Asia Cup 2022: ಹಾಂಕಾಂಗ್ ಕೇವಲ 38 ರನ್‌ಗೆ ಆಲ್ಔಟ್; ಸೂಪರ್ 4ಗೆ ಪಾಕಿಸ್ತಾನ ಎಂಟ್ರಿ!

ಇಂದು ( ಸೆಪ್ಟೆಂಬರ್ 2 ) ಶಾರ್ಜಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನ 155 ರನ್‌ಗಳ ಭರ್ಜರಿ ಜಯವನ್ನು ಸಾಧಿಸುವ ಮೂಲಕ ಸೂಪರ್ 4ಗೆ ಲಗ್ಗೆ ಇಟ್ಟಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಹಾಂಗ್ ಕಾಂಗ್ ಎದುರಾಳಿ ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಜಮಾನ್ ಅವರ ಅರ್ಧಶತಕ ಮತ್ತು ಅಂತಿಮ ಓವರ್‌ನಲ್ಲಿ ಖುಷ್‌ದಿಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪರಿಣಾಮ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿ ಎದುರಾಳಿ ಹಾಂಗ್‌ಕಾಂಗ್ ತಂಡಕ್ಕೆ ಗೆಲ್ಲಲು 194 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.
ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಹಾಂಗ್ ಕಾಂಗ್ ಪಾಕಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿ 38 ರನ್‌ಗಳಿಗೆ ಆಲ್ ಔಟ್ ಆಗಿ ತೀವ್ರ ಮುಖಭಂಗವನ್ನು ಅನುಭವಿಸಿದೆ.

ಪಾಕಿಸ್ತಾನದ ಇನ್ನಿಂಗ್ಸ್
ಪಾಕಿಸ್ತಾನ ತಂಡದ ಪರ ಆರಂಭಿಕರಾಗಿ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಅಜಮ್ ಕಣಕ್ಕಿಳಿದರು. ಈ ಪೈಕಿ ಬಾಬರ್ ಅಜಮ್ 9 ರನ್ ಕಲೆಹಾಕಿ ಔಟ್ ಆದರು. ಹೀಗೆ 2.5 ಓವರ್‌ಗಳಲ್ಲಿ 13 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡಕ್ಕೆ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಜಮಾನ್ ಆಸರೆಯಾದರು. ಎರಡನೇ ವಿಕೆಟ್‌ಗೆ ಜತೆಯಾದ ಈ ಜೋಡಿ 116 ರನ್‌ಗಳ ಜತೆಯಾಟವನ್ನಾಡಿತು. ಫಖರ್ ಜಮಾನ್ 53 ರನ್ ಕಲೆಹಾಕಿದರೆ, ಮೊಹಮ್ಮದ್ ರಿಜ್ವಾನ್ 57 ಎಸೆತಗಳಲ್ಲಿ ಅಜೇಯ 78 ರನ್ ಕಲೆಹಾಕಿದರು. ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಖುಷ್‌ದಿಲ್ ಶಾ 15 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿದರು. ಅದರಲ್ಲಿಯೂ ಅಂತಿಮ ಓವರ್‌ನಲ್ಲಿ 4 ಸಿಕ್ಸರ್ ಚಚ್ಚಿದ ಖುಷ್‌ದಿಲ್ ಶಾ ಪಾಕ್ ದೊಡ್ಡ ರನ್ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಹಾಂಗ್‌ಕಾಂಗ್ ಇನ್ನಿಂಗ್ಸ್
ಪಾಕಿಸ್ತಾನ ನೀಡಿದ್ದ ಕಠಿಣ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಹಾಂಗ್ ಕಾಂಗ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ನಿಜಾಕತ್ ಖಾನ್ 8 ರನ್ ಮತ್ತು ಯಾಸಿಮ್ ಮುರ್ತಾಜಾ 2 ರನ್ ಗಳಿಸಿದರು. ಇನ್ನುಳಿದಂತೆ ಬಾಬರ್ ಹಯಾತ್ ಡಕ್ ಔಟ್, ಕಿಂಚಿತ್ ಶಾ 6 ರನ್, ಅಜಿಯಾಜ್ ಖಾನ್ 1 ರನ್, ಸ್ಕಾಟ್ ಮೆಕೆಚ್ನಿ 4 ರನ್, ಜೀಶನ್ ಅಲಿ 3 ರನ್, ಹರೂನ್ ಅರ್ಷದ್ 3 ರನ್, ಆಯುಷ್ ಶುಕ್ಲಾ 1 ರನ್, ಮೊಹಮ್ಮದ್ ಗಜನ್ಫರ್ ಡಕ್ ಔಟ್ ಹಾಗೂ ಇಶಾನ್ ಖಾನ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಹೀಗೆ ಹಾಂಗ್ ಕಾಂಗ್ ತಂಡದ ಪರ ಯಾವುದೇ ಆಟಗಾರ ಕೂಡ ಎರಡಂಕಿ ರನ್ ಕೂಡ ಮುಟ್ಟಲಾಗದೇ ಪಾಕ್ ತಂಡದ ಬೌಲರ್‌ಗಳ ಎದುರು ಮಂಕಾದರು. ಇನ್ನು ಹಾಂಗ್ ಕಾಂಗ್ ತಂಡದ ಈ 38 ರನ್‌ಗಳಲ್ಲಿ 10 ರನ್ ಇತರೆ ರನ್‌ಗಳಾಗಿವೆ.
ಪಾಕಿಸ್ತಾನದ ಪರ ಶದಬ್ ಖಾನ್ 4 ವಿಕೆಟ್ ಪಡೆದರೆ, ಮೊಹಮ್ಮದ್ ನವಾಜ್ 3 ವಿಕೆಟ್, ನಸೀಮ್ ಶಾ 2 ವಿಕೆಟ್ ಮತ್ತು ಶಹ್ನವಾಜ್ ದಹನಿ ಒಂದು ವಿಕೆಟ್ ಪಡೆದರು.

ಆಡುವ ಬಳಗಗಳು
ಪಾಕಿಸ್ತಾನ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ ( ವಿಕೆಟ್ ಕೀಪರ್ ), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ನಸೀಮ್ ಶಾ ಮತ್ತು ಶಾನವಾಜ್ ಧಹನಿ
ಬೆಂಚ್ ಉಸ್ಮಾನ್ ಖಾದಿರ್, ಹಸನ್ ಅಲಿ, ಹಸನ್ ಅಲಿ, ಹಸ್ನಾನ್,
ಹಾಂಗ್ ಕಾಂಗ್ ಆಡುವ ಬಳಗ: ನಿಜಾಕತ್ ಖಾನ್ (ನಾಯಕ), ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಜೀಶನ್ ಅಲಿ, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಹರೂನ್ ಅರ್ಷದ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ ಮತ್ತು ಮೊಹಮ್ಮದ್ ಘಜನ್ಫರ್
ಬೆಂಚ್ ವಾಜಿದ್ ಶಾ, ಅಫ್ತಾಬ್ ಹುಸೇನ್, ಅಫ್ತಾಬ್ ಹುಸೇನ್ ತ್ರಿವೇದಿ, ಅತೀಕ್ ಇಕ್ಬಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications