Asia Cup 2022: ಬಾಂಗ್ಲಾ ವಿರುದ್ಧವೂ ಗೆದ್ದ ಅಫ್ಘಾನ್; ಸೂಪರ್ 4 ಪ್ರವೇಶಿಸಿದ ಮೊದಲ ತಂಡ!

ಇಂದು ( ಆಗಸ್ಟ್ 30 ) ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಆಫ್ಘಾನಿಸ್ತಾನ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವನ್ನು ಕಂಡು ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವುದರ ಮೂಲಕ ಇದೀಗ ಸೂಪರ್ 4 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.
ಈ ಬಾರಿ ಪೈಪೋಟಿಗೆ ಇಳಿದಿರುವ 6 ತಂಡಗಳ ಪೈಕಿ ಸೂಪರ್ 4 ಸುತ್ತನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದ ಪ್ರಥಮ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಫ್ಘಾನಿಸ್ತಾನ ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಾನು ಈ ದಾಖಲೆಯನ್ನು ಬರೆದು ಇತಿಹಾಸ ನಿರ್ಮಿಸಿದೆ. ಹೌದು, ಅಫ್ಘಾನಿಸ್ತಾನ ಹಿಂದೆಂದೂ ಸೂಪರ್ 4 ಸುತ್ತಿಗೆ ಉಳಿದ ಎಲ್ಲಾ ತಂಡಗಳಿಗೂ ಮುನ್ನ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಈ ಬಾರಿ ಈ ಸಾಧನೆಯನ್ನು ಮಾಡಿ ಇತಿಹಾಸ ಬರೆದಿದೆ.
ಇನ್ನು ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡರು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 127 ರನ್ ಕಲೆಹಾಕಿ ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ 128 ರನ್‌ಗಳ ಗುರಿಯನ್ನು ನೀಡಿತು. ಇನ್ನು ಈ ಗುರಿಯನ್ನು ಬೆನ್ನತ್ತಲು ಯತ್ನಿಸಿ ಆರಂಭದಲ್ಲಿ ತಿಣುಕಾಡಿದ ಅಫ್ಘಾನಿಸ್ತಾನ ಅಂತಿಮವಾಗಿ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಚಚ್ಚುವುದರ ಮೂಲಕ ಗೆಲುವಿನ ಕೇಕೆ ಹಾಕಿದೆ.

ಬಾಂಗ್ಲಾದೇಶ ಇನ್ನಿಂಗ್ಸ್
ಬಾಂಗ್ಲಾದೇಶದ ಪರ ಮಹಮ್ಮದ್ ನಯೀಮ್ 6, ಅನಮುಲ್ ಹಕ್ 5, ನಾಯಕ ಶಕಿಬ್ ಅಲ್ ಹಸನ್ 11, ಮುಶ್ಫಿಕರ್ ರಹೀಮ್ 1, ಅಫೀಫ್ ಹುಸೇನ್ 12, ಮಹ್ಮದುಲ್ಲಾ 25, ಮೆಹದಿ ಹಸನ್ 14 ರನ್ ಗಳಿಸಿದರು. ಇನ್ನುಳಿದಂತೆ ಸೈಫುದ್ದೀನ್ ಯಾವುದೇ ರನ್ ಗಳಿಸದೆ ಅಜೇಯರಾಗಿ ಉಳಿದರೆ, ತಂಡಕ್ಕೆ ಆಪದ್ಭಾಂಧವನ ಆಟವನ್ನಾಡಿದ ಮೊಸದೆಕ್ ಹೊಸೇನ್ 31 ಎಸೆತಗಳಲ್ಲಿ ಅಜೇಯ 48 ರನ್ ಬಾರಿಸಿ ತಂಡ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಗಿ ಅನುಭವಿಸುತ್ತಿದ್ದ ಮುಖಭಂಗವನ್ನು ತಪ್ಪಿಸಿದ್ದರು.
ಅಫ್ಘಾನಿಸ್ತಾನ ತಂಡದ ಬೌಲರ್‌ಗಳಾದ ರಶೀದ್ ಖಾನ್ ಹಾಗೂ ಮುಜೀಬ್ ಉರ್ ರಹಮಾನ್ ತಲಾ 3 ವಿಕೆಟ್ ಪಡೆಯುವುದರ ಮೂಲಕ ಬಾಂಗ್ಲಾದೇಶ ಅಲ್ಪ ಮೊತ್ತಕ್ಕೆ ತನ್ನ ಇನ್ನಿಂಗ್ಸ್ ಅಂತ್ಯಗೊಳಿಸುವಂತೆ ಮಾಡಿದರು.

