ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಎರಡು ಬಲಿಷ್ಠ ತಂಡಗಳ ಮಧ್ಯೆ ಈಗ ಪೈಪೋಟಿ ಏರ್ಪಟ್ಟಿದೆ. ಭಾರತ ತಂಡ ಸೂಪರ್ 4 ಹಂತದಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಗೆದ್ದು ಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು ಉಳಿದ ಒಂದು ಸ್ಥಾನಕ್ಕಾಗಿ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ಪೈಪೋಟಿ ಏರ್ಪಟ್ಟಿದೆ. ಇಂದು ಈ ಎರಡು ತಂಡಗಳು ಮುಖಾಮುಖಿಯಾಗುತ್ತಿರುವ ಕಾರಣ ಈ ಪಂದ್ಯದ ಫಲಿತಾಂಶ ಈ ಪ್ರಶ್ನೆಗೆ ಸ್ಪಷ್ಟ ಉತ್ತರವನ್ನು ನೀಡಲಿದೆ.
ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿದ್ದರೂ ಭಾರತದ ವಿರುದ್ಧ ಭಾರೀ ಅಂತರದಿಂದ ಸೋಲು ಕಂಡಿದೆ. ಇತ್ತ ಶ್ರೀಲಂಕಾ ತಂಡದ ಫಲಿತಾಂಶ ಕೂಡ ಇದೇ ಈತಿಯಾಗಿದೆ. ಸೂಪರ್ 4 ಹಂತದಲ್ಲಿ ಮೊದಲಿಗೆ ಬಾಂಗ್ಲಾದೇಶದ ವರುದ್ಧ ಆಡಿ ಗೆಲುವು ಸಾಧಿಸಿದ್ದು ನಂತರ ಭಾರತದ ವಿರುದ್ಧ ಸೋಲು ಅನುಭವಿಸಿತ್ತು. ಹೀಗಾಗಿ ಸಮಾನ ಅಂಕಗಳನ್ನು ಹೊಂದಿರುವ ಈ ಎರಡು ತಂಡಗಳ ಮಧ್ಯೆ ಈಗ ನೇರ ಹಣಾಹಣಿ ಏರ್ಪಟ್ಟಿದೆ.

ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುವ ತಂಡವನ್ನು ನಿರ್ಧರಿಸುವ ಪಂದ್ಯ ಇದಾಗಿರುವ ಕಾರಣದಿಂದಾಗಿ ಶ್ರೀಲಂಕಾ ಹಾಗೂ ಪಾಕಿಸ್ತಾನದ ವಿರುದ್ಧ ನಡೆಯಲಿರುವ ಇಂದಿನ ಪಂದ್ಯಕ್ಕೆ ಸೆಮಿಫೈನಲ್‌ನ ಪ್ರಮುಖ್ಯತೆ ದೊರೆತಿದೆ. ಇಲ್ಲಿ ಸೋತ ತಂಡ ಇಲ್ಲಿಗೆ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದ್ದು ಗೆದ್ದ ತಂಡ ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಭಾರತದ ವಿರುದ್ಧ ಹೋರಾಡಲಿದೆ.
ಇನ್ನು ಈ ಎರಡು ಪಂದ್ಯಗಳನ್ನು ಹೋಲಿಸಿದರೆ ಪಾಕಿಸ್ತಾನ ಬಲಿಷ್ಠವಾಗಿರುವಂತೆ ಕಾಣಿಸಿದ್ದರೂ ಈ ಹಂತದಲಿ ಶ್ರೀಲಂಕಾ ತಂಡಕ್ಕೆ ಮೇಲುಗೈ ಇರುವಂತೆ ಭಾಸವಾಗುತ್ತಿದೆ. ಇದಕ್ಕೆ ಮುಖ್ಯವಾಗಿ ಈ ಪಂದ್ಯ ಶ್ರೀಲಂಕಾದ ತವರಿನಲ್ಲಿ ನಡೆಯುತ್ತಿರುವುದು ಕಾರಣವಾಗಿದೆ. ಅಲ್ಲದೆ ಕೊಲಂಬೋದಲ್ಲಿ ಈ ಪಂದ್ಯ ನಡೆಯುತ್ತಿರುವ ಕಾರಣ ಶ್ರೀಲಂಕಾದ ವಿಶ್ವದರ್ಜೆಯ ಸ್ಪಿನ್ನರ್‌ಗಳು ಪಾಕಿಸ್ತಾನದ ದಾಂಡಿಗರನ್ನು ಕಾಡುವ ಸಾಧ್ಯತೆ ಹೆಚ್ಚಿದೆ.
ಇನ್ನು ಶ್ರೀಲಂಕಾ ವಿರುದ್ಧದ ಈ ನಿರ್ಣಾಯಕ ಪಂದ್ಯಕ್ಕೆ ಮುನ್ನ ಪಾಕಿಸ್ತಾನ ತಂಡ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ತಂಡದ ಇಬ್ಬರು ಪ್ರಮುಖ ವೇಗದ ಬೌಲರ್‌ಗಳು ಈ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದಾರೆ. ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಗಾಯಕ್ಕೆ ತುತ್ತಾಗಿರುವ ಕಾರಣ ಹೊರಬಿದ್ದಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಅನುಭವಿಸಿದ ಭಾರೀ ಸೋಲು ಕೂಡ ಪಾಕಿಸ್ತಾನ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಏಟು ನೀಡಿರುವುದರಲ್ಲಿ ಅನುಮಾನವಿಲ್ಲ.
ಇನ್ನು ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಈ ಪಂದ್ಯಕ್ಕೂ ಮಳೆಯ ಆತಂಕ ಇದ್ದೇ ಇದೆ. ಪಂದ್ಯದ ಮಧ್ಯೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆಯಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಪಂದ್ಯವನ್ನು ಮಳೆ ಆಹುತಿ ಪಡೆದುಕೊಳ್ಳುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ. ಹೀಗಾಗಿ ಫಲಿತಾಂಶವನ್ನು ಅಭಿಮಾನಿಗಳು ಇಲ್ಲಿ ನಿರೀಕ್ಷಿಸಬಹುದು. ಹಾಗಿದ್ದರೂ ಮಳೆ ಪಂದ್ಯವನ್ನು ಆಹುತಿ ಪಡೆದುಕೊಂಡರೆ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ ಎನ್ನುವುದು ಗಮನಾರ್ಹ. ಎರಡು ತಂಡಗಳು ಅಂಕಗಳನ್ನು ಹಂಚಿಕೊಳ್ಳಲಿದ್ದು ನೆಟ್‌ರನ್‌ರೇಟ್‌ನಲ್ಲಿ ಪಾಕಿಸ್ತಾನಕ್ಕಿಂತ ಮುಂದಿರುವ ಶ್ರೀಲಂಕಾ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ.
ಪಾಕಿಸ್ತಾನದ ಆಡುವ ಬಳಗ: ಮೊಹಮ್ಮದ್ ಹ್ಯಾರಿಸ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶದಬ್ ಖಾನ್ (ಉಪನಾಯಕ) , ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಜಮಾನ್ ಖಾನ್.
ಶ್ರೀಲಂಕಾ ಸಂಭಾವ್ಯ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನ, ಕುಸಲ್ ಪೆರೇರ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಗೆ, ಮಹೇಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