
ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ದುಕೊಂಡ ಬಳಿಕ, ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅಬ್ಬರದ ಓಪನಿಂಗ್ ಜೊತೆಗೆ ಮೊದಲ ಹತ್ತು ಓವರ್‌ಗಳಲ್ಲಿ ಭರ್ಜರಿಯಾಗಿ ರನ್ ಕಲೆಹಾಕಿತು.
ಪಿಚ್ ಪರಿಸ್ಥಿತಿ, ತೇವಾಂಶ ಮತ್ತು ಇತರ ಕಾರಣಗಳಿಂದ ಬೌಲಿಂಗ್ ಮಾಡಲು ಆಯ್ಕೆ ಮಾಡುತ್ತಿದ್ದೇನೆ ಎಂದು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹೇಳಿದರು. ಆದ್ರೆ ಪಿಚ್‌ನ ಅಡ್ವಾಂಟೇಜ್ ತೆಗೆದುಕೊಂಡ ರೋಹಿತ್ ಪಡೆ 10.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 100ರನ್ ಕಲೆಹಾಕಿತು.
ಪಂದ್ಯ ಶುರುವಿಗೂ ಮುನ್ನ ಟಾಸ್ ವೇಳೆ ವಿಚಿತ್ರ ಘಟನೆ ನಡೆದಿದೆ. ನಿರೂಪಕರಾಗಿ ಕಾರ್ಯನಿರ್ವಹಿಸಿದ ರವಿಶಾಸ್ತ್ರಿ ಟಾಸ್ ವೇಳೆ ಎಡವಟ್ಟು ಮಾಡಿದರು. ರೋಹಿತ್ ಟಾಸ್ ನಾಣ್ಯವನ್ನು ಸ್ವೀಕರಿಸಿದರು ಮತ್ತು ನಾಣ್ಯವನ್ನು ಗಾಳಿಯಲ್ಲಿ ಎಸೆದರು. ಬಾಬರ್ ಅಜಮ್ ಅವರು ತಮ್ಮ ಆಯ್ಕೆಯನ್ನು ಟೈಲ್ಸ್ ಎಂದು ಹೇಳಿದರು. ಆದರೆ ರವಿಶಾಸ್ತ್ರಿ ತಪ್ಪು ಮಾಡಿದ್ದು, ಹೆಡ್ಸ್ ಈಸ್ ಕಾಲ್ ಎಂದಿದ್ದಾರೆ.
ಆದರೆ ಟಾಸ್ ಟೈಲ್ಸ್ ಆಗಿ ಹೊರಬಿದ್ದಿದ್ದರಿಂದ ನಿಜವಾದ ಟಾಸ್ ಬಗ್ಗೆ ಗೊಂದಲ ಉಂಟಾಯಿತು. ಏನಿದು ಟೈಲ್ಸಾ ಹೆಡ್ಸಾ ಎಂದು ಪ್ರೇಕ್ಷಕರು ಕೆಲಕಾಲ ಗೊಂದಲಕ್ಕೀಡಾಗಿದ್ದರು. ಮೈಕ್ ಇಲ್ಲದೆ ಟಾಸ್ ಕುರಿತು ಬಾಬರ್ ಆಯ್ಕೆಯು ಕೇಳಿಸಲಿಲ್ಲ. ರವಿಶಾಸ್ತ್ರಿ ಮೈಕ್ ನಲ್ಲಿ ತಮ್ಮದೇ ಶೈಲಿಯಲ್ಲಿ ಗಟ್ಟಿಯಾಗಿ ಹೇಳುತ್ತಿದ್ದಂತೆ ಹೆಡ್ಸ್ ಈಸ್ ಎಂಬ ಕೂಗು ಜೋರಾಗಿ ಕೇಳಿಬಂತು.
ಕೊನೆಗೆ ಮ್ಯಾಚ್ ರೆಫರಿ ತಪ್ಪನ್ನ ಅರಿತಿದ್ದರಿಂದ ಬಾಬರ್ ಅಜಮ್ ಟಾಸ್ ಗೆದ್ದಿರುವುದಾಗಿ ಘೋಷಿಸಿದರು ಮತ್ತು ಅವರು ಬೌಲಿಂಗ್ ಆಯ್ಕೆ ಮಾಡಿದರು. ಆದರೆ ಈ ವೀಡಿಯೋದಲ್ಲಿ ರವಿಶಾಸ್ತ್ರಿ ಮಾಡಿರುವ ಎಡವಟ್ಟು ಸಾಕಷ್ಟು ಟ್ರೋಲ್ ಆಗಿದ್ದು, ಈ ವೀಡಿಯೊ ಟ್ರೆಂಡಿಂಗ್ ಆಗಿದೆ.
ಭಾರತ ಮತ್ತು ಪಾಕಿಸ್ತಾನ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಂದು ಬದಲಾವಣೆಯಾಗಿದ್ದು, ಟೀಂ ಇಂಡಿಯಾದಲ್ಲಿ ಮೂವರು ಆಟಗಾರರ ಬದಲಾವಣೆ ಮಾಡಿದೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.
ಉಭಯ ತಂಡಗಳ ಪ್ಲೇಯಿಂಗ್ 11
ಟೀಂ ಇಂಡಿಯಾ ಪ್ಲೇಯಿಂಗ್ 11: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಪಾಕಿಸ್ತಾನ ಪ್ಲೇಯಿಂಗ್ 11: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ಮೊಹಮ್ಮದ್ ಹಸ್ನೇನ್, ನಸೀಮ್ ಶಾ