Asia Cup 2022: ಭಾರತ ಮತ್ತು ಪಾಕಿಸ್ತಾನ ನಡುವಿನ 14 ಏಷ್ಯಾಕಪ್ ಪಂದ್ಯಗಳಲ್ಲಿ ಹೆಚ್ಚು ಗೆದ್ದವರು ಯಾರು?

ಇದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಏರ್ಪಡಲಿದೆ. ಇನ್ನು ಏಷ್ಯಾ ಕ್ರಿಕೆಟ್ ತಂಡಗಳ ಅಭಿಮಾನಿಗಳಿಗೆ ಈ ಮನರಂಜನೆ ಈ ವರ್ಷ 2 ಬಾರಿ ಲಭಿಸಲಿದೆ ಎಂದೇ ಹೇಳಬಹುದು. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುವ ಮುನ್ನವೇ ಮಿನಿ ವಿಶ್ವಕಪ್ ಆದ ಏಷ್ಯಾಕಪ್ ಟೂರ್ನಿ ನಡೆಯಲಿದ್ದು ಏಷ್ಯಾ ಕ್ರಿಕೆಟ್ ಪ್ರೇಮಿಗಳಿಗೆ ಡಬಲ್ ಧಮಾಕಾ ದೊರೆಯಲಿದೆ.
ಇದೇ ಆಗಸ್ಟ್ 27ರಂದು ಈ ಬಾರಿಯ ಏಷ್ಯಾಕಪ್ ಟೂರ್ನಿಯ ಪ್ರಥಮ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ನಡೆಯಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಈ ಟೂರ್ನಿ ಅಲ್ಲಿನ ಆರ್ಥಿಕ ಪರಿಸ್ಥಿತಿ ಇಕ್ಕಟ್ಟಿಗೆ ಸಿಲುಕಿರುವ ಕಾರಣ ಟೂರ್ನಿಯನ್ನು ಲಂಕಾದಿಂದ ಯುಎಇಗೆ ಸ್ಥಳಾಂತರಿಸಲಾಗಿದೆ.
ಏಷ್ಯಾಕಪ್ ಟೂರ್ನಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಏರ್ಪಡಲಿದೆ ಎಂಬ ಕಾರಣಕ್ಕಾಗಿ ಹೆಚ್ಚಿನ ಸದ್ದು ಮಾಡುತ್ತದೆ ಎಂದೇ ಹೇಳಬಹುದಾಗಿದ್ದು, ಸದ್ಯ ಈ ಬಾರಿಯ ಟೂರ್ನಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. ಆಗಸ್ಟ್ 28ರ ಭಾನುವಾರದಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಗ್ರೂಪ್ ಹಂತದ ಪಂದ್ಯ ನಡೆಯಲಿದೆ. ಹೀಗೆ ಇತ್ತಂಡಗಳ ನಡುವೆ ಏಷ್ಯಾಕಪ್ ಟೂರ್ನಿಯಲ್ಲಿ ಯಾವ ದಿನದಂದು ಪಂದ್ಯ ನಡೆಯಲಿದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಎರಡೂ ತಂಡಗಳ ನಡುವಿನ ಬಲಾಬಲ ಮತ್ತು ಮುಖಾಮುಖಿ ಪಂದ್ಯಗಳ ಫಲಿತಾಂಶದ ಕುರಿತು ಚರ್ಚೆಗಳು ಶುರುವಾಗಿವೆ. ಉಭಯ ತಂಡಗಳು ಏಷ್ಯಾ ಕಪ್ ಇತಿಹಾಸದಲ್ಲಿ ಇಲ್ಲಿಯವರೆಗೂ 14 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಯಾವ ತಂಡ ಎಷ್ಟು ಪಂದ್ಯಗಳನ್ನು ಗೆದ್ದಿದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಏಷ್ಯಾಕಪ್ ಮುಖಾಮುಖಿ
ಏಷ್ಯಾಕಪ್ ಟೂರ್ನಿ 1984ರಿಂದ ನಡೆಯುತ್ತಿದ್ದು, ಅಂತಿಮವಾಗಿ 2017ರಲ್ಲಿ ಟೂರ್ನಿ ಜರುಗಿತ್ತು. ಈ ಅವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 14 ಏಷ್ಯಾಕಪ್ ಟೂರ್ನಿಯ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ 8 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದ್ದರೆ, ಪಾಕಿಸ್ತಾನ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿದೆ. ಈ ಮೂಲಕ ಉಭಯ ತಂಡಗಳ ನಡುವಿನ ಏಷ್ಯಾಕಪ್ ಮುಖಾಮುಖಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ.

ಒಟ್ಟಾರೆ ಮುಖಾಮುಖಿ
ಟಿ ಟ್ವೆಂಟಿ: ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 9 ಟಿ ಟ್ವೆಂಟಿ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ಭಾರತ 6 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪಾಕಿಸ್ತಾನ 2 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿದೆ. ಈ ಮೂಲಕ ಇತ್ತಂಡಗಳ ನಡುವಿನ ಟಿ ಟ್ವೆಂಟಿ ಮುಖಾಮುಖಿಯಲ್ಲಿ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ.
ಏಕದಿನ: ಉಭಯ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 132 ಏಕದಿನ ಪಂದ್ಯಗಳು ಜರುಗಿದ್ದು, ಈ ಪೈಕಿ ಭಾರತ 55 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪಾಕಿಸ್ತಾನ 73 ಪಂದ್ಯಗಳಲ್ಲಿ ಗೆಲುವು ಕಂಡಿದೆ ಹಾಗೂ 4 ಪಂದ್ಯಗಳು ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿವೆ. ಈ ಮೂಲಕ ಇತ್ತಂಡಗಳ ನಡುವಿನ ಏಕದಿನ ಮುಖಾಮುಖಿಯಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿದೆ.
ಟೆಸ್ಟ್: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಲ್ಲಿಯವರೆಗೆ ಒಟ್ಟು 59 ಟೆಸ್ಟ್ ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ 9 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕಿಸ್ತಾನ 12 ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಉಳಿದ 38 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಐಸಿಸಿ ಟೂರ್ನಮೆಂಟ್ ಮುಖಾಮುಖಿ
ಟಿ 20 ವಿಶ್ವಕಪ್: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 6 ಐಸಿಸಿ ಟ್ವೆಂಟಿ ವಿಶ್ವಕಪ್ ಪಂದ್ಯಗಳು ಜರುಗಿದ್ದು ಈ ಪೈಕಿ ಭಾರತ 4 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪಾಕಿಸ್ತಾನ ಕೇವಲ 1 ಪಂದ್ಯದಲ್ಲಿ ಗೆದ್ದಿದೆ ಹಾಗೂ ಉಳಿದೊಂದು ಪಂದ್ಯ ಟೈ ಆಗಿದೆ.
ಏಕದಿನ ವಿಶ್ವಕಪ್: ಭಾರತ ಮತ್ತು ಪಾಕಿಸ್ತಾನ ತಂಡಗಳು ಇಲ್ಲಿಯವರೆಗೂ ಒಟ್ಟು 7 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಎಲ್ಲಾ ಪಂದ್ಯಗಳಲ್ಲಿಯೂ ಭಾರತ ಜಯ ಸಾಧಿಸಿ ಪಾಕಿಸ್ತಾನದ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications