ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಗ್ರೂಪ್ ಹಂತದ ಎರಡು ಪಂದ್ಯಗಳು ಕೂಡ ಮುಕ್ತಾಯವ ಆಗಿದ್ದು ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿದೆ. ಗ್ರೂಪ್ ಹಂತದ ಎರಡು ಪಂದ್ಯಗಳಿಗೂ ಮಳೆ ಅಡ್ಡುಯಾಗಿದ್ದು ಅಭಿಮಾನಿಗಳು ಬಹುತೇಕ ನಿರಾಸೆ ಅನುಭವಿಸಿದ್ದಾರೆ. ಆದರೆ ಸೂಪರ್ 4 ಹಂತದಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿಯಾಗುತ್ತಿರುವುದು ರೋಚಕತೆ ಹೆಚ್ಚಿಸಿದೆ.
ಗ್ರೂಪ್ ಹಂತದ ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧವೇ ಆಡಿದ್ದರೂ ಕೇವಲ ಒಂದು ಇನ್ನಿಂಗ್ಸ್ ಆಡಲು ಮಾತ್ರವೇ ಸಾಧ್ಯವಾಗಿತ್ತು. ಭಾರತ ಬ್ಯಾಟಿಂಗ್ ನಡೆಸಿದ ಬಳಿಕ ಮಳೆ ಸುರಿಯಲು ಆರಂಬವಾದ ಕಾರಣ ಪಾಕಿಸ್ತಾನದ ಬ್ಯಾಟಿಂಗ್‌ಗೆ ಅವಕಾಶವೇ ದೊರೆಯಲಿಲ್ಲ. ಹೀಗಾಗಿ ಫಲಿತಾಂಶವಿಲ್ಲದೆ ಪಂದ್ಯ ರದ್ದಾಗಿತ್ತು. ಹೀಗಾಗಿ ಈ ಹೈವೋಲ್ಟೇಜ್ ಪಂದ್ಯದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿಟ್ಟುಕೊಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿತ್ತು.

ಇದೀಗ ಸೂಪರ್ 4 ಹಂತದಲ್ಲಿ ಈ ಎರಡು ಬದ್ಧಬೈರಿಗಳು ಮತ್ತೊಮ್ಮೆ ಮುಖಾಮುಖಿಯಾಗುವ ಸಂದರ್ಭ ಹತ್ತಿರವಾಗಿದೆ. ಸೂಪರ್ 4 ಹಂತದಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧವೇ ಆಡುವ ಮೂಲಕ ಮುಂದಿನ ಹಂತದ ಅಭಿಯಾನ ಆರಂಭಿಸಲಿದೆ. ಹಾಗಾದರೆ ಪಾಕಿಸ್ತಾನ ತಂಡವನ್ನು ಭಾರತ ಎದುರಿಸುವುದು ಯಾವಾಗ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಮುಂದಿನ ಭಾನುವಾರ ಮುಖಾಮುಖಿಯಾಗಲಿದೆ. ಕೊಲಂಬೋದ ಪ್ರೇಮದಾಸ ಕ್ರಿಡಾಂಗಣದಲ್ಲಿ ಈ ಪಂದ್ಯ ನಿಗದಿಯಾಗಿದ್ದರೂ ಮಳೆಯ ಕಾರಣದಿಂದಾಗಿ ಈ ಪಂದ್ಯ ಸ್ಥಳಾಂತರವಾಗುವ ನಿರೀಕ್ಷೆಯಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಲಿದೆ. ಭಾರತ ಹಾಗೂ ಪಾಕಿಸ್ತಾನ ಎರಡು ತಮಡಗಳು ಕೂಡ ನೇಪಾಳದ ವಿರುದ್ಧ ಗೆಲುವು ಸಾಧಿಸಿದೆ. ಆದರೆ ಪರಸ್ಪರ ಮುಖಾಮುಖಿಯಾಗಿದ್ದ ಪಂದ್ಯ ಮಳೆಗೆ ಆಹುತಿಯಾದ ಕಾರಣ ನಿರಾಸೆ ಮೂಡಿಸಿತ್ತು.
ಇನ್ನು ಪಾಕಿಸ್ತಾನದ ವಿರುದ್ಧದ ಸೂಪರ್ 4 ಹಂತದ ಪಂದ್ಯಕ್ಕೆ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಆಡುವ ಬಳಗದ ಆಯ್ಕೆಗೆ ಲಭ್ಯವಿರಲಿದ್ದಾರೆ. ಕೆಎಲ್ ರಾಹುಲ್ ಗಾಯದ ಕಾರಣದಿಂದಾಗಿ ಗ್ರೂಪ್ ಹಂತದ ಎರಡು ಪಂದ್ಯಗಳಿಗೂ ಅಲಭ್ಯವಾಗಿದ್ದರು. ಆದರೆ ಇದೀಗ ಅವರು ಆಡಲು ಸಿದ್ಧವಾಗಿದ್ದಾರೆ. ಇತ್ತ ಜಸ್ಪ್ರೀತ್ ಬೂಮ್ರಾ ತಮ್ಮ ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ಪಾಕಿಸ್ಥಾನ ವಿರುದ್ಧದ ಪಂದ್ಯದ ಬಳಿಕ ತವರಿಗೆ ಮರಳಿದ್ದರು. ನೇಪಾಳ ಪಂದ್ಯಕ್ಕೆ ಅಲಭ್ಯವಾಗಿದ್ದ ಅವರು ಸೂಪರ್ 4 ಪಂದ್ಯದ ವೇಳೆಗೆ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಇನ್ನು ಪಾಕಿಸ್ತಾನದ ವಿರುದ್ಧ ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದಾಗ ಬ್ಯಾಟಿಂಗ್ ವಿಭಾಗಕ್ಕೆ ಪೂರ್ಣ ಪ್ರಮಾಣದಲ್ಲಿ ಅವಕಾಶ ದೊರೆತಿದ್ದು ಸಮಾಧಾನಕರ ಅಂಶ. ಆದರೆ ಈ ಸಂದರ್ಭದಲ್ಲಿ ಭಾರತದ ಅಗ್ರಕ್ರಮಾಂಕ ನೀಡಿದ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಅದರಲ್ಲೂ ತಂಡದ ಮೊತ್ತ 64 ರನ್‌ಗಳಾಗುವಷ್ಟರಲ್ಲಿ ತಂಡ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ನಂತರ ತಂಡಕ್ಕೆ ಚೇತರಿಕೆ ನೀಡಿದ್ದು ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ. ಈ ಇಬ್ಬರು ಆಟಗಾರರ ಅದ್ಭುತ ಜೊತೆಯಾಟ ತಂಡ ಗೌರವಯುತ ಮೊತ್ತ ಪೇರಿಸಲು ಕಾರಣವಾದರು.
ಇತ್ತ ನೇಪಾಳ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದ್ದು ತಂಡದ ಫೀಲ್ಡಿಂಗ್. ಮೊದಲ ಐದು ಓವರ್‌ಗಳ ಮುಕ್ತಾಯದಲ್ಲಿ ಭಾರತ ತಂಡದ ಫೀಲ್ಡರ್‌ಗಳು ನೇಪಾಳದ ಮೂರು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ್ದರು. ತೀರಾ ಸಾಧಾರಣ ಕ್ಯಾಚ್‌ಗಳನ್ನು ಭಾರತೀಯ ಫೀಲ್ಡರ್‌ಗಳು ನೆಲಕ್ಕೆ ಬಿಟ್ಟ ರೀತಿ ಕಳವಳಕ್ಕೆ ಕಾರಣವಾಗಿದೆ. ಅಲ್ಲದೆ ರನ್ ತಡೆಗಟ್ಟುವ ವಿಚಾರದಲ್ಲಿಯೂ ಭಾರತದ ಫೀಲ್ಡಿಂಗ್ ವಿಭಾಗ ನಿರಾಸೆ ಮೂಡಿಸಿದೆ. ಇನ್ನು ಬೌಲಿಂಗ್ ವಿಭಾಗದ ಪ್ರದರ್ಶನ ಕೂಡ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ ಎನ್ನುವುದನ್ನು ಕೂಡ ಒಪ್ಪಿಕೊಳ್ಳಬೇಕಿದ್ದು ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಇದೆಲ್ಲವನ್ನೂ ಸರಿಪಡಿಸಿಕೊಳ್ಳುವ ಅಗತ್ಯವಿದೆ.