ಅಫ್ಘಾನಿಸ್ತಾನ ಇನ್ನಿಂಗ್ಸ್
ಅಫ್ಘಾನಿಸ್ತಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಹಜರತ್ ಉಲ್ಲಾ ಝಾಜೈ 23 ರನ್ ಕಲೆಹಾಕಿದರೆ, ರಹ್ಮನುಲ್ಲ ಗುರ್ಬಜ್ 11 ರನ್ ಕಲೆ ಹಾಕಿದರು ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಮೊಹಮ್ಮದ್ ನಬಿ 8 ರನ್ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ನಾಲ್ಕನೇ ವಿಕೆಟ್‌ಗೆ ಜತೆಯಾದ ಇಬ್ರಾಹಿಂ ಜದ್ರಾನ್ ಹಾಗೂ ನಸೀಬುಲ್ಲಾ 69 ರನ್‌ಗಳ ಅಮೋಘ ಜತೆಯಾಟವಾಡಿ ತಂಡಕ್ಕೆ ಗೆಲುವು ತಂದಿತ್ತರು. ಜವಾಬ್ದಾರಿಯುತ ಆಟವನ್ನು ಆಡಿದ ಇಬ್ರಾಹಿಂ ಜದ್ರಾನ್ 41 ಎಸೆತಗಳಲ್ಲಿ ಅಜೇಯ 42 ರನ್ ಕಲೆಹಾಕಿದರೆ ಅಂತಿಮ ಹಂತದಲ್ಲಿ ಅಬ್ಬರಿಸಿದ ನಜೀಬುಲ್ಲಾ 17 ಎಸೆತಗಳಲ್ಲಿ 6 ಸಿಕ್ಸರ್ ಸಹಿತ ಅಜೇಯ 43 ರನ್ ಚಚ್ಚಿದರು.
ಅಂತಿಮವಾಗಿ 30 ಎಸೆತಗಳಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು 51 ರನ್ ಬೇಕಿದ್ದಾಗ ಹದಿನಾರನೇ ಓವರ್‌ನಲ್ಲಿ ತನ್ನ ಮೊದಲನೇ ಸಿಕ್ಸರ್ ಸಿಡಿಸಿದ ನಜಿಬುಲ್ಲಾ, 17ನೇ ಓವರ್‌ನಲ್ಲಿ 2 ಸಿಕ್ಸರ್, 18ನೇ ಓವರ್‌ನಲ್ಲಿ 2 ಸಿಕ್ಸರ್ ಮತ್ತು 19ನೇ ಓವರ್‌ನಲ್ಲಿ ಫಿನಿಶಿಂಗ್ ಸಿಕ್ಸರ್ ಬಾರಿಸಿ ಅಬ್ಬರಿಸಿ ಬಾಂಗ್ಲಾದೇಶದ ಗೆಲುವಿನ ಕನಸಿನ ಕನ್ನಡಿಯನ್ನು ಒಡೆದು ಹಾಕಿದರು.

ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಆಡುವ ಬಳಗಗಳು
ಬಾಂಗ್ಲಾದೇಶ ಆಡುವ ಬಳಗ: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮಹಮ್ಮದುಲ್ಲಾ, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್
ಬೆಂಚ್‌ಸಬ್ಬೀರ್ ರಹಮಾನ್, ಪರ್ಸಬ್ಬೀರ್ ರಹಮಾನ್, ನಸ್ಬಾರ್ ರಹಮ್ಮದ್, ಹೊಸೈನ್ ಎಮನ್
ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (wk), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ಮೊಹಮ್ಮದ್ ನಬಿ (c), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಖಿ,
ಬೆಂಚ್: ಶಮಿಉಲ್ಲಾ ಶಿನ್ವಾರಿ, ಹಸ್ಮತ್ ಉಲ್ಲಾ ಶಾಹಿದಿ,ಅಫ್ಜರ್ ಝಝೈ, ಫರೀದ್ ಅಹ್ಮದ್ ಮಲಿಕ್, ಉಸ್ಮಾನ್ ಘನಿ, ನೂರ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications