆಯುತ್ತಿರುವ ಚಿತ್ರವನ್ನು ಪ್ರಕಟಿಸಿರುವ ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿ ಉಮುರಾ, ಆಫ್ಘನ್ನನಾಗಿ ನನಗೆ ಭಾರತ ಅಥವಾ ಅಫ್ಘಾನಿಸ್ತಾನ ಗೆಲ್ಲುವುದು ಮುಖ್ಯವೇ ಅಲ್ಲ. ನಾನು ಯಾವಾಗಲೂ ಭಾರತದ ಅಭಿಮಾನಿ. ಭಾರತ ಏಷ್ಯಾ ಕಪ್ ಗೆಲ್ಲತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
