ಏಷ್ಯಾಕಪ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದವರು: ಶ್ರೀಲಂಕಾ ಆಟಗಾರರ ದರ್ಬಾರ್; ಒಬ್ಬನೇ ಭಾರತೀಯ!

ಇದೇ ತಿಂಗಳ 27ರಿಂದ ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಈ ಟೂರ್ನಿ ಕಾರಣಾಂತರಗಳಿಂದ ಯುಎಇಗೆ ಸ್ಥಳಾಂತರಿಸಲಾಗಿದೆ. ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಪ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಒಂದು ಕ್ವಾಲಿಫೈಡ್ ತಂಡ ಭಾಗವಹಿಸಲಿದ್ದು ಟ್ರೋಫಿಗಾಗಿ ಆರು ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಕಳೆದ ಬಾರಿಯ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ ಈ ಬಾರಿಯೂ ಸಹ ಚಾಂಪಿಯನ್ ಆಗಿ ಹೊರಹೊಮ್ಮುವತ್ತ ಕಣ್ಣಿಟ್ಟಿದ್ದು, ಉತ್ತಮ ಆಟಗಾರರನ್ನೊಳಗೊಂಡಿರುವ ಪಾಕಿಸ್ತಾನ ಕೂಡ ಟ್ರೋಫಿ ಎತ್ತಿಹಿಡಿಯುವ ಯೋಜನೆಯಲ್ಲಿದೆ.
2014ರವರೆಗೂ ಏಕದಿನ ಮಾದರಿಯಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿ ಮೊಟ್ಟ ಮೊದಲ ಬಾರಿಗೆ 2016ರಲ್ಲಿ ಟಿ ಟ್ವೆಂಟಿ ಮಾದರಿಯಲ್ಲಿ ನಡೆದಿತ್ತು. ಹೌದು, 2015ರಲ್ಲಿ ಏಷ್ಯಾಕಪ್ ಕೌನ್ಸಿಲ್ ವಿಶೇಷ ಸಭೆ ನಡೆಸಿ ಮುಂಬರುವ ಏಷ್ಯಾಕಪ್ ಟೂರ್ನಿಗಳನ್ನು ಒಂದು ಆವೃತ್ತಿಯನ್ನು ಟಿ ಟ್ವೆಂಟಿ ಮಾದರಿಯಲ್ಲಿ ಹಾಗೂ ಒಂದು ಆವೃತ್ತಿ ಏಕದಿನ ಮಾದರಿಯಲ್ಲಿ ನಡೆಸಲು ತೀರ್ಮಾನಿಸಿತು. ಅದರಂತೆ 2016ರಲ್ಲಿ ಟಿ ಟ್ವೆಂಟಿ ಮಾದರಿಯಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿ 2018ರಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ನಡೆದಿತ್ತು. ಹೀಗಾಗಿ ಈ ಬಾರಿಯ ಏಷ್ಯಾಕಪ್ ಟೂರ್ನಿ ಯೋಜನೆಯಂತೆ ಟಿ ಟ್ವೆಂಟಿ ಮಾದರಿಯಲ್ಲಿ ನಡೆಯಲಿದ್ದು, ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕೂಡ ಇರುವುದರಿಂದ ಈ ಏಷ್ಯಾಕಪ್ ಮಿನಿ ವಿಶ್ವಕಪ್ ಎಂದೇ ಬಿಂಬಿತವಾಗುತ್ತಿದೆ.
ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಇರುವುದರಿಂದ ಹೆಚ್ಚೇನೂ ಶತಕಗಳು ದಾಖಲಾಗುವುದಿಲ್ಲ ಎನ್ನಬಹುದು. ಆದರೆ ಈ ಹಿಂದೆ ಏಕದಿನ ಮಾದರಿಯಲ್ಲಿ ಏಷ್ಯಾಕಪ್ ನಡೆದಾಗ ವಿವಿಧ ತಂಡಗಳ ಹಲವು ಆಟಗಾರರು ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದು ಶತಕ ಬಾರಿಸಿದ ಆಟಗಾರರ ಪೈಕಿ ಶ್ರೀಲಂಕಾ ಆಟಗಾರರ ಸಿಂಹಪಾಲನ್ನು ಹೊಂದಿದ್ದಾರೆ ಎನ್ನಬಹುದು. ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

ಅತಿಹೆಚ್ಚು ಶತಕ ಬಾರಿಸಿದ ಆಟಗಾರರು
1984ರಿಂದ ನಡೆಯುತ್ತಾ ಬಂದಿರುವ ಏಷ್ಯಾಕಪ್ ಟೂರ್ನಿಗಳಲ್ಲಿ ಇಲ್ಲಿಯವರೆಗೂ ಅತಿಹೆಚ್ಚು ಬಾರಿ ಶತಕ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಕೆಳಕಂಡಂತಿದೆ.
1. 24 ಏಷ್ಯಾಕಪ್ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಶ್ರೀಲಂಕಾ ತಂಡದ ಸನತ್ ಜಯಸೂರ್ಯ ಒಟ್ಟು 6 ಶತಕಗಳನ್ನು ಬಾರಿಸಿದ್ದು, ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಜಯಸೂರ್ಯ ಏಷ್ಯಾಕಪ್‌ನಲ್ಲಿ ಗಳಿಸಿರುವ ಗರಿಷ್ಠ ರನ್ 130 ಆಗಿದೆ.
2. ಒಟ್ಟು 23 ಏಷ್ಯಾಕಪ್ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಶ್ರೀಲಂಕಾ ತಂಡದ ಕುಮಾರ್ ಸಂಗಕ್ಕಾರ ಒಟ್ಟು 4 ಶತಕಗಳನ್ನು ಬಾರಿಸಿದ್ದು, ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ ಗಳಿಸಿರುವ ಗರಿಷ್ಠ ಏಷ್ಯಾಕಪ್ ರನ್ 121 ಆಗಿದೆ.
3. ಒಟ್ಟು 14 ಏಷ್ಯಾಕಪ್ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ ಒಟ್ಟು 3 ಶತಕಗಳನ್ನು ಬಾರಿಸಿದ್ದು, ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಗಳಿಸಿರುವ ಗರಿಷ್ಠ ರನ್ 183 ಆಗಿದೆ.
4. ಒಟ್ಟು 19 ಏಷ್ಯಾಕಪ್ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಪಾಕಿಸ್ತಾನದ ಶೊಯೆಬ್ ಮಲಿಕ್ 3 ಶತಕಗಳನ್ನು ಬಾರಿಸಿದ್ದು, ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಶೊಯೆಬ್ ಮಲಿಕ್ ಏಷ್ಯಾಕಪ್‌ನಲ್ಲಿ ಗಳಿಸಿರುವ ಗರಿಷ್ಠ ರನ್ 143 ಆಗಿದೆ.
5. ಒಟ್ಟು 8 ಏಷ್ಯಾಕಪ್ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಶ್ರೀಲಂಕಾದ ತಿರಿಮನ್ನೆ 2 ಶತಕಗಳನ್ನು ಬಾರಿಸಿದ್ದು, ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ತಿರಿಮನ್ನೆ ಏಷ್ಯಾಕಪ್‌ನಲ್ಲಿ ಗಳಿಸಿರುವ ಗರಿಷ್ಠ ರನ್ 102 ಆಗಿದೆ.
ಈ ಮೂಲಕ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗರಾದ ಸನತ್ ಜಯಸೂರ್ಯ ಹಾಗೂ ಕುಮಾರ್ ಸಂಗಕ್ಕಾರ ಏಷ್ಯಾಕಪ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರಲ್ಲಿ ಅಗ್ರಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಈ ಟಾಪ್ ಐದರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ.

ಒಟ್ಟಾರೆ ಏಕದಿನ ಶತಕ
1984ರಿಂದ 2018ರವರೆಗೆ ನಡೆದಿರುವ ಏಷ್ಯಾಕಪ್ ಏಕದಿನ ಟೂರ್ನಿಗಳಲ್ಲಿ ಒಟ್ಟು 52 ಶತಕಗಳು ದಾಖಲಾಗಿದ್ದು, ಕಳೆದ ಬಾರಿ ( 2018 ) ಐದು ಶತಕಗಳು ದಾಖಲಾಗಿದ್ದವು. ಕಳೆದ ಆವೃತ್ತಿಯಲ್ಲಿ ದಾಖಲಾಗಿದ್ದ ಐದು ಶತಕಗಳ ಪೈಕಿ ಭಾರತದ ಶಿಖರ್ ಧವನ್ ಎರಡು ಶತಕ ಬಾರಿಸಿದರೆ, ರೋಹಿತ್ ಶರ್ಮಾ, ಮುಷ್ಪಿಕರ್ ರಹಮಾನ್ ಹಾಗೂ ಲಿಟನ್ ದಾಸ್ ತಲಾ ಒಂದೊಂದು ಶತಕ ಬಾರಿಸಿದ್ದರು.

ಟಿ ಟ್ವೆಂಟಿ ಮಾದರಿಯಲ್ಲಿ ಶತಕ ಬಾರಿಸಿದ್ದು ಓರ್ವ ಮಾತ್ರ
ಇನ್ನು ಟಿ ಟ್ವೆಂಟಿ ಮಾದರಿಯಲ್ಲಿ ಏಷ್ಯಾಕಪ್ ಕೇವಲ ಒಂದು ಆವೃತ್ತಿಯಲ್ಲಿ ಮಾತ್ರ ನಡೆದಿದ್ದು, ಹಾಂಗ್‌ಕಾಂಗ್‌ನ ಬಾಬರ್ ಹಯಾತ್ 2016ರಲ್ಲಿ 60 ಎಸೆತಗಳಿಗೆ 122 ರನ್ ಚಚ್ಚಿದ್ದರು. ಇದು ಏಷ್ಯಾಕಪ್ ಟಿ ಟ್ವೆಂಟಿ ಮಾದರಿಯಲ್ಲಿ ದಾಖಲಾದ ಏಕೈಕ ಶತಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications