Asia Cup 2022: 13 ಓವರ್‌ಗೆ 94 ರನ್ ಗಳಿಸಿದ್ದ ಭಾರತ 20 ಓವರ್‌ಗೆ 192; ಇದು ಸೂರ್ಯಕುಮಾರ್ ಪವರ್!

ಇಂದು ( ಆಗಸ್ಟ್ 31 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಹಾಂಗ್ ಕಾಂಗ್ ತಂಡಗಳ ನಡುವಿನ ಏಷ್ಯಾಕಪ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿ ಎದುರಾಳಿ ಹಾಂಗ್ ಕಾಂಗ್ ತಂಡಕ್ಕೆ ಗೆಲ್ಲಲು 193 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.
ಟೀಮ್ ಇಂಡಿಯಾ ಪರ ಬ್ಯಾಟ್ ಬೀಸಿದ ನಾಲ್ವರ ಪೈಕಿ ರೋಹಿತ್ ಶರ್ಮ 21 ರನ್ ಕಲೆಹಾಕಿದರೆ, ಕೆಎಲ್ ರಾಹುಲ್ 36 ರನ್ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಅಜೇಯ 59 ರನ್ ಬಾರಿಸಿದರು ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬೌಂಡರಿ ಮೇಲೆ ಬೌಂಡರಿ ಚಚ್ಚಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ ಅಜೇಯ 68 ರನ್ ಬಾರಿಸಿದರು.
ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ವಿಫಲರಾದರೆ, ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿದರಾದರೂ ಸಹ ಟಿ ಟ್ವೆಂಟಿ ಪಂದ್ಯಕ್ಕೆ ಬೇಕಾದ ವೇಗದ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿಯೇ ಟೀಮ್ ಇಂಡಿಯಾ ತನ್ನ ಎರಡನೇ ವಿಕೆಟ್ ( ಕೆಎಲ್ ರಾಹುಲ್ ) ಬೀಳುವ ಹಂತಕ್ಕೆ ಸಾಮಾನ್ಯ ರನ್ ಕಲೆಹಾಕಿ ಹಾಂಕಾಂಗ್ ತಂಡಕ್ಕೆ ಸಾಮಾನ್ಯ ಗುರಿಯನ್ನು ನೀಡುವತ್ತ ಹೆಜ್ಜೆ ಇಟ್ಟಿತ್ತು. ಆದರೆ ಕೆಎಲ್ ರಾಹುಲ್ ಔಟ್ ಆದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಅಬ್ಬರಿಸಿ ಬೊಬ್ಬಿರಿದ ಕಾರಣ ಪಂದ್ಯದ ಗತಿಯೇ ಬದಲಾಗಿ ಹೋಯಿತು. ಟೀಮ್ ಇಂಡಿಯಾ ಹಾಂಕಾಂಗ್ ತಂಡಕ್ಕೆ ಬೃಹತ್ ಮೊತ್ತವನ್ನು ಗುರಿಯನ್ನಾಗಿ ನೀಡಿತು.

13 ಓವರ್‌ಗೆ 94, 20 ಓವರ್‌ಗೆ 192!
ಟೀಮ್ ಇಂಡಿಯಾ ತನ್ನ ಎರಡನೇ ವಿಕೆಟ್ ( ಕೆಎಲ್ ರಾಹುಲ್ ) ಕಳೆದುಕೊಂಡಾಗ 13 ಓವರ್‌ಗಳಲ್ಲಿ 94 ರನ್ ಗಳಿಸಿತ್ತು. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 33 ರನ್ ಗಳಿಸಿ ಕಣದಲ್ಲಿದ್ದರು. ಆ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿದರು. 14ನೇ ಓವರ್‌ನಲ್ಲೇ 2 ಭರ್ಜರಿ ಬೌಂಡರಿ ಬಾರಿಸುವ ಮೂಲಕ ಗುಡುಗಿದ ಸೂರ್ಯಕುಮಾರ್ ಯಾದವ್ ನಂತರ ಬೌಂಡರಿ ಮತ್ತು ಸಿಕ್ಸರ್ ಸುರಿಮಳೆ ಗೈದರು. ಅಂತಿಮ ಓವರ್ ಒಂದರಲ್ಲಿಯೇ 4 ಸಿಕ್ಸರ್ ಸಿಡಿಸಿದ ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಒಟ್ಟಾರೆಯಾಗಿ 6 ಫೋರ್ ಮತ್ತು 6 ಸಿಕ್ಸರ್ ಬಾರಿಸಿದ ಸೂರ್ಯಕುಮಾರ್ ಯಾದವ್ ಕಣಕ್ಕಿಳಿದ ನಂತರ 13 ಓವರ್‌ಗೆ 94 ರನ್ ಕಲೆಹಾಕಿದ್ದ ಟೀಂ ಇಂಡಿಯಾ 20 ಓವರ್‌ಗೆ 192 ರನ್ ಮುಟ್ಟಿತ್ತು.

ಅಂತಿಮ ಓವರ್‌ನಲ್ಲೇ 26 ರನ್!
ಹಾಂಕಾಂಗ್ ತಂಡದ ಹರೂನ್ ಅರ್ಷದ್ ಎಸೆದ ಅಂತಿಮ ಓವರ್‌ನ ಎಲ್ಲಾ ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ ಮೊದಲ 3 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು ಹಾಗೂ ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬಾರಿಸದ ಸೂರ್ಯಕುಮಾರ್ ಯಾದವ್ ಐದನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಹಾಗೂ ಆರನೇ ಎಸೆತದಲ್ಲಿ 2 ರನ್ ಬಾರಿಸಿದರು. ಈ ಮೂಲಕ ಕೊನೆಯ ಓವರ್ ಒಂದರಲ್ಲಿಯೇ ತಂಡಕ್ಕೆ 26 ರನ್ ಸೇರ್ಪಡೆಗೊಂಡಿತು. ಹೀಗೆ ಸೂರ್ಯಕುಮಾರ್ ಯಾದವ್ ಅಬ್ಬರದ ಸಹಾಯದಿಂದ ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆಹಾಕಿತು.

ಆಡುವ ಬಳಗಗಳು
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್ ಮತ್ತು ಅರ್ಷದೀಪ್ ಸಿಂಗ್
ಬೆಂಚ್ ದೀಪಕ್ ಹೂಡಾ, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್, ಹಾರ್ದಿಕ್ ಪಾಂಡ್ಯ
ಹಾಂಗ್ ಕಾಂಗ್ ಆಡುವ ಬಳಗ: ನಿಜಾಕತ್ ಖಾನ್ ( ನಾಯಕ ) ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಷಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಘಜನ್ಫರ್
ಬೆಂಚ್ ಅತೀಕ್ ಇಕ್ಬಾಲ್, ಮೊಹಮ್ಮದ್ ಹುಹ್ಸಾಯ್ ಅಫ್ತಾನಾ ವಹೀದ್, ರಾವ್, ಅಹಾನ್ ತ್ರಿವೇದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications